ADVERTISEMENT

ಬರ ನಿರ್ವಹಣೆ ಉತ್ತಮ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:15 IST
Last Updated 17 ಏಪ್ರಿಲ್ 2012, 19:15 IST

ಬೆಂಗಳೂರು:   `ರಾಜ್ಯದಲ್ಲಿ ಬರ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಉತ್ತಮ ಕೆಲಸ ಮಾಡುತ್ತಿದ್ದಾರೆ~ ಎಂದು ಆದಿಚುಂಚನಗಿರಿ ಮಠದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಶ್ಲಾಘಿಸಿದರು.

ರಾಜ್ಯ ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಇತ್ತೀಚೆಗೆ ನಡೆದ 12ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

`ಬರ ನಿರ್ವಹಣೆ, ಬಡತನ ನಿರ್ಮೂಲನೆಯಲ್ಲಿ ಉತ್ತಮವಾಗಿ ಕೆಲಸ ಮಾಡಿ ಎಂದು ಸೂಚಿಸಿದ್ದೆ. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.

ರಾಜಕೀಯದಲ್ಲಿ ಉತ್ತಮ ಕೆಲಸ ಮಾಡುವವರ ಕಾಲು ಎಳೆಯುವುದು ಸಾಮಾನ್ಯ. ಅಧಿಕಾರ ಸಿಕ್ಕಾಗ ಸದಾನಂದ ಗೌಡರಂತೆ ಕಾರ್ಯ ನಿರ್ವಹಿಸಬೇಕು. ಈ ವಿಚಾರದಲ್ಲಿ ಯಾರನ್ನೂ ಹಂಗಿಸುವುದಿಲ್ಲ~ ಎಂದರು.

ಈ ಸಂದರ್ಭ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಕೆ. ನಾರಾಯಣ ಗೌಡ ಅವರಿಗೆ `ಕೃಷಿ ಬ್ರಹ್ಮ ಪ್ರಶಸ್ತಿ~, ಕೃಷಿ ಸಂಶೋಧನೆಯಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ.ಕೆ.ಜೆ. ಸೌಮ್ಯ ಅವರಿಗೆ `ಕೃಷಿ ತಜ್ಞೆ ಪ್ರಶಸ್ತಿ~ ಪ್ರದಾನ ಮಾಡಲಾಯಿತು.

ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದ ಎನ್. ಪ್ರಕಾಶ್, ವಿ.ಶ್ರೀರಾಮ ರೆಡ್ಡಿ ಅವರನ್ನು ಅಭಿನಂದಿಸಲಾಯಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಡಾ.ಎಂ.ವಿ. ರಾಜೀವ್ ಗೌಡ, ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಕೆ.ಬಿ. ಶೆಟ್ಟಿ, ಕ್ಯಾಪ್ಟನ್ ಎಂ.ಎ. ಅಯ್ಯಪ್ಪ, ಎನ್.ಕೆ. ಲಕ್ಷ್ಮೀಸಾಗರ್, ಎಚ್. ಭಾಗ್ಯಲಕ್ಷ್ಮಿ, ಬಿ. ಮಹೇಂದ್ರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಪತ್ನಿ ಡಾಟಿ, ಕರ್ನಾಟಕ ಗಾಂಧಿ ಸ್ಮಾರಕ ಭವನದ ಅಧ್ಯಕ್ಷ ಡಾ.ಹೊ. ಶ್ರೀನಿವಾಸಯ್ಯ, ಮಹಾರಾಷ್ಟ್ರ ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೆ. ರಾಜೇಗೌಡ, ತಮಿಳುನಾಡು ಒಕ್ಕಲಿಗರ ಗೌಡ ಸಮಾಜದ ಅಧ್ಯಕ್ಷ ವೆಲನ್‌ಗಿರಿ, ಉತ್ತರ ಕರ್ನಾಟಕದ ಕುಡು ಒಕ್ಕಲಿಗರ ಸಮಾಜದ ಅಧ್ಯಕ್ಷ ಒ.ಎಸ್. ಬಿರಾದಾರ್, ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಚಂದ್ರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.