ADVERTISEMENT

ಬಿಎಂಟಿಸಿ: ವಾರ್ಷಿಕ ನಷ್ಟ ರೂ. 229.76 ಕೋಟಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST
ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆಯನ್ನು ಖಂಡಿಸಿ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಸದಸ್ಯರು ಕಪ್ಪು ಉಡುಪು ಧರಿಸಿ ನಗರದ ಶಾಂತಿನಗರ ಬಸ್ ನಿಲ್ದಾಣದ ಸಮೀಪ ಸೋಮವಾರ ಪ್ರತಿಭಟನೆ ನಡೆಸಿದರು 	-ಪ್ರಜಾವಾಣಿ ಚಿತ್ರ
ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆಯನ್ನು ಖಂಡಿಸಿ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಸದಸ್ಯರು ಕಪ್ಪು ಉಡುಪು ಧರಿಸಿ ನಗರದ ಶಾಂತಿನಗರ ಬಸ್ ನಿಲ್ದಾಣದ ಸಮೀಪ ಸೋಮವಾರ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು:  ಪದೇ ಪದೇ ಡೀಸೆಲ್ ದರ ಹೆಚ್ಚಳ ಹಾಗೂ ನೌಕರರ ವೇತನ ಪರಿಷ್ಕರಣೆಯಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಾರ್ಷಿಕ ರೂ. 229.76 ಕೋಟಿ ಆರ್ಥಿಕ ಹೊರೆ ಅನುಭವಿಸುತ್ತಿದೆ.

ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಇಳಿಸಬೇಕು ಎಂಬ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯು ಸಂಸ್ಥೆಗೆ ಮನವಿ ಸಲ್ಲಿಸಿತ್ತು. ಈ ಸಂಬಂಧ ಬಿಎಂಟಿಸಿ ವ್ಯವಸ್ಥಾಪಕ ಅಂಜುಮ್ ಪರ್ವೇಜ್ ಅವರು ವೇದಿಕೆಗೆ ಸೋಮವಾರ ಲಿಖಿತ ಉತ್ತರ ನೀಡಿದ್ದಾರೆ. ಸಂಸ್ಥೆ ಭಾರಿ ಪ್ರಮಾಣದ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿತ್ತು. ಮತ್ತೆ ದರ ಇಳಿಸುವ ಪ್ರಸ್ತಾಪ ಮುಂದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಧಾನಸಭಾ ಅಧಿವೇಶನದಲ್ಲಿ ನೀಡಿದ ಲಿಖಿತ ಉತ್ತರದಲ್ಲಿ `ಮೂರು ವರ್ಷಗಳಿಂದ ಲಾಭದಲ್ಲಿದ್ದ ಬಿಎಂಟಿಸಿ ಒಂದೇ ವರ್ಷದಲ್ಲಿ 147 ಕೋಟಿ ನಷ್ಟ ಅನುಭವಿಸಿದೆ' ಎಂದು ತಿಳಿಸಿದ್ದರು.

`ಡೀಸೆಲ್ ದರ ಹಾಗೂ ಸಿಬ್ಬಂದಿಯ ತುಟ್ಟಿಭತ್ಯೆ ಪರಿಷ್ಕರಣೆಯಾದಂತೆ ಪ್ರಯಾಣ ದರ ಏರಿಸಲಾಗುತ್ತಿದೆ. 2012ರ ಅಕ್ಟೋಬರ್‌ನಲ್ಲಿ ಪ್ರಯಾಣ ದರ ಏರಿಸಲಾಗಿತ್ತು. ಪ್ರಸ್ತುತ ಪ್ರತಿ ಲೀಟರ್ ಡೀಸೆಲ್‌ನ ಚಿಲ್ಲರೆ ದರ ಮಾರಾಟ ದರ ರೂ. 55.32 ಇದೆ. ಕಳೆದ ಬಾರಿ ಪ್ರಯಾಣದರ ಏರಿಕೆಯ ಸಂದರ್ಭದಲ್ಲಿ ಇದ್ದ ಡೀಸೆಲ್ ದರಕ್ಕೆ ಹೋಲಿಸಿದರೆ ಪ್ರತಿ ಲೀಟರ್‌ಗೆ ರೂ. 4.95 ಜಾಸ್ತಿ ಆಗಿದೆ. ಸಂಸ್ಥೆ ವಾರ್ಷಿಕ 1380 ಲಕ್ಷ ಲೀಟರ್ ಡೀಸೆಲ್ ಬಳಕೆ ಮಾಡುತ್ತಿದೆ. ಚಿಲ್ಲರೆ ದರದಲ್ಲಿ ಡೀಸೆಲ್ ಖರೀದಿಯಿಂದಲೇ ವಾರ್ಷಿಕ ರೂ. 68.31 ಕೋಟಿ ನಷ್ಟ ಆಗುತ್ತಿದೆ' ಎಂದು ಉತ್ತರದಲ್ಲಿ ತಿಳಿಸಲಾಗಿದೆ.

`ಪ್ರಸ್ತುತ ಸಗಟು ಡೀಸೆಲ್ ದರವು ಪ್ರತಿ ಲೀಟರ್‌ಗೆ ರೂ. 64.17 ಇದೆ. ಒಂದು ವೇಳೆ ಸಗಟು ಬೆಲೆಯಲ್ಲಿ ಡೀಸೆಲ್ ಖರೀದಿ ಮಾಡಿದರೆ ಸಂಸ್ಥೆ ವಾರ್ಷಿಕ ರೂ. 190.44 ಕೋಟಿ ನಷ್ಟ ಅನುಭವಿಸಬೇಕಾಗುತ್ತದೆ. ಡೀಸೆಲ್ ದರ ಏರಿಕೆಯಿಂದಾಗಿ ಸಂಸ್ಥೆ 2012-13ನೇ ಸಾಲಿನಲ್ಲಿ ಗಣನೀಯ ನಷ್ಟ ಅನುಭವಿಸಿದೆ' ಎಂದು ಅವರು ಹೇಳಿದ್ದಾರೆ.

ಲೈಂಗಿಕ ಕಿರುಕುಳ ಇಲ್ಲ: ಪ್ರತಿನಿತ್ಯ ಸಾವಿರಾರು ಮಹಿಳೆಯರು ಪ್ರಯಾಣ ಮಾಡುವ ಬಿಎಂಟಿಸಿ ಬಸ್‌ನಲ್ಲಿ ಈ ವರೆಗೆ ಒಂದೇ ಒಂದು ಲೈಂಗಿಕ ಕಿರುಕುಳದ ಘಟನೆ ವರದಿಯಾಗಿಲ್ಲ. ಕಿರುಕುಳದ ಬಗ್ಗೆ ದೂರು ಸಲ್ಲಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಸಾರಥಿ ಗಸ್ತು ಪಡೆ ನಗರದಾದ್ಯಂತ ಸಂಚಾರ ಮಾಡುತ್ತಿದೆ' ಎಂದು ಅವರು ತಿಳಿಸಿದ್ದಾರೆ.

ಬರಲಿದೆ ಮಿನಿ ಬಸ್: `ಸಾಮಾನ್ಯ ಶ್ರೇಣಿಯ ಬಸ್‌ಗಳನ್ನು ಹಾಗೂ ಮಾರ್ಗಗಳನ್ನು ಹೆಚ್ಚಿಸಬೇಕು. ಹೊರವಲಯಗಳಿಗೆ ಬಸ್ ಸಂಪರ್ಕ ಕಲ್ಪಿಸಬೇಕು. ಕಿರಿದಾದ ರಸ್ತೆಗಳು ಹಾಗೂ ಕೊಳೆಗೇರಿಗಳಿಗೆ ಮಿನಿ ಬಸ್ ಸಂಪರ್ಕ ಕಲ್ಪಿಸಬೇಕು' ಎಂದು ವೇದಿಕೆ ಆಗ್ರಹಿಸಿತ್ತು. `ಮಿನಿ ಬಸ್‌ಗಳನ್ನು ಖರೀದಿ ಮಾಡುವ ಪ್ರಸ್ತಾವ ಸಂಸ್ಥೆಯ ಮುಂದಿದ್ದು, ಈ ಬಸ್‌ಗಳು ಲಭ್ಯವಾದ ನಂತರ ದೊಡ್ಡ ವಾಹನಗಳು ಸಂಚರಿಸಲು ಸಾಧ್ಯವಿಲ್ಲದ ಪ್ರದೇಶಗಳಿಗೆ ಮಿನಿ ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು' ಎಂದು ಬಿಎಂಟಿಸಿ ತಿಳಿಸಿದೆ.

ಕಪ್ಪು ದಿನ:  ಬಿಎಂಟಿಸಿ ಪ್ರಯಾಣ ದರ ಏರಿಕೆಯನ್ನು ಖಂಡಿಸಿ ಬಸ್ ದಿನಾಚರಣೆಯ ಸಂದರ್ಭ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ವತಿಯಿಂದ ಕಪ್ಪು ಉಡುಪು ಧರಿಸಿ ಕಪ್ಪು ದಿನಾಚರಣೆ ಆಚರಿಸಲಾಯಿತು. ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಯಶವಂತಪುರ, ವಿದ್ಯಾರಣ್ಯಪುರ, ಹೆಬ್ಬಾಳ, ನೀಲಸಂದ್ರ, ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಬಸ್ ನಿಲ್ದಾಣಗಳಲ್ಲಿ ವೇದಿಕೆ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ದರ ಏರಿಕೆ ಖಂಡಿಸಿ ವೇದಿಕೆ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಸೋಮವಾರ 3,000 ಮಂದಿ ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ ಎಂದು ವೇದಿಕೆಯ ವಿನಯ್ ಶ್ರೀನಿವಾಸ್ ತಿಳಿಸಿದರು.

ಬಿಎಂಟಿಸಿ ಆರ್ಥಿಕ ಹೊರೆ(ವಾರ್ಷಿಕವಾಗಿ)
ಡೀಸೆಲ್ ದರ ಹೆಚ್ಚಳದಿಂದ ರೂ. 68.31 ಕೋಟಿ
ತುಟ್ಟಿಭತ್ಯೆ ವಿಲೀನ, ಮನೆ ಬಾಡಿಗೆ ಭತ್ಯೆ ಹೆಚ್ಚಳ ರೂ. 90.96 ಕೋಟಿ
ತುಟ್ಟಿಭತ್ಯೆ ಹೆಚ್ಚಳ  ರೂ. 19.49 ಕೋಟಿ
ವೇತನ ಪರಿಷ್ಕರಣೆ ರೂ. 51 ಕೋಟಿ
ಒಟ್ಟು ಹೊರೆ ರೂ. 229.76 ಕೋಟಿ
(ಮಾಹಿತಿ-ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.