ADVERTISEMENT

ಬೆಂಗಳೂರು: ಇಬ್ಬರು ಕಾವಲುಗಾರರ ಕೊಂದಿದ್ದವನ ಬಂಧನ!

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2018, 19:30 IST
Last Updated 30 ಸೆಪ್ಟೆಂಬರ್ 2018, 19:30 IST

ಬೆಂಗಳೂರು: ಕೆಲಸಕ್ಕೆ ಸೇರಿದ ದಿನವೇ ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳನ್ನು ಹತ್ಯೆಗೈದು ಪರಾರಿಯಾಗಿದ್ದ ಅಸ್ಸಾಂನ ಅಜಿತ್ ಬ್ರಹ್ಮ (23) ಹುಳಿಮಾವು ಪೊಲೀಸರ ಬಲೆಗೆ ಬಿದ್ದಿದ್ದಾನೆ.

ತೇಜಸ್ವಿನಿನಗರದಲ್ಲಿ ಮಹಾವೀರ್ ಎಂಬ ಉದ್ಯಮಿ ‘ಸಿಟಿ ವಿಲ್ಲಾ’ ಹೆಸರಿನಲ್ಲಿ ಬಡಾವಣೆ ನಿರ್ಮಿಸುತ್ತಿದ್ದು, ಅಲ್ಲಿ ಅಸ್ಸಾಂನ 20 ಸೆಕ್ಯುರಿಟಿ ಗಾರ್ಡ್‌ಗಳು ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಮಂಗಳವಾರ (ಸೆ.25) ಮಧ್ಯಾಹ್ನವಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ ಅಜಿತ್‌ ಬ್ರಹ್ಮನನ್ನು, ಸೈಯದ್‌ವುಲ್ಲಾ ಹಾಗೂ ಬಿಕ್ರಂ ಎಂಬ ಸೆಕ್ಯುರಿಟಿ ಗಾರ್ಡ್‌ಗಳ ಜತೆ ಆ ದಿನ ರಾತ್ರಿ ಪಾಳಿ ಕೆಲಸಕ್ಕೆ ನಿಯೋಜಿಸಲಾಗಿತ್ತು.

ರಾತ್ರಿ 10ಕ್ಕೆ ಕೆಲಸಕ್ಕೆ ತೆರಳಿದ್ದ ಅಜಿತ್, ‘ನನಗೆ ಈ ವಾತಾವರಣ ಇಷ್ಟವಾಗುತ್ತಿಲ್ಲ. ಬೆಳಿಗ್ಗೆ ಊರಿಗೆ ವಾಪಸ್ ಹೋಗುತ್ತೇನೆ’ ಎಂದು ಸೈಯದ್ ಹಾಗೂ ಬಿಕ್ರಂ ಬಳಿ ಹೇಳಿದ್ದ. ಅದಕ್ಕೆ, ‘ಬಂದ ದಿನವೇ ಕೆಲಸ ಬಿಟ್ಟು ಹೋಗುವ ಮಾತಾಡ್ತೀಯಾ. ಹೀಗಾದರೆ, ನೀನು ಯಾವತ್ತೂ ಉದ್ಧಾರ ಆಗಲ್ಲ’ ಎಂದಿದ್ದರು. ಇದೇ ವಿಚಾರವಾಗಿ ಪರಸ್ಪರರು ಬೈದಾಡಿಕೊಂಡಿದ್ದರು.

ADVERTISEMENT

ಅಜಿತ್‌ಗೆ ಮನಸೋಇಚ್ಛೆ ಥಳಿಸಿದ ಅವರಿಬ್ಬರೂ, ‘ನಾವು ಹೇಳುವವರೆಗೂ ಕೆಲಸ ಬಿಟ್ಟು ಹೋಗುವಂತಿಲ್ಲ’ ಎಂದು ಎಚ್ಚರಿಸಿದ್ದರು. ಹಲ್ಲೆ ನಡೆಸಿದ್ದರಿಂದ ಕೋಪಗೊಂಡಿದ್ದ ಆರೋಪಿ, ಅವರು ನಿದ್ರೆಗೆ ಜಾರುತ್ತಿದ್ದಂತೆಯೇ ಕಬ್ಬಿಣದ ರಾಡ್‌ನಿಂದ ತಲೆ ಹಾಗೂ ಮುಖಕ್ಕೆ ಹೊಡೆದು ಪರಾರಿಯಾಗಿದ್ದ. ಮರುದಿನ ಬೆಳಿಗ್ಗೆ 7ಕ್ಕೆ ಕಾರ್ಮಿಕರು ಕೆಲಸದ ಸ್ಥಳಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.

‘ಅಜಿತ್‌ನ ಸ್ನೇಹಿತ ಕೂಡ ಅಲ್ಲೇ ಕೆಲಸ ಮಾಡುತ್ತಿದ್ದ. ಆತನಿಂದ ಆರೋಪಿಯ ಮೊಬೈಲ್ ಸಂಖ್ಯೆ ಪಡೆದು ತನಿಖೆ ಪ್ರಾರಂಭಿಸಿದೆವು. ಆ ಸಂಖ್ಯೆ ಜೆ.ಪಿ.ನಗರದ ಟವರ್‌ನಿಂದ ಸಂಪರ್ಕ ಪಡೆಯುತ್ತಿತ್ತು. ಅಲ್ಲಿ ಗೆಳೆಯನ ಮನೆಯಲ್ಲಿದ್ದ ಅಜಿತ್‌ನನ್ನು ಶನಿವಾರ ಮಧ್ಯಾಹ್ನ ಪತ್ತೆ ಮಾಡಿದೆವು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.