ADVERTISEMENT

ಬುದ್ಧಿಮಾಂದ್ಯ ಮಗಳ ಮೇಲೆ ಅತ್ಯಾಚಾರ: ತಂದೆಗೆ 10 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 20:17 IST
Last Updated 28 ಏಪ್ರಿಲ್ 2017, 20:17 IST

ಬೆಂಗಳೂರು: ಬುದ್ಧಿಮಾಂದ್ಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಶ್ರೀರಾಂಪುರದ ಷಣ್ಮುಗ (34) ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 5,000 ದಂಡ ವಿಧಿಸಿ 55ನೇ ಸಿಟಿ ಸಿವಿಲ್‌ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿದೆ.

2014ರ ಆ. 24ರಂದು ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಶ್ರೀರಾಂಪುರ ಠಾಣೆಯ ಪೊಲೀಸರು, ಆರೋಪಿಯನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನು ಬಾಲಕಿಗೆ ಕೊಡಿಸುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ನಿರ್ದೇಶನ ನೀಡಿದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಸ್‌.ಎಲ್‌. ಹಿರೇಮನಿ ವಾದ ಮಂಡಿಸಿದ್ದರು.

ಪ್ರಕರಣದ ವಿವರ: ಕೂಲಿ ಕೆಲಸ ಮಾಡುತ್ತಿದ್ದ ಷಣ್ಮುಗ, ಪತ್ನಿ ಹಾಗೂ 13 ವರ್ಷದ ಬುದ್ಧಿಮಾಂದ್ಯ ಮಗಳ ಜತೆ ವಾಸವಿದ್ದ. ದಂಪತಿ ಕೂಲಿ ಕೆಲಸಕ್ಕೆ ಹೋದಾಗ ಮಗಳನ್ನು ಅಜ್ಜಿಯ (ಷಣ್ಮುಗನ ಅತ್ತೆ) ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಅಜ್ಜಿಯೂ ಕೆಲಸಕ್ಕೆ ಹೋಗುತ್ತಿದ್ದರಿಂದ ಮಗಳು ಒಬ್ಬಂಟಿ
ಯಾಗಿ ಮನೆಯಲ್ಲಿ ಇರುತ್ತಿದ್ದಳು.

ಪತ್ನಿ ಕೆಲಸಕ್ಕೆ ಹೋಗಿದ್ದ ವೇಳೆ ರಾತ್ರಿ ಅಜ್ಜಿಯ ಮನೆಗೆ ಹೋಗಿದ್ದ ಆತ, ಮಗಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಬಳಿಕ ಆಕೆ ಮೇಲೆ ಅತ್ಯಾಚಾರವೆಸಗಿದ್ದ. ಅದೇ ವೇಳೆ ಬಾಲಕಿಗೆ ಊಟ ಕೊಡಲು ಮನೆಗೆ ಹೋಗಿದ್ದ ಅಜ್ಜಿಯು ಕಿಟಕಿಯಲ್ಲಿ ಆ ದೃಶ್ಯವನ್ನು ನೋಡಿ ಸ್ಥಳೀಯರನ್ನು ಸೇರಿಸಿದ್ದರು. ಅಷ್ಟರಲ್ಲಿ ಆತ ಓಡಿಹೋಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.