ADVERTISEMENT

ಬಸವನಪುರ: ತೆರೆದ ಗುಂಡಿ–ಪ್ರಯಾಣ ದುಸ್ತರ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:38 IST
Last Updated 10 ಸೆಪ್ಟೆಂಬರ್ 2013, 19:38 IST

ಕೃಷ್ಣರಾಜಪುರ: ಕೃಷ್ಣರಾಜಪುರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಬಸವನಪುರ ಮುಖ್ಯರಸ್ತೆ ಕೃಷ್ಣಾ ಚಿತ್ರಮಂದಿರದ ಬಳಿ ಕಾವೇರಿ ಕುಡಿಯುವ ನೀರು ಕೊಳವೆ ಅಳವಡಿಕೆಗೆ ಅಗೆದ ಗುಂಡಿಯನ್ನು ಇನ್ನೂ ಮುಚ್ಚಿಲ್ಲ. ಇದರಿಂದಾಗಿ ಇಕ್ಕಟ್ಟಾದ ರಸ್ತೆಯಲ್ಲಿ ಸಂಚಾರ ದುಸ್ತರ ಎನಿಸಿದೆ.

‘ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಸಂಚಾರ ಓಡಾಟ ಅಧಿಕ. ಪಾದಚಾರಿ ಮಾರ್ಗವೂ  ಒತ್ತುವರಿಯಾಗಿದೆ. ರಸ್ತೆಗಳ ಮಧ್ಯೆ ಹೊಂಡಗಳಿದ್ದು ವೃದ್ಧರು ಪಡಿಪಾಟಲು ಪಡಬೇಕಿದೆ’ ಎಂದು ನಿವಾಸಿ ಅಂಜಿನಾಯಕ್ ದೂರಿದರು. ‘ರಸ್ತೆಯ ವಿಸ್ತರಣೆ ಕಾರ್ಯ ನಡೆದಿಲ್ಲ. ಹೊಂಡಗಳಿದ್ದು ತಿರುವು ಪಡೆಯುವ ಸಂದರ್ಭದಲ್ಲಿ ವಾಹನ ತಳ್ಳುಬಂಡಿ ವ್ಯಾಪಾರಿಗಳನ್ನು ಸವರಿಕೊಂಡು ಹೋಗುತ್ತವೆ. ರಸ್ತೆಯ ಅವ್ಯವಸ್ಥೆಯಿಂದ ವ್ಯಾಪಾರ ಕುಂಠಿತಗೊಂಡು ಬಿಬಿಎಂಪಿಯಿಂದ  ಪಡೆದ ತಳ್ಳುಬಂಡಿಯನ್ನು ಮಾರುವ ಸ್ಥಿತಿ ಬಂದಿದೆ’ ಎಂದು ಅಲುಮೇಲಮ್ಮ ಬೇಸರ ವ್ಯಕ್ತಪಡಿಸಿದರು.

ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ ಪ್ರತಿಕ್ರಿಯಿಸಿ, ‘ಕಾವೇರಿ ಕುಡಿಯುವ ನೀರಿನ ಪೂರೈಕೆಗೆ ಕೊಳವೆ ಅಳವಡಿಕೆ ಮಾರ್ಗಕ್ಕಾಗಿ ರಸ್ತೆಯನ್ನು ಅಗೆಯಲಾಗಿತ್ತು.  ಜಲಮಂಡಳಿ ಅಧಿಕಾರಿಗಳು ಮತ್ತು ಖಾಸಗಿಯವರು ಪರಸ್ಪರ  ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಹೀಗಾಗಿ ಗುಂಡಿಗಳು ಹಾಗೆಯೇ ಉಳಿದಿವೆ’ ಎಂದರು.

‘ಶಾಸಕರ ರೂ ಕೋಟಿ ಅನುದಾನದಲ್ಲಿ ಬಿಬಿಎಂಪಿ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳ ಲಾಗಿತ್ತು. ₨50 ಲಕ್ಷ ವೆಚ್ಚದ ಕಾಮಗಾರಿಗಳು ನಡೆದಿವೆ. ಉಳಿದ ₨50ಲಕ್ಷ ವೆಚ್ಚದ ಕಾಮಗಾರಿಗಳ  ಮಂಜೂರಾತಿಯನ್ನು ಬಿಬಿಎಂಪಿ ರದ್ದುಗೊಳಿಸಿದೆ. ವಾರ್ಡ್‌ಗಳ ಸಮಸ್ಯೆ ನಿವಾರಿಸಲು ಬಿಬಿಎಂಪಿ, ಜಲಮಂಡಳಿ, ಇತರೆ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.