ADVERTISEMENT

ಬಿಜೆಪಿ ಅತೃಪ್ತರಿಂದ ಬಿಎಸ್‌ವೈಗೆ ಎಚ್ಚರಿಕೆ

ಬೇಡಿಕೆ ಈಡೇರದಿದ್ದರೆ ವರಿಷ್ಠರ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2017, 19:54 IST
Last Updated 10 ಫೆಬ್ರುವರಿ 2017, 19:54 IST
ಬಿಜೆಪಿ ಅತೃಪ್ತರಿಂದ ಬಿಎಸ್‌ವೈಗೆ ಎಚ್ಚರಿಕೆ
ಬಿಜೆಪಿ ಅತೃಪ್ತರಿಂದ ಬಿಎಸ್‌ವೈಗೆ ಎಚ್ಚರಿಕೆ   

ಬೆಂಗಳೂರು: ಬಿಜೆಪಿಯ ಅತೃಪ್ತ ಮುಖಂಡರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ತಿರುಗಿಬಿದ್ದಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ವರಿಷ್ಠರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶಾಸಕರ ಭವನದಲ್ಲಿ ಶುಕ್ರವಾರ ಸಭೆ ನಡೆಸಿದ ಮಾಜಿ ಶಾಸಕ ನಿರ್ಮಲ್‌ ಕುಮಾರ್‌ ಸುರಾನ, ವಿಧಾನಪರಿಷತ್‌ನ ಮಾಜಿ ಸದಸ್ಯ ಡಾ. ಶಿವಯೋಗಿ ಸ್ವಾಮಿ ಮತ್ತಿತರರು ಈ ಸಂದೇಶ ರವಾನಿಸಿದ್ದಾರೆ.

ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ  ಸುರಾನ, ಪಕ್ಷದ ಕೆಲವು ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರನ್ನು ತಕ್ಷಣವೇ ಬದಲಿಸದಿದ್ದರೆ ವರಿಷ್ಠರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸುವು ದಾಗಿ ತಿಳಿಸಿದರು.

ಆದಷ್ಟು ಬೇಗನೇ ಪದಾಧಿಕಾರಿಗಳನ್ನು ಬದಲಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದರು. ಪಕ್ಷದ ಗೊಂದಲ ನಿವಾರಣೆಗೆ  ಷಾ ಅವರು ರಚಿಸಿದ್ದ  ಸಮಿತಿ ಸಭೆ ಸೇರಿ, ಸಮಸ್ಯೆ ಬಗೆಹರಿಸಬೇಕಿತ್ತು. ಫೆ. 10  ಕಳೆದರೂ ಪದಾಧಿಕಾರಿಗಳ ಬದಲಾವಣೆಗೆ ಸಭೆ ಸೇರಿಲ್ಲ. ಇನ್ನು ನಾವು ಕಾಯಲು ಸಾಧ್ಯವಿಲ್ಲ ಎಂದು ಸುರಾನ ಹೇಳಿದರು.

ಡಾ. ಶಿವಯೋಗಿಸ್ವಾಮಿ ಮಾತನಾಡಿ, ಹಿಂದಿನಿಂದ ಪಕ್ಷಕ್ಕೆ ದುಡಿದ ನಾಯಕರನ್ನು ಕಡೆಗಣಿಸಲಾಗಿದೆ. ಸೊಗಡು ಶಿವಣ್ಣ, ನಂದೀಶ ಮತ್ತು ವೆಂಕಟೇಶಮೂರ್ತಿ ವಿರುದ್ಧ ಶಿಸ್ತು ಕ್ರಮವನ್ನು ಪುನರ್‌ ಪರಿಶೀಲಿಸಬೇಕು. ನೋಟೀಸ್‌ ಮತ್ತು ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು  ಒತ್ತಾಯಿಸಿದರು.

ಯಡಿಯೂರಪ್ಪ ಅವರ ಏಕಪಕ್ಷೀಯ ತೀರ್ಮಾನ, ನಿಷ್ಠಾವಂತರನ್ನು ಕಡೆಗಣಿಸಿರುವ ಬಗ್ಗೆ ಆಕ್ಷೇಪಿಸಿ ಈ ಹಿಂದೆ  24 ಮಂದಿ ಸಹಿ ಮಾಡಿ ಬರೆದ ಪತ್ರಕ್ಕೆ,  ಯಾವುದೇ ಸ್ಪಂದನೆ ಸಿಕ್ಕದೆ ಇರುವುದು ಸಭೆಯಲ್ಲಿ ಪ್ರಸ್ತಾಪಕ್ಕೆ ಬಂತು ಎಂದು ತಿಳಿಸಿದರು.

*
ಇನ್ನು ಎರಡು  ಅಥವಾ ಮೂರು ದಿನ ಕಾದು ನೋಡುತ್ತೇವೆ. ಬೇಡಿಕೆಗಳು ಈಡೇರದಿದ್ದರೆ ಪಕ್ಷದ ವರಿಷ್ಠರನ್ನು ಭೇಟಿ ಮಾಡುವುದು ನಿಶ್ಚಿತ.
–ನಿರ್ಮಲ್‌ ಕುಮಾರ್‌ ಸುರಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT