ADVERTISEMENT

ಬಿಜೆಪಿ ಮೇಲೆ ಪ್ರತಿಪಕ್ಷಗಳ ಡಿನೋಟಿಫಿಕೇಷನ್ ಭೂತ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ಮಹದೇವಪುರ:  ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಪ್ರತಿಪಕ್ಷಗಳು ಅಸೂಯೆಯಿಂದ ಬಿಜೆಪಿ ನಾಯಕರ ಮೇಲೆ ಡಿನೋಟಿಫೀಕೇಷನ್ ಎಂಬ ಭೂತ ಬಿಟ್ಟು ಹೆದರಿಸುತ್ತಿದ್ದಾರೆ. ಇದರಿಂದಾಗಿ ಜನತೆ ವಿಚಲಿತರಾಗುವುದು ಬೇಡ. ಬಿಜೆಪಿ ನಾಯಕರ ಮೇಲಿನ ಯಾವುದೇ ಆರೋಪಗಳು ಸಾಬೀತಾಗಿಲ್ಲ. ಮುಂದಿನ ದಿನಗಳಲ್ಲಿ ಅಂತಹ ಯಾವುದೇ ಪ್ರಕರಣಗಳು ಸಾಬೀತಾಗುವುದೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.

ಸ್ಥಳೀಯ ಬಿಜೆಪಿ ಘಟಕ ವರ್ತೂರಿನಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಮೇಳವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, `ರಾಜ್ಯದಲ್ಲಿ 800ಕ್ಕೂ ಹೆಚ್ಚು ಡಿನೋಟಿಫಿಕೇಷನ್ ಮಾಡಿರುವ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಆನಂತರದ ಸ್ಥಾನದಲ್ಲಿ ಜೆಡಿಎಸ್ ಇದೆ. ಅದು ಇನ್ನೂರಕ್ಕೂ ಹೆಚ್ಚು ಮಾಡಿದೆ. ಬಿಜೆಪಿ ಕೇವಲ 140ರಷ್ಟು ಪ್ರಕರಣಗಳಲ್ಲಿ ಮಾತ್ರ ಡಿನೋಟಿಫಿಕೇಷನ್ ಮಾಡಿದೆ. ಅಲ್ಲದೆ, ಅವೆಲ್ಲವನ್ನೂ ಆಡಳಿತ ಚೌಕಟ್ಟಿನಲ್ಲಿ ಮಾಡಲಾಗಿದೆ~ ಎಂದು ಅವರು ಸಮರ್ಥಿ           ಸಿಕೊಂಡರು.

`ಧರ್ಮಾತೀತವಾಗಿ ಕಾರ್ಯಕ್ರಮಗಳನ್ನು ಸಂಘಟಿಸುವುದು ಬಿಜೆಪಿ ಪಕ್ಷದ ಮುಖ್ಯ ಗುರಿ. ಆ ನಿಟ್ಟಿನಲ್ಲಿಯೇ ಅರಂದ ಲಿಂಬಾವಳಿ ವರ್ತೂರು ಗ್ರಾಮದಲ್ಲಿ ಆರೋಗ್ಯ ಮೇಳವನ್ನು ಏರ್ಪಡಿಸಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿನ ಕಾರ್ಯಕರ್ತರೆಲ್ಲರೂ ಒಗ್ಗೂಡಿ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಔಷಧಿಯನ್ನು ಈ ಆರೋಗ್ಯ ಮೇಳದಲ್ಲಿ ರೋಗಿಗಳಿಗೆ ವಿತರಿಸಲು ಸಂಗ್ರಹಿಸಿರುವುದು ಹೆಮ್ಮೆಯ ಸಂಗತಿ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಅರವಿಂದ ಲಿಂಬಾವಳಿ, `ಆರೋಗ್ಯ ಮೇಳದಲ್ಲಿ 10,470 ಜನ ತಪಾಸಣೆಗಾಗಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಎಲ್ಲರಿಗೂ ಹಂತ- ಹಂತವಾಗಿ ತಪಾಸಣೆ ನಡೆಸಿ ಅಗತ್ಯವಾದ ಔಷಧಿಗಳನ್ನು ಸಹ ವಿತರಿಸಲಾಗುವುದು. ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಅಗತ್ಯವಿರುವಂತಹ ರೋಗಿಗಳಿಗೆ ಉನ್ನತ ಆಸ್ಪತ್ರೆಗಳಿಗೆ ದಾಖಲಿಸಲಾಗುವುದು~ ಎಂದರು.

ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಿದರು. ಸಂಸದ ಪಿ.ಸಿ.ಮೋಹನ್, ಎಂ.ಎಸ್.ರಾಮಯ್ಯ ವೈದಕೀಯ ಕಾಲೇಜಿನ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಚ್.ಕೆ.ನಾಗರಾಜ್, ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಪಿ.ಕೆ.ಜಯಚಂದ್ರ ರೆಡ್ಡಿ, ಮುಖಂಡ ಸಚ್ಚಿದಾನಂದಮೂರ್ತಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.