ADVERTISEMENT

ಬಾಲಕನ ಶವಕ್ಕಾಗಿ ತೀವ್ರ ಶೋಧ

ಕೂಡ್ಲು ಕ್ವಾರಿ ದುರಂತ: ಮುಂದುವರೆದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ಬೆಂಗಳೂರು: ಹೊಸೂರು ರಸ್ತೆಯ ಕೂಡ್ಲು ಗ್ರಾಮದಲ್ಲಿ ಕ್ವಾರಿಯ ನೀರಿನ ಗುಂಡಿಗೆ ಬಿದ್ದು ಸಾವನ್ನಪ್ಪಿದ ಮೂರು ಮಕ್ಕಳ ಪೈಕಿ, ಬಾಲಕ ಲೋಕೇಶ್‌ನ ಶವ ಶನಿವಾರವೂ ಪತ್ತೆಯಾಗಲಿಲ್ಲ.

ಶುಕ್ರವಾರ ಮಧ್ಯಾಹ್ನ ಕ್ವಾರಿಯಲ್ಲಿ ಆಟವಾಡುತ್ತಿದ್ದ ವೇಳೆ ಲೋಕೇಶ್ (14), ಮೇಘ (13) ಮತ್ತು ಐಶ್ವರ್ಯ (13) ಎಂಬ ಮಕ್ಕಳು ನೀರಿಗೆ ಬಿದ್ದಿದ್ದವು. ಈ ವೇಳೆ ಬಾಲಕಿಯರ ಶವವನ್ನು ಸ್ಥಳೀಯರೇ ಹೊರತೆಗೆದರಾದರೂ, ಲೋಕೇಶ್‌ನ ಶವ ಪತ್ತೆಯಾಗಿರಲಿಲ್ಲ. ಬಳಿಕ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಇಲಾಖೆ ಸಿಬ್ಬಂದಿ ಸಂಜೆ 6.30ರವರೆಗೆ ಕಾರ್ಯಾಚರಣೆ ನಡೆಸಿದರೂ ಶವ ಸಿಕ್ಕಿರಲಿಲ್ಲ.

`ಶನಿವಾರ ಬೆಳಿಗ್ಗೆ ಆರು ಗಂಟೆಯಿಂದಲೇ ಗ್ರಾಮಸ್ಥರ ನೆರವು ಪಡೆದು ಶವದ ಹುಡುಕಾಟ ನಡೆಸಿದೆವು. 9 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸಂಜೆವೆರೆಗೂ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಶವ ಹುಡುಕುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ' ಎಂದು ಬಾಲಕನ ಚಿಕ್ಕಪ್ಪ ವೆಂಕಟೇಶ್ ಆರೋಪಿಸಿದರು.

`ಸ್ಕ್ಯಾನರ್ ಕ್ಯಾಮೆರಾವನ್ನು ನೀರಿನಲ್ಲಿ ಬಿಟ್ಟು ಶವದ ಶೋಧ ನಡೆಸುತ್ತಿದ್ದೇವೆ. ಆದರೆ, ನೀರು ಗಲೀಜಾಗಿರುವುದರಿಂದ ಕ್ವಾರಿಯ ಒಳಭಾಗದ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಹೀಗಾಗಿ ಈಜು ತಜ್ಞರನ್ನು ಸ್ಥಳಕ್ಕೆ ಕರೆಸಿ ಹುಡುಕಾಟ ನಡೆಸುತ್ತಿದ್ದೇವೆ' ಎಂದು ಪರಪ್ಪನ ಅಗ್ರಹಾರ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.