ADVERTISEMENT

ಬಿಜೆಪಿಯ ರವಿಕುಮಾರ್ ವಿರುದ್ಧ ಕಾಂಗ್ರೆಸ್‌ ದೂರು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 20:02 IST
Last Updated 11 ಮಾರ್ಚ್ 2018, 20:02 IST

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿರು‌ದ್ಧ ಕಾಂಗ್ರೆಸ್‌ನ ರಾಜಾಜಿನಗರ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ವಿ.ಶೇಖರ್ ಅವರು ಮಲ್ಲೇಶ್ವರ ಠಾಣೆಗೆ ಶುಕ್ರವಾರ ದೂರು ಕೊಟ್ಟಿದ್ದಾರೆ.

‘ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾರ್ಚ್‌ 10ರಂದು ನಡೆದ ಸಭೆಯಲ್ಲಿ ರವಿಕುಮಾರ್, ‘ಸಚಿವರಾದ ಬಿ.ರಮಾನಾಥ ರೈ ಹಾಗೂ ಯು.ಟಿ.ಖಾದರ್ ಉಗ್ರಗಾಮಿಗಳಿದ್ದಂತೆ. ಅವರು ಯಾವ ಭಯೋತ್ಪಾದಕರಿಗೂ ಕಡಿಮೆ ಇಲ್ಲ’ ಎಂದು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ವಿನಯ್ ಕುಲಕರ್ಣಿ ವಿರುದ್ಧವೂ ಆಧಾರರಹಿತ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರ ತೇಜೋವಧೆಗೆ ಮುಂದಾಗಿರುವ ರವಿಕುಮಾರ್ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಎಸ್‌.ಮನೋಹರ್ ಒತ್ತಾಯಿಸಿದರು.

ADVERTISEMENT

ಜೆಡಿಎಸ್‌ ದೂರು:

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದವರ ವಿರುದ್ಧ ಶ್ರೀರಾಮಪುರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

‘ಚಿಂತೆ ಇಲ್ಲದ ತುಂಡ್ ಹೈಕ್ಳ ಸಂಘ’, ‘ಅಪ್ಪಟ ಕನ್ನಡಿಗ’, ‘ಜೈ ಮೋದಿ ಜೀ’ ಎಂಬ ಫೇಸ್‌ಬುಕ್ ಪುಟಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಲಾಗಿದೆ ಎಂದು ಜೆಡಿಎಸ್‌ನ ಕಾನೂನು ಘಟಕವು ದೂರು ನೀಡಿತ್ತು.

ಬೆಟ್ಟಸ್ವಾಮಿ, ಅಂಕಿತ್ ರಾಜ್ ಹಾಗೂ ಅಭಿಲಾಷ್‌ ಎಂಬುವರು ಈ ಪುಟಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.