ADVERTISEMENT

ಬೆಂಗಳೂರು ಕೇಂದ್ರ ವಿ.ವಿಗೆ ವಿಧ್ಯುಕ್ತ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 20:06 IST
Last Updated 7 ಮಾರ್ಚ್ 2018, 20:06 IST
ನಗರದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. (ಎಡದಿಂದ) ಕುಲಸಚಿವ ರಾಮಚಂದ್ರ ಗೌಡ, ಸಚಿವ ಕೆ.ಜೆ.ಜಾರ್ಜ್, ಪ್ರೊ.ಜಾಫೆಟ್ ಇದ್ದಾರೆ. –ಪ್ರಜಾವಾಣಿ ಚಿತ್ರ.
ನಗರದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. (ಎಡದಿಂದ) ಕುಲಸಚಿವ ರಾಮಚಂದ್ರ ಗೌಡ, ಸಚಿವ ಕೆ.ಜೆ.ಜಾರ್ಜ್, ಪ್ರೊ.ಜಾಫೆಟ್ ಇದ್ದಾರೆ. –ಪ್ರಜಾವಾಣಿ ಚಿತ್ರ.   

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸುವ ಮಸೂದೆಗೆ 2015ರಲ್ಲಿ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. 2017ರ ಜುಲೈನಲ್ಲಿ ಮೂರು ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದಿದ್ದವು.

ನಗರದ ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಬಡಾವಣೆ, ಜಯನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಲೇಜುಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರುತ್ತವೆ.

ADVERTISEMENT

ವಿಶ್ವವಿದ್ಯಾಲಯದಲ್ಲಿ ಸದ್ಯ ರಸಾಯನವಿಜ್ಞಾನ, ಜೀವರಸಾಯನ ವಿಜ್ಞಾನ, ಗಣಿತ, ವಾಣಿಜ್ಯ, ಎಂಬಿಎ, ಸಮೂಹ ಸಂವಹನ, ಫ್ಯಾಷನ್‌ ಟೆಕ್ನಾಲಜಿ ಹಾಗೂ ವಿದೇಶಿ ಭಾಷೆಗಳ ವಿಭಾಗಗಳಿವೆ. ಭಾಷಾ ವಿಷಯಗಳು ಸೇರಿ 20 ಹೊಸ ವಿಭಾಗಗಳನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆಯಿಂದ ಅನುಮತಿ ಕೋರಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದಿಂದ ಆರ್ಥಿಕ, ಭೌತಿಕ ಹಾಗೂ ಮಾನವ ಸಂಪನ್ಮೂಲ ವರ್ಗಾಯಿಸುವಂತೆ ಉನ್ನತ ಶಿಕ್ಷಣ ಇಲಾಖೆ ಡಿಸೆಂಬರ್‌ನಲ್ಲಿ ಆದೇಶಿಸಿತ್ತು.

ಕೇಂದ್ರ ವಿಶ್ವವಿದ್ಯಾಲಯವು ಈಗಾಗಲೇ ಕಾಲೇಜುಗಳ ಸಂಯೋಜನೆಗೆ ಅರ್ಜಿ ಆಹ್ವಾನಿಸಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿದೆ. 

‘ಬೆಂಗಳೂರು ವಿಶ್ವವಿದ್ಯಾಲಯದಿಂದ ₹8 ಕೋಟಿ ಹಾಗೂ ಉನ್ನತ ಶಿಕ್ಷಣ ಇಲಾಖೆಯಿಂದ ₹5 ಕೋಟಿ ಬಂದಿದೆ. ಮೂಲಸೌಕರ್ಯ ಕಲ್ಪಿಸಲು ಸುಮಾರು ₹500 ಕೋಟಿ ಅಗತ್ಯವಿದೆ. ಸರ್ಕಾರ ಒಂದೇ ಕಂತಿನಲ್ಲಿ ಈ ಹಣ ನೀಡಬೇಕು ಹಾಗೂ ಹೊಸ ವಿಭಾಗಗಳನ್ನು ಸ್ಥಾಪಿಸಲು ಈಗಿರುವ 43 ಎಕರೆ ಜೊತೆಗೆ ಇನ್ನೂ 50 ಎಕರೆ ಜಾಗ ಬೇಕು’ ಎಂದು ಕುಲಪತಿ ಪ್ರೊ. ಎಸ್‌.ಜಾಫೆಟ್‌ ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಧರ್ಮ, ಜಾತಿಯ ಹೆಸರಿನಲ್ಲಿ ಸಂಘರ್ಷ ಮಾಡುವುದು ಮನುಕುಲಕ್ಕೆ ಮಾಡುವ ದ್ರೋಹ. ವಿಶ್ವಮಾನವರಾಗುವ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ಜಾತಿ, ಧರ್ಮ ಎಂಬ ಸಂಕುಚಿತ ಭಾವನೆ ತೊರೆದು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯ. ಮೂರು ವಿಶ್ವವಿದ್ಯಾಲಯಗಳು ಈ ಬಗ್ಗೆ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

ಲಾಂಛನ ಬಿಡುಗಡೆ
ಸೆಂಟ್ರಲ್‌ ಕಾಲೇಜಿನ ಕೇಂದ್ರ ಬಿಂದುವಾಗಿರುವ ‘ಗಡಿಯಾರ ಗೋಪುರ’ದ ಚಿತ್ರವನ್ನೇ ಬಳಸಿಕೊಂಡು ಕೇಂದ್ರ ವಿಶ್ವವಿದ್ಯಾಲಯದ ಲಾಂಛನವನ್ನು ರೂಪಿಸಲಾಗಿದೆ. ಕುವೆಂಪು ಅವರ ವಿಶ್ವಮಾನವ ಸಂದೇಶದಲ್ಲಿನ ‘ಆಗು ನೀ ಅನಿಕೇತನ’ ಎಂಬ ವಾಕ್ಯವೂ ಇದರಲ್ಲಿದೆ.

‘ಓ ನನ್ನ ಚೇತನ, ಆಗು ನೀ ಅನಿಕೇತನ’ವನ್ನು ವಿಶ್ವವಿದ್ಯಾಲಯದ ಗೀತೆಯನ್ನಾಗಿ ಆಯ್ಕೆ ಮಾಡಲಾಗಿದೆ. ಇದೇ ವೇಳೆ ವಿಶ್ವವಿದ್ಯಾಲಯದ ವೆಬ್‌ಸೈಟ್‌ಗೂ ಚಾಲನೆ ನೀಡಲಾಯಿತು.

ಸೆಂಟ್ರಲ್‌ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ನಿವೃತ್ತ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ,  ಹಿರಿಯ ಪತ್ರಕರ್ತ ಕೆ.ಎನ್‌.ಹರಿಕುಮಾರ್‌, ಸಾಹಿತಿ ನಿಸಾರ್‌ ಅಹಮದ್‌, ಚಲನಚಿತ್ರ ನಿರ್ದೇಶಕ ಎಂ.ಎಸ್‌. ಸತ್ಯು, ಶಿಕ್ಷಣ ತಜ್ಞೆ ಗೀತಾ ನಾರಾಯಣನ್‌, ಹಿರಿಯ ವಿಜ್ಞಾನಿಗಳಾದ ರೊದ್ದಂ ನರಸಿಂಹ, ವಾಸುದೇವ ಕೆ. ಅತ್ರೆ, ಕವಿ ಸಿದ್ಧಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು.

‘ನಿಸಾರ್‌ ಮೇಷ್ಟ್ರಿಂದ ರೇವಣ್ಣಗೆ ಕ್ಲಾಸ್‌’
ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿಸಾರ್‌ ಅಹಮದ್‌ ವೇದಿಕೆಯಲ್ಲಿದ್ದ ತಮ್ಮ ಶಿಷ್ಯ ಎಚ್‌.ಎಂ.ರೇವಣ್ಣಗೆ (ಸಾರಿಗೆ ಸಚಿವ) ಪ್ರೀತಿಯಿಂದ ತರಾಟೆ ತೆಗೆದುಕೊಂಡರು.

‘ಒಂದು ದಿನವೂ ನೀನು ತರಗತಿಗೆ ಬಂದಿಲ್ಲ. ಹಳೆಯ ವಿದ್ಯಾರ್ಥಿ ಎಂದು ಹೆಂಗಯ್ಯಾ ಹೇಳಿಕೊಳ್ಳುತ್ತೀಯಾ? ಯಾವಾಗಲೂ ಕಾಲೇಜಿನ ಕಾಂಪೌಂಡ್‌ ಮೇಲೆ ಗುಂಪು ಕಟ್ಟಿಕೊಂಡು ಕೂತಿರುತ್ತಿದ್ದೆ. ನನ್ನ ಪಾಠ ಕೇಳುವ ಅದೃಷ್ಟವನ್ನು ನೀನು ಕಳೆದುಕೊಂಡೆ ಬಿಡು’ ಎಂದು ನಿಸಾರ್ ಅಹಮದ್‌ ಹೇಳುತ್ತಿದ್ದಂತೆ ರೇವಣ್ಣ ಅವರು ಕೈ ಮುಗಿದು ಕ್ಷಮೆ ಕೋರಿದರು.

ಯುವಿಸಿಇಗೆ ₹25 ಕೋಟಿ ಅನುದಾನ
ಶತಮಾನದ ಸಂಭ್ರಮದಲ್ಲಿರುವ ಯುವಿಸಿಇ ಕಟ್ಟಡ ನವೀಕರಣ ಕಾಮಗಾರಿಗೆ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.

‘ಕಟ್ಟಡ ನವೀಕರಣಕ್ಕಾಗಿ ₹25 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇನೆ. ಇನ್ನೇನು 2 ತಿಂಗಳಲ್ಲಿ ಈ ಕಟ್ಟಡ ನೂರು ವರ್ಷ ಪೂರೈಸುತ್ತದೆ. ರಾಷ್ಟ್ರಕ್ಕೆ ಕೀರ್ತಿ ತಂದಿರುವ ಅನೇಕ ಮಹನೀಯರು ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಈಗಿನ ವಿದ್ಯಾರ್ಥಿಗಳು ಅವರನ್ನು ಮಾದರಿಯನ್ನಾಗಿ ಸ್ವೀಕರಿಸಬೇಕು’ ಎಂದು ಅವರು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.