ADVERTISEMENT

ಬಿಐಎಎಲ್ ಟರ್ಮಿನಲ್-1 ಕಾಮಗಾರಿ: ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಮೇ 2012, 19:30 IST
Last Updated 14 ಮೇ 2012, 19:30 IST
ಬಿಐಎಎಲ್ ಟರ್ಮಿನಲ್-1 ಕಾಮಗಾರಿ: ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ
ಬಿಐಎಎಲ್ ಟರ್ಮಿನಲ್-1 ಕಾಮಗಾರಿ: ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ   

ಬೆಂಗಳೂರು: ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್)ದ `ಟರ್ಮಿನಲ್-1~ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ವರ್ಷದೊಳಗೆ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂಲಸೌಕರ್ಯ ಹೆಚ್ಚಿಸಿ ನಿಲ್ದಾಣವನ್ನು ಮತ್ತಷ್ಟು ಆಕರ್ಷಕಗೊಳಿಸಲು `ಮಹಾ ಯೋಜನೆ~ಯನ್ನು ಕೈಗೆತ್ತಿಕೊಳ್ಳಲಾಗಿದೆ.
ಇದರ ಭಾಗವಾಗಿರುವ ಟರ್ಮಿನಲ್-1 ಕಾಮಗಾರಿಯಲ್ಲಿ ಈಗಿರುವ ಟರ್ಮಿನಲ್ ವಿಸ್ತೀರ್ಣವನ್ನು ಎರಡು ಪಟ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ.
 
ಅತೀ ಗಣ್ಯ ಪ್ರಯಾಣಿಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಯೋಜನೆ ಅನುಷ್ಠಾನದ ಹಂತದಲ್ಲಿದೆ. ಹೊಸ ವಿನ್ಯಾಸದ ಆಸನ ವ್ಯವಸ್ಥೆಯನ್ನು ಕಾಮಗಾರಿಯ ಆರಂಭಿಕ ಹಂತದಲ್ಲೇ ಅಳವಡಿಸಲು ಯೋಜಿಸಲಾಗಿದೆ. ಒಳಾಂಗಣ ವಿನ್ಯಾಸವನ್ನು ಚಿತ್ತಾಕರ್ಷಕಗೊಳಿಸಲಾಗುತ್ತಿದೆ. ಹೊಸ ವಿನ್ಯಾಸದ ಕುರ್ಚಿಗಳನ್ನು ಹಾಕಲಾಗಿದೆ.

ಇಲ್ಲಿನ ವಿಮಾನ ನಿಲ್ದಾಣದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು ಪ್ರಯಾಣಿಸುತ್ತಾರೆ. ಈ ನಿಟ್ಟಿನಲ್ಲಿ ವಿವಿಐಪಿಗಳಿಗಾಗಿಯೇ ನೂತನ ಕಟ್ಟಡವೊಂದನ್ನು ನಿರ್ಮಿಸಲಾಗುತ್ತಿದೆ. ಟರ್ಮಿನಲ್‌ನ ಪಶ್ಚಿಮದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ವಿಮಾನ ನಿಲ್ದಾಣ ವಿಸ್ತರಣೆಗೆ ಅಗತ್ಯ ಇರುವ ಭೂಸ್ವಾಧೀನ ಪ್ರಕ್ರಿಯೆಯೂ ನಡೆದಿದೆ. ಕಾಮಗಾರಿಯ ವೇಳೆಗೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈಗಿನ ಟರ್ಮಿನಲ್ ವಿಸ್ತಾರ 73,347 ಚದರ ಮೀಟರ್. ಈಗಿನ ಕಾಮಗಾರಿ ಪೂರ್ಣಗೊಂಡ ಬಳಿಕ ವಿಸ್ತೀರ್ಣ 1,50,556 ಚದರ ಮೀಟರ್ ಆಗಲಿದೆ. ಚೆಕ್ ಇನ್ ಕೌಂಟರ್‌ಗಳ ಸಂಖ್ಯೆ 53ರಿಂದ 90ಕ್ಕೆ ಏರಲಿದೆ. ಬ್ಯಾಗೇಜ್ ಪಡೆಯುವ ಬೆಲ್ಟ್‌ಗಳ ಸಂಖ್ಯೆ 15ಕ್ಕೆ ಹೆಚ್ಚಲಿದೆ.  ವಿಮಾನದ ಏರೋ ಬ್ರಿಜ್‌ಗಳ ಸಂಖ್ಯೆಯಲ್ಲೂ ಹೆಚ್ಚಳವಾಗಲಿದೆ. ಸುರಕ್ಷತೆಯ ದೃಷ್ಟಿಯಿಂದ ಟರ್ಮಿನಲ್‌ನ 1 ಪಾರ್ಶ್ವದಲ್ಲಿ ತಾತ್ಕಾಲಿಕ ಸುರಕ್ಷತಾ ಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಪ್ರಕಟಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.