ADVERTISEMENT

ಬಿಬಿಎಂಪಿ ಆರ್ಥಿಕ ಸ್ಥಿತಿ ದಿವಾಳಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 18:50 IST
Last Updated 21 ಏಪ್ರಿಲ್ 2012, 18:50 IST

ಬೆಂಗಳೂರು: `ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಬಿಬಿಎಂಪಿ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಪಾಲಿಕೆಯ ಅಭಿವೃದ್ಧಿ ಕಾರ್ಯ, ಆರ್ಥಿಕ ಸ್ಥಿತಿ ಹಾಗೂ ಸಾಲದ ಬಗ್ಗೆ ಬಿಜೆಪಿ ಆಡಳಿತ ಶ್ವೇತಪತ್ರ ಹೊರಡಿಸಬೇಕು~ ಎಂದು ಬಿಬಿಎಂಪಿ ಜೆಡಿಎಸ್ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, `ರೂ 3500 ಕೋಟಿಗಿಂತಲೂ ಹೆಚ್ಚಿನ ಸಾಲ ಮಾಡಿ ನಗರದ ತೆರಿಗೆದಾರರ ಮೇಲೆ ಸಾಲದ ಹೊರೆ ಹಾಕಿರುವುದು ಬಿಜೆಪಿಯ ಸಾಧನೆ.  ಸುಳ್ಳು ಹೇಳಿಕೆ ನೀಡಿ ನಗರದ ಜನತೆಯ ದಿಕ್ಕು ತಪ್ಪಿಸಲಾಗುತ್ತಿದೆ~ ಎಂದು ಟೀಕಿಸಿದರು.

`ರಾಜ್ಯದಲ್ಲಿ ಯಡಿಯೂರಪ್ಪ ಬಣ, ಸದಾನಂದ ಗೌಡ ಬಣ, ಈಶ್ವರಪ್ಪ ಬಣ ಎಂಬ ಬಣಗಳಿದ್ದಂತೆ ಬಿಬಿಎಂಪಿಯಲ್ಲೂ ಮೇಯರ್ ಬಣ, ಉಪಮೇಯರ್ ಬಣ ಹುಟ್ಟಿಕೊಂಡು ನಗರದ ಅಭಿವೃದ್ಧಿಗೆ ತೊಡಕಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಕ್ಕಿಲ್ಲ. 2010-11ನೇ ಸಾಲಿನಲ್ಲಿ ರೂ 8,840 ಕೋಟಿಯ ಬಜೆಟ್ ಮಂಡಿಸಲಾಗಿತ್ತು. ಇದರಲ್ಲಿ ಕಾರ್ಯಗತವಾದುದು ಶೇ 37 ಮಾತ್ರ. 2011-12ರಲ್ಲಿ 9,138 ಕೋಟಿಯ ಬಜೆಟ್ ಮಂಡಿಸಲಾಯಿತು. ಇಲ್ಲಿ ಘೋಷಿಸಿದ ಅಭಿವೃದ್ಧಿ ಕಾಮಗಾರಿಗಳಿಗೆ ಈಗ ಟೆಂಡರ್ ಕರೆಯಲಾಗುತ್ತಿದೆ. ಬಿಬಿಎಂಪಿಯಲ್ಲಿ ಬಿಜೆಪಿ ಸಾಧನೆ ಶೂನ್ಯ~ ಎಂದು ದೂರಿದರು.

`ಉಪಮೇಯರ್ ಹರೀಶ್ ಅವರು ಒಂದು ವರ್ಷದ ಅಧಿಕಾರ ಅವಧಿಯ ಸಾಧನೆಯ ಕಿರುಹೊತ್ತಿಗೆ ತಂದಿರುವುದು ಹಾಸ್ಯಾಸ್ಪದ. ಕೆಎಂಸಿ ಕಾಯ್ದೆ ಪ್ರಕಾರ ಉಪಮೇಯರ್‌ಗೆ ಈ ಅಧಿಕಾರ ಇಲ್ಲ. ಅವರಿಗೆ ಆಡಳಿತ ವರದಿ ಮಂಡಿಸುವ ಅಧಿಕಾರ ಮಾತ್ರ ಇದೆ. ಭ್ರಷ್ಟಾಚಾರಗಳು ಬಯಲಿಗೆ ಬರುತ್ತವೆ ಎಂಬ ಭೀತಿಯಿಂದ ತಮ್ಮ ಅಧಿಕಾರ ಚಲಾಯಿಸದೆ ಪಲಾಯನ ಮಾಡಿದ್ದಾರೆ~ ಎಂದು ಪದ್ಮನಾಭ ರೆಡ್ಡಿ ಲೇವಡಿ ಮಾಡಿದರು.

`ನಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಲ್ಲಿ ಬಿಜೆಪಿ ಆಡಳಿತ ವಿಫಲವಾಗಿದೆ~ ಎಂದು ಆರೋಪಿಸಿದರು. `ಬಿಬಿಎಂಪಿಯಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಹಣ ದುರುಪಯೋಗ ಹಗರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು~ ಎಂದರು.

`ಜಾಹೀರಾತು ಹಗರಣದಿಂದ ಪಾಲಿಕೆಗೆ ಪ್ರತಿವರ್ಷ ನೂರಾರು ಕೋಟಿ ಆದಾಯ ತಪ್ಪಿ ಹೋಗುತ್ತಿದೆ. 2,500ಕ್ಕೂ ಹೆಚ್ಚು ಅನಧಿಕೃತ ಜಾಹೀರಾತು ಫಲಕಗಳ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಕಸ ಗುತ್ತಿಗೆ ಅವಧಿ ಮುಗಿದು ಮೂರು ವರ್ಷಗಳು ಕಳೆದಿವು. ಹೊಸದಾಗಿ ಗುತ್ತಿಗೆ ಕರೆದಿಲ್ಲ.

ಅನಧಿಕೃತ ಒಎಫ್‌ಸಿ ಕೇಬಲ್‌ಗಳನ್ನು ಕತ್ತರಿಸಿ ಹಾಕಲಾಗುವುದು ಎಂದು ಪಾಲಿಕೆ ಸಭೆಯಲ್ಲಿ ಮೇಯರ್ ಘೋಷಿಸಿದ್ದರು. ಈ ನಡುವೆ ಒಎಫ್‌ಸಿ ಕೇಬಲ್ ಮಾಲೀಕರ ಜತೆ ಬಿಜೆಪಿ ಆಡಳಿತ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಬಿಬಿಎಂಪಿಗೆ ಸಾವಿರಾರು ಕೋಟಿ ಆದಾಯ ಕೈ ತಪ್ಪಿ ಹೋಗಿದೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.