ADVERTISEMENT

ಬಿಬಿಎಂಪಿ ರಸ್ತೆಯಲ್ಲಿ ಕೆಎಸ್‌ಸಿಎ ‘ರಾಜ್ಯಭಾರ’!

ಸಾರ್ವಜನಿಕ ವಾಹನಗಳಿಗೆ ನಿರ್ಬಂಧ: ಸಂಚಾರ ತಡೆಗೆ ಗೇಟ್‌ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 20:01 IST
Last Updated 20 ಮಾರ್ಚ್ 2014, 20:01 IST

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗ­ಣದ ಕೆಎಸ್‌ಸಿಎ ಕ್ಲಬ್‌ಹೌಸ್‌ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳು ಪ್ರವೇ­ಶಿಸ­ದಂತೆ ಕೆಎಸ್‌ಸಿಎ ಆಡಳಿತ ಕಳೆದ ನಾಲ್ಕು ದಿನಗ­ಳಿಂದ ನಿರ್ಬಂಧ ವಿಧಿಸಿದೆ. ಕೆಎಸ್‌ಸಿಎ ಸದಸ್ಯರು ಮತ್ತು ಮೆಟ್ರೊ ರೈಲು ನಿಗಮದ ಸಿಬ್ಬಂದಿ ವಾಹ­ನಗಳಿಗೆ ಮಾತ್ರ ಈ ರಸ್ತೆಗೆ ಹೋಗಲು ಅವಕಾಶ ನೀಡಲಾಗುತ್ತಿದೆ.

ಎಂ.ಜಿ. ರಸ್ತೆಯಿಂದ ಕ್ಲಬ್‌ಹೌಸ್‌ ಮೂಲಕ ಹೋಗುವ ಈ ಮಾರ್ಗ ಕಬ್ಬನ್‌ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಮೆಟ್ರೊ ಮಾರ್ಗ ನಿರ್ಮಾಣ ಕಾಮ­ಗಾರಿ ನಡೆದಿರುವ ಕಾರಣ ಕಬ್ಬನ್‌ ರಸ್ತೆ ಕಡೆಯಿಂದ ಪ್ರವೇಶಿಸುವ ತುದಿಯನ್ನು ಮುಚ್ಚಲಾಗಿದೆ. ಈ ರಸ್ತೆ­ಯನ್ನು ಕೆಎಸ್‌ಸಿಎ ಸದಸ್ಯರಲ್ಲದೆ ಸಾರ್ವಜನಿ­ಕರೂ ವಾಹನಗಳ ನಿಲುಗಡೆಗೆ ಬಳಕೆ ಮಾಡುತ್ತಿದ್ದರು.

ಬಿಬಿಎಂಪಿಗೆ ಸೇರಿದ ಈ ರಸ್ತೆ ಇದಾಗಿದ್ದು, ಮೆಟ್ರೊ ಮಾರ್ಗ ನಿರ್ಮಾಣ ಕಾಮಗಾರಿ ಮುಗಿ­ಯು­ವವರೆಗೆ ನಿರ್ವಹಣೆ ಮಾಡಲು ವಾರದ ಹಿಂದೆಯಷ್ಟೇ ಕೆಎಸ್‌ಸಿಎಗೆ ಹಸ್ತಾಂತರಿಸಲಾಗಿದೆ. ಕೆಎಸ್‌ಸಿಎ ಆಡಳಿತ  ಎಂ.ಜಿ. ರಸ್ತೆಯಿಂದ ಈ ಮಾರ್ಗದ ಪ್ರವೇಶ ಸ್ಥಳದಲ್ಲಿಯೇ ಸಂಚಾರ ತಡೆ ಗೇಟ್‌ ಅಳವಡಿಸಿದ್ದು, ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಿದೆ.

‘ಸಂಚಾರಕ್ಕೆ ಮುಕ್ತವಾಗುವವರೆಗೆ ಕ್ಲಬ್‌ಹೌಸ್‌ ರಸ್ತೆಯನ್ನು ನಿರ್ವಹಣೆ ಮಾಡಲು ಕೆಎಸ್‌ಸಿಎಗೆ ನಾವೇ ಅನುಮತಿ ನೀಡಿದ್ದೇವೆ’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.­ನರಸಿಂಹ­ರಾಜು ಹೇಳುತ್ತಾರೆ.

‘ಕಬ್ಬನ್‌ ರಸ್ತೆ ಕಡೆಗಿನ ತುದಿಯನ್ನು ಮುಚ್ಚಲಾ­ಗಿದ್ದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಇಲ್ಲ. ಇದರಿಂದ ಅನೈತಿಕ ಚಟುವಟಿಕೆಗಳು ನಡೆ­ಯು­ತ್ತಿವೆ ಎಂಬ ದೂರು ಕೆಎಸ್‌ಸಿಎಯಿಂದ ಬಂದಿತ್ತು. ರಸ್ತೆ ನಿರ್ವಹಣೆಗೆ ಅವರು ಆಸಕ್ತಿ ವಹಿಸಿದ್ದ­ರಿಂದ ಈ ಅನುಮತಿಯನ್ನು ನೀಡಿದ್ದೇವೆ’ ಎಂದು ಅವರು ವಿವರಿಸುತ್ತಾರೆ.

‘ಇದೊಂದು ತಾತ್ಪೂರ್ತಿಕ ವ್ಯವಸ್ಥೆಯಾಗಿದ್ದು, ಮೆಟ್ರೊ ಕಾಮಗಾರಿ ಮುಗಿದ ಬಳಿಕ ರಸ್ತೆ ನಿರ್ವ­ಹಣೆ ಹೊಣೆಯನ್ನು ಬಿಬಿಎಂಪಿಯೇ ಹೊರಲಿದೆ’ ಎಂದು ತಿಳಿಸುತ್ತಾರೆ.

ಎಂ.ಜಿ. ರಸ್ತೆಯೂ ಸೇರಿದಂತೆ ಸುತ್ತಲಿನ ಪ್ರದೇಶಗಳ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈ ರಸ್ತೆ ವಾಹನ ನಿಲುಗಡೆ ತಾಣವಾಗಿ ಮಾರ್ಪಟ್ಟಿತ್ತು. ಈ ರಸ್ತೆಯಲ್ಲಿ ಸಂಚಾರವೂ ಇಲ್ಲದ್ದರಿಂದ ವಾಹನಗಳ ನಿಲುಗಡೆಗೆ ಅನುಕೂಲ ಆಗಿತ್ತು.

ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಮಾರ್ಗವನ್ನು 2011ರಲ್ಲೇ ಬಂದ್‌ ಮಾಡಲಾಗಿದೆ. ಇದುವರೆಗೆ ಇಲ್ಲದ ಸಮಸ್ಯೆ ಏಕಾಏಕಿ ಉದ್ಭವವಾದದ್ದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರದು. ಪಂದ್ಯಗಳು ನಡೆ­ದಾಗ ಭದ್ರತಾ ವ್ಯವಸ್ಥೆಗೆ ರಸ್ತೆಯನ್ನು ಮುಚ್ಚಲಾ­ಗು­ತ್ತದೆ. ಆಗಿನ ಸಮಸ್ಯೆ ನಮಗೂ ಅರ್ಥವಾಗು­ತ್ತದೆ. ಆದರೆ, ಸಾರ್ವಜನಿಕರ ಉಪಯೋಗಕ್ಕೆ ಮೀಸಲಾದ ಈ ರಸ್ತೆಯನ್ನು ಕೆಎಸ್‌ಸಿಎ ಈಗ ಮುಚ್ಚಿದ್ದೇಕೆ ಎಂದು ಪ್ರಶ್ನಿಸುತ್ತಾರೆ.

‘ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆ ಅನು­ಮತಿ ಪಡೆಯಲಾಗಿದ್ದು, ಭದ್ರತಾ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕಾರಿನಲ್ಲೇ ಕುಳಿತು ಮದ್ಯಸೇವನೆ ಮಾಡಿ, ಗಲಾಟೆ ನಡೆಸಿದ ಪ್ರಕರಣ­ಗಳು ಇಲ್ಲಿ ನಡೆದಿವೆ. ಅನೈತಿಕ ಚಟುವ­ಟಿಕೆಗಳು ನಡೆಯುತ್ತಿರುವ ಕುರಿತು ನಮ್ಮ ಭದ್ರತಾ ಸಿಬ್ಬಂದಿ ದೂರಿದ್ದರಿಂದ ಈ ಕ್ರಮ ಕೈಗೊಂಡಿದ್ದೇವೆ’ ಎಂದು ಕೆಎಸ್‌ಸಿಎ ಅಧಿಕಾರಿಗಳು ಹೇಳುತ್ತಾರೆ. ‘ರಸ್ತೆಯು ಸಾರ್ವಜನಿಕರ ಸ್ವತ್ತಾಗಿದ್ದು, ಕೆಎಸ್‌­ಸಿಎ ನಿರ್ಬಂಧ­ದಿಂದ ಮುಕ್ತಗೊಳಿಸಬೇಕು’ ಎಂದು ಇಲ್ಲಿ ನಿತ್ಯ ವಾಹನ ನಿಲುಗಡೆ ಮಾಡು­ತ್ತಿದ್ದ ಸಾರ್ವ­ಜನಿಕರು ಬಿಬಿಎಂಪಿ ಆಯುಕ್ತರನ್ನು ಆಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.