ADVERTISEMENT

ಬಾಲಕಿಗೆ ಲೈಂಗಿಕ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 20:12 IST
Last Updated 6 ಡಿಸೆಂಬರ್ 2017, 20:12 IST

ಬೆಂಗಳೂರು: ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ ವಸತಿ ಶಾಲೆಯಲ್ಲಿ 15 ವರ್ಷದ ಬಾಲಕಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ತರಬೇತುದಾರ ಮಂಜುನಾಥ್ (52) ವಿರುದ್ಧ ಚಿಕ್ಕಜಾಲ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.

ಸಂಜಯನಗರ ನಿವಾಸಿಯಾದ ಸಂತ್ರಸ್ತೆ, ವಿದ್ಯಾನಗರ ಕ್ರಾಸ್‌ನಲ್ಲಿರುವ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಎರಡು ವರ್ಷಗಳಿಂದ ಆಕೆ ಡಿಸ್ಕಸ್ ಥ್ರೋನಲ್ಲಿ ತರಬೇತಿ ಪಡೆಯುತ್ತಿದ್ದಳು. ಇತ್ತೀಚೆಗೆ ವಿಶಾಖ ಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲೂ ಪಾಲ್ಗೊಂಡಿದ್ದಳು.

ಮೊದಲು ಕಂಠೀರವ ತರಬೇತಿ ಅಕಾಡೆಮಿಯಲ್ಲಿದ್ದ ಮಂಜುನಾಥ್, ಕೆಲ ದಿನಗಳ ಹಿಂದಷ್ಟೇ ಈ ಶಾಲೆಗೆ ವರ್ಗವಾಗಿದ್ದರು. ‘ಮಂಜುನಾಥ್ ಸರ್ ತರಬೇತಿ ವೇಳೆ ನನ್ನ ಮೈ–ಕೈ ಮುಟ್ಟಿ ಅನುಚಿತವಾಗಿ ವರ್ತಿಸುತ್ತಿದ್ದರು. ಅಲ್ಲದೆ, ವಿಶಾಖಪಟ್ಟಣಕ್ಕೆ ಕರೆದೊಯ್ದಾಗಲೂ ರೈಲಿನಲ್ಲಿ ಅಸಭ್ಯವಾಗಿ ವರ್ತಿಸಿದ್ದರು. ಈ ಸಂಗತಿಯನ್ನು ಅಮ್ಮನ ಬಳಿ ಹೇಳಿದ್ದೆ’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾಳೆ.

ADVERTISEMENT

ಇದರಿಂದ ಕೆರಳಿದ ಪೋಷಕರು, ಮಂಜುನಾಥ್ ವರ್ತನೆಯನ್ನು ಕ್ರೀಡಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಕುರಿತು ಆಂತರಿಕ ತನಿಖೆ ನಡೆಸಿದ ಅಧಿಕಾರಿಗಳು, ಪೊಲೀಸರಿಗೆ ದೂರು ಕೊಡುವಂತೆ ಪೋಷಕರಿಗೆ ಸಲಹೆ ನೀಡಿದ್ದರು. ಅದರಂತೆ, ಪೋಷಕರು ಮಂಗಳವಾರ ಠಾಣೆಯ ಮೆಟ್ಟಿಲೇರಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ (ಪೋಕ್ಸೊ) ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ತರಬೇತಿ ನೀಡುವಾಗ ತಿಳಿಯದೆ ಬಾಲಕಿಯನ್ನು ಸ್ಪರ್ಶಿಸಿರಬಹುದು. ಅದನ್ನೇ ಆಕೆ ತಪ್ಪಾಗಿ ಭಾವಿಸಿರಬಹುದು. ಯಾವ ಕ್ರೀಡಾಪಟುಗಳ ಜತೆಗೂ ನಾನು ಕೆಟ್ಟದಾಗಿ ನಡೆದುಕೊಂಡಿಲ್ಲ’ ಎಂದು ಮಂಜುನಾಥ್ ಇಲಾಖೆಯ ಅಧಿಕಾರಿಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ.

ಮಹಿಳಾ ತರಬೇತುದಾರರ ನೇಮಕ

‘ಬಾಲಕಿ ಪೋಷಕರು ವಾರದ ಹಿಂದೆ ಇಲಾಖೆಗೆ ದೂರು ಕೊಟ್ಟಿದ್ದರು. ಲೈಂಗಿಕ ದೌರ್ಜನ್ಯ ಆರೋಪವಾದ ಕಾರಣ ಪೊಲೀಸರೇ ತನಿಖೆ ನಡೆಸುವುದು ಸೂಕ್ತವೆಂದು ದೂರು ಕೊಡಿಸಿದ್ದೇವೆ. ತರಬೇತುದಾರ ಮಂಜುನಾಥ್ ಅವರನ್ನು ಸದ್ಯ ಧಾರವಾಡದ ತರಬೇತಿ ಕೇಂದ್ರಕ್ಕೆ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಶ್ಯಾಮಲಾ ಪಾಟೀಲ್ ಎಂಬುವರನ್ನು ನೇಮಿಸಿದ್ದೇವೆ’ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಅನುಪ‍ಮ್ ಅಗರ್‌ವಾಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.