ADVERTISEMENT

ಬಿಕಾಂ ಪ್ರವೇಶಕ್ಕೆ ನೂಕುನುಗ್ಗುಲು

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 18:30 IST
Last Updated 9 ಜುಲೈ 2012, 18:30 IST
ಬಿಕಾಂ ಪ್ರವೇಶಕ್ಕೆ ನೂಕುನುಗ್ಗುಲು
ಬಿಕಾಂ ಪ್ರವೇಶಕ್ಕೆ ನೂಕುನುಗ್ಗುಲು   

ಬೆಂಗಳೂರು: ನಗರದ ಪದವಿ ಕಾಲೇಜುಗಳಲ್ಲಿ ವಿಜ್ಞಾನ ಹಾಗೂ ಕಲಾ ವಿಭಾಗದ ಪದವಿಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ತ್ರಾಸ ಪಡುವ ಸ್ಥಿತಿ ನಿರ್ಮಾಣವಾಗಲಿಲ್ಲ. ಆದರೆ ಬಿ.ಕಾಂ. ಪದವಿ ಪ್ರವೇಶಕ್ಕೆ ವಿದ್ಯಾರ್ಥಿಗಳ ನಡುವೆ ತುರುಸಿನ ಸ್ಪರ್ಧೆ ಇತ್ತು. ಪ್ರತಿಷ್ಠಿತ ಕಾಲೇಜುಗಳು ಪ್ರಕಟಿಸಿದ ದ್ವಿತೀಯ ಪಟ್ಟಿಯಲ್ಲಿ ಶೇ 70ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಹೆಸರು ಮಾತ್ರ ಕಾಣಿಸಿಕೊಂಡಿತ್ತು. ಬಿ.ಕಾಂ. ಪ್ರವೇಶ ನಿರೀಕ್ಷೆಯಲ್ಲಿ ಆಸೆ ಕಂಗಳಿಂದ ಕಾಯುತ್ತಿದ್ದ ವಿದ್ಯಾರ್ಥಿಗಳು ನಿರಾಸೆ ಅನುಭವಿಸಬೇಕಾಯಿತು.

ನಗರದ ಹೆಚ್ಚಿನ ಕಾಲೇಜುಗಳಲ್ಲಿ ಕಲಾ ಹಾಗೂ ವಿಜ್ಞಾನ ವಿಭಾಗ ಪ್ರವೇಶಕ್ಕೆ ಅಂಕ ಮಿತಿ ನಿಗದಿಪಡಿಸಿರಲಿಲ್ಲ. ಕಲಾ ವಿಭಾಗಕ್ಕೆ ಉತ್ತೀರ್ಣರಾದವರಿಗೆ ಹಾಗೂ ವಿಜ್ಞಾನ ವಿಭಾಗಕ್ಕೆ ಶೇ 45ಕ್ಕಿಂತ ಅಧಿಕ ಅಂಕ ಪಡೆದವರಿಗೆ ಪ್ರವೇಶ ನೀಡಲಾಗುವುದು ಎಂದು ಹೆಚ್ಚಿನ ಕಾಲೇಜುಗಳ ಆಡಳಿತ ಮಂಡಳಿಗಳು ಘೋಷಿಸಿದ್ದವು. ಆದರೂ ಕೆಲವು ಕಾಲೇಜುಗಳಲ್ಲಿ ಬಿ.ಎ, ಬಿ.ಎಸ್ಸಿ ಪದವಿಗಳ ಎಲ್ಲಾ ಸೀಟು ಭರ್ತಿಯಾಗದೆ ಹಾಗೆ ಉಳಿದುಕೊಂಡವು.

ಆದರೆ ಬಿ.ಕಾಂ. ಸ್ಥಿತಿ ಭಿನ್ನವಾಗಿತ್ತು. ಬಿ.ಕಾಂ. ಪ್ರವೇಶಕ್ಕಾಗಿ ದುಪ್ಪಟ್ಟು ಶುಲ್ಕ ತೆರಲು ಸಹ ವಿದ್ಯಾರ್ಥಿಗಳು ಸಿದ್ಧರಾಗಿದ್ದರು. ಕಾಲೇಜು ಆಡಳಿತ ಮಂಡಳಿಯ ಜೊತೆಗೆ ಚೌಕಾಸಿ ವ್ಯವಹಾರ ನಡೆಸಿದರೂ ಸೀಟು ಸಿಗುವುದು ಕಷ್ಟ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. 

`ಜಯನಗರದ ವಿಜಯಾ ಕಾಲೇಜಿನಲ್ಲಿ ಬಿಬಿಎಂನಲ್ಲಿ 25 ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇತ್ತು. ಮೊದಲ ಪಟ್ಟಿಯಲ್ಲೇ 25 ವಿದ್ಯಾರ್ಥಿಗಳು ಸೇರ್ಪಡೆಯಾದರು. ಮೂರನೇ ಪಟ್ಟಿ ಪ್ರಕಟಿಸಿದ ಬಳಿಕವೂ ಬಿ.ಕಾಂ.ಗೆ ಪ್ರವೇಶ ಬಯಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಬರುತ್ತಿದ್ದರು. ಈ ಬಾರಿ ಬಿ.ಕಾಂಗೆ ಈ ಹಿಂದೆಂದಿಗಿಂತಲೂ ಅಧಿಕ ಬೇಡಿಕೆ ವ್ಯಕ್ತವಾಗಿತ್ತು~ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಸತ್ಯಾನಂದ ತಿಳಿಸಿದರು.

`ಯಲಹಂಕದ ಶೇಷಾದ್ರಿಪುರ ಪದವಿ ಕಾಲೇಜಿನಲ್ಲಿ ಬಿ.ಕಾಂ. ಪದವಿಯ 400 ಸೀಟುಗಳಿಗೆ 3,700 ಅರ್ಜಿಗಳು ಬಂದಿದ್ದವು. ಮೊದಲ ಪಟ್ಟಿಯಲ್ಲೇ ಹೆಚ್ಚಿನ ಸೀಟುಗಳು ಭರ್ತಿಯಾಗಿದ್ದವು. ಇತ್ತೀಚಿನ ದಿನಗಳಲ್ಲಿ ಬಿ.ಕಾಂ ಬೇಡಿಕೆ ವಿಪರೀತವಾಗಿ ಹೆಚ್ಚಿದ್ದರಿಂದ ಅಂಕ ಮಿತಿ ನಿಗದಿಪಡಿಸಲಾಗಿತ್ತು. ಕಲಾ ಹಾಗೂ ವಿಜ್ಞಾನ ವಿಭಾಗಗಳಿಗೆ ಪ್ರವೇಶಕ್ಕೆ ಅಂಕ ಮಿತಿ ನಿಗದಿ ಮಾಡಿರಲಿಲ್ಲ.

ವಿಜ್ಞಾನ ವಿಭಾಗದಲ್ಲಿ ಕಂಪ್ಯೂಟರ್ ವಿಭಾಗ ಸೇರ್ಪಡೆಗೆ ವಿದ್ಯಾರ್ಥಿಗಳು ಒಲವು ವ್ಯಕ್ತಪಡಿಸಿದರು. ಉಳಿದ ವಿಜ್ಞಾನ ಪದವಿಗಳಿಗೆ ಬೇಡಿಕೆ ಇರಲಿಲ್ಲ~ ಎಂದು ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಮಾಹಿತಿ ನೀಡಿದರು. ಶ್ರೀನಗರದ ಪಿ.ಇ.ಎಸ್. ಪದವಿ ಕಾಲೇಜಿನಲ್ಲಿ ಬಿ.ಕಾಂ. ಸೇರ್ಪಡೆಗೆ ಪಟ್ಟಿಯಲ್ಲಿ ಶೇ 90 ಅಂಕ ಮಿತಿ ನಿಗದಿಪಡಿಸಲಾಗಿತ್ತು. ಮೊದಲ ಪಟ್ಟಿಯಲ್ಲೇ ಬಹುತೇಕ ಸೀಟುಗಳು ಭರ್ತಿಯಾಗಿದ್ದವು. ಹಾಗಾಗಿ ದ್ವಿತೀಯ ಹಾಗೂ ತೃತೀಯ ಪಟ್ಟಿ ಪ್ರಕಟಿಸಲಿಲ್ಲ~ ಎಂದು ಪ್ರಾಂಶುಪಾಲ ಡಾ.ಚಂದ್ರಶೇಖರ್ ತಿಳಿಸಿದರು. 

`ವಿಜಯನಗರ ಭಾರತಿ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ 100 ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶವಿದ್ದು, 85 ಮಂದಿ ಸೇರಿದ್ದಾರೆ. ಬಿಬಿಎಂನಲ್ಲಿ 40 ಸೇರ್ಪಡೆಗೆ ಅವಕಾಶ ಇದ್ದು, 17 ಮಂದಿ ಸೇರಿದ್ದಾರೆ. ಬಿಸಿಎಯಲ್ಲಿ 30 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಇದ್ದರೂ ಸೇರ್ಪಡೆಯಾಗಿರುವುದು ಏಳು ಮಂದಿ ಮಾತ್ರ. 100 ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇರುವ ಬಿಎ ಪದವಿಗೆ ಈ ವರೆಗೆ 35 ಮಂದಿ ಸೇರಿದ್ದಾರೆ. ಆಸಕ್ತ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು~ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದರು.

`ಪಿಯುಸಿಯಲ್ಲಿ ಈ ಬಾರಿ ಉತ್ತೀರ್ಣ ಪ್ರಮಾಣ ಜಾಸ್ತಿ ಆದುದರಿಂದ ಕಾಲೇಜುಗಳಲ್ಲಿ ಪ್ರವೇಶಕ್ಕೆ ಅಧಿಕ ಒತ್ತಡ ನಿರ್ಮಾಣವಾಗಿತ್ತು. ಬಿ.ಕಾಂ. ವಿಭಾಗಕ್ಕೆ ಭಾರಿ ಬೇಡಿಕೆ ಇತ್ತು.ಕೆಲವು ಕಾಲೇಜುಗಳು ಹೆಚ್ಚುವರಿ ವಿಭಾಗಗಳನ್ನು ತೆರೆಯಲು ಅವಕಾಶ ನೀಡುವಂತೆ ಬೇಡಿಕೆ ಸಲ್ಲಿಸಿದ್ದವು. ಅಗತ್ಯ ಇದ್ದಲ್ಲಿ ಹೆಚ್ಚುವರಿ ವಿಭಾಗಕ್ಕೆ ಅನುಮತಿ ನೀಡುವಂತೆ ಕುಲಪತಿ ಅವರಿಗೆ ಸೂಚಿಸಲಾಗಿತ್ತು~ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.