ADVERTISEMENT

ಬಿಬಿಎಂಪಿ: ಕಾಂಗ್ರೆಸ್ ನಾಯಕರ ಜಟಾಪಟಿ

ಸಚಿವ ದಿನೇಶ ಗುಂಡೂರಾವ್ ವಿರುದ್ಧ ಜಾತಿ ನಿಂದನೆ ದೂರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:56 IST
Last Updated 4 ಸೆಪ್ಟೆಂಬರ್ 2013, 19:56 IST

ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಸಭಾಂಗಣದೊಳಗೆ ಬುಧವಾರ ಮಧ್ಯಾಹ್ನ ಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿದ್ದಾಗಲೇ ಹೊರಗೆ ಸಚಿವ ದಿನೇಶ ಗುಂಡೂರಾವ್ ಮತ್ತು ಅವರದೇ ಪಕ್ಷಕ್ಕೆ ಸೇರಿದ ಪಾಲಿಕೆ ಸದಸ್ಯ ಟಿ.ಮಲ್ಲೇಶ್ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ.
ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ದಿನೇಶ ಗುಂಡೂರಾವ್, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್ ಕೊಠಡಿಯಲ್ಲಿ ಕುಳಿತಿದ್ದರು. ಅವರ ಸುತ್ತ ಬೆಂಬಲಿಗರು ಮತ್ತು ಭದ್ರತಾ ಸಿಬ್ಬಂದಿ ನೆರೆದಿದ್ದರು. ಬಿಬಿಎಂಪಿ ಸದಸ್ಯರೂ ಹಾಜರಿದ್ದರು. ಆಗ ಈ ಜಟಾಪಟಿ ನಡೆದಿದೆ.

ಗುಣಶೇಖರ್ ಅವರ ಕೊಠಡಿಗೆ ಬಂದ ಮಲ್ಲೇಶ್, `ದಲಿತ ಸಮುದಾಯಕ್ಕೆ ಸೇರಿದ ನನ್ನನ್ನು ಬಿಬಿಎಂಪಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಬೇಕು' ಎಂದು ಆಗ್ರಹಿಸಿದಾಗ, ಸಚಿವರು, ಮಲ್ಲೇಶ್‌ಗೆ ಹೊರ ಹೋಗುವಂತೆ ದಬಾಯಿಸಿದರು.

ಈ ಪ್ರಸಂಗವೇ ಘಟನೆಗೆ ಕಾರಣವಾಯಿತು. ಸಚಿವರತ್ತ ನುಗ್ಗಿಬಂದ ಮಲ್ಲೇಶ್ ಅವರನ್ನು ಉಳಿದ ಸದಸ್ಯರು ದಬ್ಬಿಕೊಂಡು ಹೊರಗೆ ಕರೆದೊಯ್ದರು. ಆಗ ಸಚಿವರು ಮತ್ತು ಮಲ್ಲೇಶ್ ಮಧ್ಯೆ ಪರಸ್ಪರ ವಾಗ್ವಾದ ನಡೆಯಿತು ಎಂದು ತಿಳಿದುಬಂದಿದೆ. ಘಟನೆಯಿಂದ ಆಕ್ರೋಶಗೊಂಡ ಮಲ್ಲೇಶ್, ಬಿಬಿಎಂಪಿ ಎದುರೇ ಇರುವ ಹಲಸೂರು ಗೇಟ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.
`ಸಚಿವರು ನನ್ನ ಜಾತಿಯನ್ನು ಪ್ರಸ್ತಾಪಿಸಿ ನಿಂದಿಸಿದರು. ಆದ್ದರಿಂದಲೇ ಅವರ ವಿರುದ್ಧ ದೂರು ನೀಡಿದ್ದೇನೆ' ಎಂದು ಮಲ್ಲೇಶ್ ವರದಿಗಾರರಿಗೆ ತಿಳಿಸಿದರು.

`ಮನವಿ ಮಾಡಲು ಹೋದ ಮರುಕ್ಷಣವೇ ಸಚಿವರು ನನ್ನ ವಿರುದ್ಧ ರೇಗಿದರು. ಹೊರಗೆ ಕಳುಹಿಸುವಂತೆ ಇತರರಿಗೆ ಸೂಚಿಸಿದರು. ನಾನು ಬಗ್ಗದೆ ಎದುರು ನಿಂತಾಗ ಸುತ್ತಲಿದ್ದವರು ಕೊಠಡಿಯಿಂದ ನನ್ನನ್ನು ಹೊರದಬ್ಬಿದರು. ಸಚಿವರ ಹತ್ತಿರಕ್ಕೆ ನಾನು ಸುಳಿದಿಲ್ಲ' ಎಂದು ಅವರು ವಿವರಿಸಿದರು.

`ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ನಾನೂ ಟಿಕೆಟ್ ಕೇಳಿದ್ದೇ ಸಚಿವರ ಆಕ್ರೋಶಕ್ಕೆ ಕಾರಣ' ಎಂದು ಹೇಳಿದರು.

`ದಿನೇಶ ಗುಂಡೂರಾವ್ ಮೊದಲ ಸಲ ಚುನಾವಣೆಗೆ ನಿಂತಾಗ ನಾವೇ ಕ್ಷೇತ್ರದಲ್ಲಿ ಸುತ್ತಾಡಿ, ಗೆಲುವು ದೊರಕಿಸಿ ಕೊಟ್ಟಿದ್ದನ್ನು ಅವರು ಮರೆತುಬಿಟ್ಟಿದ್ದಾರೆ' ಎಂದೂ ಆಕ್ರೋಶ ತೋರಿದರು. `ಅನ್ಯಾಯವನ್ನು ಸಹಿಸಲಾಗದೆ ಪ್ರತಿಭಟಿಸಿದ್ದೇನೆ' ಎಂದು ತಿಳಿಸಿದರು.

ನನ್ನ ಪಾತ್ರವಿಲ್ಲ: `ವಿರೋಧ ಪಕ್ಷದ ನಾಯಕನ ಹುದ್ದೆಗೆ ಯಾರನ್ನು ನೇಮಿಸಬೇಕು ಎನ್ನುವುದನ್ನು ಬಿಬಿಎಂಪಿ ಸದಸ್ಯರು ಮತ್ತು ಪಕ್ಷದ ಹೈಕಮಾಂಡ್ ಒಟ್ಟಾಗಿ ನಿರ್ಧರಿಸುವ ವಿಷಯ.ಇದರಲ್ಲಿ ನನ್ನ ವೈಯಕ್ತಿಕ ಪಾತ್ರ ಏನಿಲ್ಲ. ಸುಮ್ಮನೇ ನನ್ನ ಮೇಲೆ ರೇಗಾಡಿದರೆ ಏನು ಪ್ರಯೋಜನ' ಎಂದು ದಿನೇಶ ಗುಂಡೂರಾವ್ ಪ್ರಶ್ನಿಸಿದರು.

`ಏನೇ ಅಸಮಾಧಾನ ಇದ್ದರೂ ಹೈಕಮಾಂಡ್‌ಗೆ ದೂರು ಕೊಡಲು ಅವರು ಸ್ವತಂತ್ರರು. ಹೀಗೆ ಕಚೇರಿಯಲ್ಲಿ ರಂಪಾಟ ಮಾಡಬಾರದು' ಎಂದು ಹೇಳಿದರು. `ಮಲ್ಲೇಶ್ ಜತೆ ವಾಗ್ವಾದ ನಡೆಸಿರುವುದು ನಿಜ. ಆದರೆ, ಜಾತಿ ನಿಂದನೆ ಮಾಡಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
ಮಲ್ಲೇಶ್, ಗಾಂಧಿನಗರ ಕ್ಷೇತ್ರಕ್ಕೆ ಸೇರಿದ ಸುಭಾಷ್‌ನಗರ ವಾರ್ಡ್ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.