ADVERTISEMENT

ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ ಧೂಮಪಾನ ನಿಷೇಧಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 20:18 IST
Last Updated 23 ಡಿಸೆಂಬರ್ 2013, 20:18 IST

ಬೆಂಗಳೂರು : ‘ಬಸ್  ನಿಲ್ದಾಣದಿಂದ 100 ಮೀಟರ್‌ ಅಂತರದೊಳಗೆ ತಂಬಾಕು ಸೇವನೆ ಹಾಗೂ ಧೂಮಪಾನ ನಿಷೇಧಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ.ಈಶ್ವರಪ್ಪ ಹೇಳಿದರು.

ಸಾರ್ವಜನಿಕ ಆರೋಗ್ಯ ಸಂಸ್ಥೆ, ಕರ್ನಾಟಕ ಪ್ರದೇಶ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಸಂಘ (ಕೆಪಿಎಚ್‌ಆರ್‌ಎ) ಹಾಗೂ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಸಹಯೋಗದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬಸ್ ನಿಲ್ದಾಣದ 100 ಮೀಟರ್‌ ವ್ಯಾಪ್ತಿಯಲ್ಲಿ ಧೂಮಪಾನ ನಿಷೇಧಕ್ಕೆ ಈಗಿನ  ಕಾನೂನಿನಲ್ಲಿ ಅವಕಾಶವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದ ಪರೋಕ್ಷ ಪರಿಣಾಮ­ಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

ತಂಬಾಕು ರಹಿತ ಕರ್ನಾಟಕ ಆಂದೋಲನದ ಸಂಚಾಲಕ ಡಾ.ವಿಶಾಲ್‌ ರಾವ್,  ‘ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚು ಮಂದಿ ಪ್ರತಿನಿತ್ಯ  ಧೂಮಪಾನ ಮಾಡುತ್ತಾರೆ. ಇವರು ಧೂಮಪಾನ ಮಾಡಿ ಬಿಟ್ಟ ಹೊಗೆಯನ್ನು ಅಷ್ಟೇ ಸಂಖ್ಯೆಯ ಜನ ಸೇವನೆ ಮಾಡುತ್ತಾರೆ. ಈ ರೀತಿ ಧೂಮಪಾನದ ದುಷ್ಪರಿಣಾಮಗಳಿಗೆ ಪರೋಕ್ಷವಾಗಿ ತುತ್ತಾಗುವವರ ಸಂಖ್ಯೆಯೂ ಹೆಚ್ಚಾಗಿದೆ’ ಎಂದರು.

‘ಧೂಮಪಾನದಿಂದಾಗುವ ದುಷ್ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟುನಿಟ್ಟಾಗಿ ಧೂಮಪಾನ ನಿಷೇಧಿಸಬೇಕು’ ಎಂದು ಅವರು ಆಗ್ರಹಿಸಿದರು. ಕೆಪಿಎಚ್‌ಆರ್‌ಎ ಅಧ್ಯಕ್ಷ ರಾಮಚಂದ್ರ ಉಪಾಧ್ಯ ಮಾತನಾಡಿ, ‘ಗ್ರಾಹಕರ ಮತ್ತು ನೌಕರರ ಆರೋಗ್ಯ ದೃಷ್ಟಿಯಿಂದ ಸಂಘದ ಹೋಟೆಲ್‌­ಗಳಲ್ಲಿ ಧೂಮಪಾನ ನಿಷೇಧಿಸುವಂತೆ ಸೂಚಿಸಲಾಗಿದೆ’ ಎಂದರು.

ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಹೋಟೆಲ್ ನೌಕರರಲ್ಲಿ ಧೂಮಪಾನದ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.