ADVERTISEMENT

ಬೆಂಗಳೂರಿನ ಪ್ರಕೃತಿಗೆ ರಾಯಲ್ ಮಣೆ!

ಹೆಮ್ಮೆಯ ಸಾಧನೆ ಮಾಡಿದ ಕಿರಿಯ ವಯಸ್ಸಿನ ಛಾಯಾಗ್ರಾಹಕಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:57 IST
Last Updated 10 ಜೂನ್ 2013, 19:57 IST
ಲ್ಯಾಂಡಿಂಗ್‌ಗೆ ರನ್‌ವೇ ಸಿದ್ಧ... ತನ್ನ ಸಹವರ್ತಿಯತ್ತ ಧಾವಿಸಿ ಬರುತ್ತಿರುವ ಕಂದುಬಣ್ಣದ ಬಾತು ಪ್ರಕೃತಿ ಕುಮಾರ್ ಅವರ ಕ್ಯಾಮೆರಾದಲ್ಲಿ ಸೆರೆ ಸಿಕ್ಕಾಗ..
ಲ್ಯಾಂಡಿಂಗ್‌ಗೆ ರನ್‌ವೇ ಸಿದ್ಧ... ತನ್ನ ಸಹವರ್ತಿಯತ್ತ ಧಾವಿಸಿ ಬರುತ್ತಿರುವ ಕಂದುಬಣ್ಣದ ಬಾತು ಪ್ರಕೃತಿ ಕುಮಾರ್ ಅವರ ಕ್ಯಾಮೆರಾದಲ್ಲಿ ಸೆರೆ ಸಿಕ್ಕಾಗ..   

ಬೆಂಗಳೂರು: ನಗರದ ಯುವ ಛಾಯಾಗ್ರಾಹಕಿ ಪ್ರಕೃತಿ ಪಿ. ಕುಮಾರ್ ಇಂಗ್ಲೆಂಡಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಪರಿಸರ ಇತಿಹಾಸ ವಿಭಾಗದ ಸದಸ್ಯತ್ವ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಮಲ್ಲೇಶ್ವರದ ಎಂ.ಇ.ಎಸ್. ಶಿಕ್ಷಣ ಸಂಸ್ಥೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಪ್ರಕೃತಿ, ಸದ್ಯ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸದಸ್ಯೆ (ಅವರಿಗೀಗ 17 ವರ್ಷ) ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ರಾಜಿ ಮಾಡಿಕೊಳ್ಳದ ಈ ಸಂಸ್ಥೆ, ಅತ್ಯಂತ ಪ್ರತಿಭಾನ್ವಿತ ಛಾಯಾಗ್ರಾಹಕರಿಗೆ ಮಾತ್ರ ತನ್ನ ಸದಸ್ಯತ್ವ ನೀಡುತ್ತದೆ.

ಛಾಯಾಗ್ರಹಣ ಮಾತ್ರವಲ್ಲದೆ ಕ್ರೀಡೆಯಲ್ಲೂ ಮುಂದಿರುವ ಪ್ರಕೃತಿ, ಅತ್ಯುತ್ತಮ ಅಥ್ಲೀಟ್ ಆಗಿ ಹೆಸರು ಮಾಡಿದ್ದಾರೆ. ಮಲ್ಲೇಶ್ವರದ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಕ್ರೀಡೆಯಲ್ಲಿ ಮೂರು ಸಲ ಸಮಗ್ರ ಪ್ರಶಸ್ತಿಯನ್ನು ಪಡೆದ ಶ್ರೇಯ ಅವರದಾಗಿದೆ.

ಭರತನಾಟ್ಯ ಮತ್ತು ಕರ್ನಾಟಕ ಸಂಗೀತದಲ್ಲೂ ಅಭ್ಯಾಸ ಮಾಡುತ್ತಿದ್ದಾರೆ. 2009ರಿಂದಲೂ ವನ್ಯಜೀವಿ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿರುವ ಪ್ರಕೃತಿ, ಇದುವರೆಗೆ 200ಕ್ಕೂ ಅಧಿಕ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಕಾಡಿನಿಂದ ನಾಡಿಗೆ ಅವರು ಹೆಕ್ಕಿತಂದ ಅಪರೂಪದ ದೃಶ್ಯಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಛಾಯಾಚಿತ್ರ ಮೇಳಗಳಲ್ಲಿ ಪ್ರದರ್ಶನಗೊಂಡಿವೆ.

ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿ ಮತ್ತು ಭಾರತೀಯ ಫೋಟೋಗ್ರಾಫಿ ಒಕ್ಕೂಟದ ಸದಸ್ಯೆಯಾಗಿರುವ ಪ್ರಕೃತಿ, ಹೆಸರಾಂತ ವನ್ಯಜೀವಿ ಛಾಯಾಗ್ರಾಹಕ ಎಚ್.ವಿ. ಪ್ರವೀಣಕುಮಾರ್ ಅವರ ಪುತ್ರಿ.

`ನಾನು ಚಿಕ್ಕವಳಾಗಿದ್ದ ದಿನಗಳಿಂದಲೂ ನನ್ನ ಅಪ್ಪ-ಅಮ್ಮ ನನ್ನನ್ನು ಕಾಡಿಗೆ ಕರೆದುಕೊಂಡು ಹೋಗುತ್ತಿದ್ದರು. ವನ್ಯ ಜೀವಿಗಳು, ಅವುಗಳ ಜೀವನ ನನ್ನ ಮನಸೂರೆಗೊಂಡಿದ್ದವು. ಅಪ್ಪ ಬೇರೆ ವನ್ಯಜೀವಿ ಛಾಯಾಗ್ರಾಹಕರಾದ ಕಾರಣ ಅವರ ಚಿತ್ರಗಳನ್ನು ನೋಡುತ್ತಲೇ ಬೆಳೆದೆ. ಅವುಗಳೇ ನನ್ನನ್ನು ಈ ಹಂತಕ್ಕೆ ಬೆಳೆಸಿವೆ' ಎಂದು ಹೇಳುತ್ತಾರೆ ಪ್ರಕೃತಿ.

ತಡೋಬಾ (ಮಹಾರಾಷ್ಟ್ರ), ಬಂಡಿಪುರ, ದರೋಜಿ, ರಂಗನತಿಟ್ಟು, ಕೊಕ್ಕರೆ ಬೆಳ್ಳೂರು (ಕರ್ನಾಟಕ), ರೊಲ್ಲಪಡು (ಆಂಧ್ರಪ್ರದೇಶ) ಸೇರಿದಂತೆ ಹಲವು ಪಕ್ಷಿ ಹಾಗೂ ವನ್ಯಜೀವಿ ಧಾಮಗಳಲ್ಲಿ ಅವರು ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ.

`ಭಾರತ ವಿಶಿಷ್ಟ ಜೀವವೈವಿಧ್ಯದ ತಾಣ. ಈ ನೆಲದಲ್ಲಿ ಜನಿಸಲು ನಾನು ಅದೃಷ್ಟ ಹೊಂದಿದ್ದೇನೆ. ಹಲವು ಕಾಡುಗಳನ್ನು ಸುತ್ತಿರುವ ನಾನು ಸಾವಿರಾರು ದೃಶ್ಯಗಳನ್ನು ಸೆರೆ ಹಿಡಿದಿದ್ದೇನೆ. ನನ್ನ ಸ್ನೇಹಿತೆಯರು ವನ್ಯಜೀವಿಗಳ ಚಿತ್ರ ನೋಡಿ ಖುಷಿ ಪಟ್ಟಿದ್ದಾರೆ' ಎಂದು ವಿವರಿಸುತ್ತಾರೆ. `ಪ್ರಾಣಿ ಹಾಗೂ ಪಕ್ಷಿಗಳ ಆ್ಯಕ್ಷನ್ ಚಿತ್ರಗಳನ್ನು ತೆಗೆಯುವುದು ಬಲುಕಷ್ಟ. ಕಾಯುವ ತಾಳ್ಮೆಯೂ ನಮ್ಮಲ್ಲಿ ಇರಬೇಕು' ಎಂದು ಅಭಿಪ್ರಾಯ ಪಡುತ್ತಾರೆ.

ಬೆಂಗಳೂರು, ಜೈಪುರ, ಜೋಧ್‌ಪುರ, ನವದೆಹಲಿ, ಇಂಧೋರ್, ಲಖನೌ, ಕೋಲ್ಕತ ಸೇರಿದಂತೆ ವಿವಿಧ ನಗರಗಳಲ್ಲಿ ಅವರ ಚಿತ್ರಗಳು ಪ್ರದರ್ಶನಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.