ADVERTISEMENT

ಬಿಬಿಎಂಪಿ ಬಜೆಟ್: ಅವಾಸ್ತವಿಕ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಬೆಂಗಳೂರು: ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ಎರಡು ವರ್ಷಗಳಲ್ಲಿ ಮಂಡಿಸಿದ ಬಜೆಟ್ ಅವಾಸ್ತವಿಕ ಹಾಗೂ ಬೋಗಸ್ ಎಂದು ಟೀಕಿಸಿರುವ ಪಾಲಿಕೆಯ ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್, ಈ ಬಾರಿಯಾದರೂ ವಾಸ್ತವಕ್ಕೆ ಹತ್ತಿರವಾದ ನೈಜ ಬಜೆಟ್ ಮಂಡಿಸಲು ಮುಖ್ಯಮಂತ್ರಿಗಳು ಆಡಳಿತ ಪಕ್ಷಕ್ಕೆ ತಾಕೀತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಪಾಲಿಕೆಯ ಎರಡು ವರ್ಷಗಳ ಬಜೆಟ್ ಅವಲೋಕಿಸಿದರೆ ಯಾವುದೇ ಗೊತ್ತು ಗುರಿಯಿಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಪಾಲಿಕೆಯ ಇತಿಹಾಸದಲ್ಲಿಯೇ ಯಾವುದೇ ಆಡಳಿತ ಇಂತಹ ಅಭಿವೃದ್ಧಿ ಚಿಂತನೆಯೇ ಇಲ್ಲದ ಬಜೆಟ್ ಮಂಡಿಸಿಲ್ಲ~ ಎಂದು ಆರೋಪಿಸಿದರು.

`ಆಡಳಿತಾಧಿಕಾರಿ ಅವಧಿಯಲ್ಲಿ ಅಂದರೆ, 2009-10ನೇ ಸಾಲಿನಲ್ಲಿ 3,959 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿ ಶೇ 91.91ರಷ್ಟು ಪ್ರಗತಿ ಸಾಧಿಸಲಾಯಿತು. ಆದರೆ, ಬಿಜೆಪಿ ಆಡಳಿತಕ್ಕೆ ಬಂದ ನಂತರ 2010-11ನೇ ಸಾಲಿನಲ್ಲಿ 8,446 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ ಪಾಲಿಕೆ, ಶೇ 43.51ರಷ್ಟು ಮಾತ್ರ ಸಾಧನೆ ಮಾಡಿತು. ಅಂತೆಯೇ, 2011-12ನೇ ಸಾಲಿನಲ್ಲಿ 9,315 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದರೂ ಕೇವಲ ಶೇ 36.49ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಯಿತು~ ಎಂದು ವಿಶ್ಲೇಷಿಸಿದರು.

`ಬಿಜೆಪಿ ಆಡಳಿತಾವಧಿಯ ಎರಡೂ ವರ್ಷಗಳಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿದ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ. ಇದರಿಂದ ಎರಡೂ ವರ್ಷಗಳ ಬಜೆಟ್ ಬೋಗಸ್ ಎಂಬುದು ಸ್ಪಷ್ಟವಾಗುತ್ತದೆ. ಬಿಬಿಎಂಪಿಯ ಎರಡು ವರ್ಷಗಳ ಬಜೆಟ್ ಪ್ರತಿಗಳನ್ನು ಸುಡಬೇಕೋ, ತೂಕಕ್ಕೆ ಹಾಕಿ ಮಾರಬೇಕೋ ಅಥವಾ ಯಾವುದಾದರೂ ವಸ್ತುಪ್ರದರ್ಶನದಲ್ಲಿಡಬೇಕೋ ಎಂಬುದು ಅರ್ಥವಾಗುತ್ತಿಲ್ಲ~ ಎಂದು ವ್ಯಂಗ್ಯವಾಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.