ADVERTISEMENT

ಬೆಂಗಳೂರು ವಿವಿ ಕುಲಪತಿ ಹುದ್ದೆ: ಸರ್ಕಾರದಿಂದ ಹೆಸರು ಶಿಫಾರಸು ಮಾಡಿಲ್ಲ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 19:30 IST
Last Updated 17 ನವೆಂಬರ್ 2012, 19:30 IST

ಬೆಂಗಳೂರು: `ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಇನ್ನೂ ಯಾವುದೇ ಹೆಸರನ್ನು ಸರ್ಕಾರ ಶಿಫಾರಸು ಮಾಡಿಲ್ಲ. ಬೆಂಗಳೂರು ವಿಶ್ವವಿದ್ಯಾಲಯವನ್ನು ಹೊರತುಪಡಿಸಿ ಇತರೆ ವಿಶ್ವವಿದ್ಯಾಲಯದ ಶಿಕ್ಷಣತಜ್ಞರೊಬ್ಬರನ್ನು ಕುಲಪತಿ ಸ್ಥಾನಕ್ಕೆ ನೇಮಿಸಲು ಚಿಂತನೆ ನಡೆದಿದೆ~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಜವಾಹರ್ ಬಾಲಭವನ ಸೊಸೈಟಿ ಮತ್ತು ಕರ್ನಾಟಕ ರಾಜ್ಯ ಶಿಶು ಕಲ್ಯಾಣ ಸಂಸ್ಥೆಯು ಜಂಟಿಯಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ವಿಶ್ವ ಮಕ್ಕಳ ದಿನಾಚರಣೆ~ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಲೋಕಾಯುಕ್ತರ ನೇಮಕಕ್ಕೆ ಸರ್ಕಾರವು ಇದುವರೆಗೂ ಯಾರ ಹೆಸರನ್ನೂ ಶಿಫಾರಸು ಮಾಡಿಲ್ಲ. ಒಂದು ವೇಳೆ ಸಂತೋಷ ಹೆಗ್ಡೆ ಅವರಂತಹ ಸಮರ್ಥರನ್ನು ಸರ್ಕಾರ ಶಿಫಾರಸು ಮಾಡಿದರೆ    ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಲಾಗುವುದು~ ಎಂದು ಅವರು ತಿಳಿಸಿದರು.

`ನೈಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಯೊಬ್ಬರು ಸೇರಿದಂತೆ ಇನ್ನು ಮೂವರು ಸಚಿವರ ವಿರುದ್ಧದ ಭ್ರಷ್ಟಾಚಾರದ ಪ್ರಕರಣದ ಕಡತಗಳು ನನ್ನ ಮುಂದಿವೆ. ಇವನ್ನು ಅಗತ್ಯ ಬಂದಾಗ ಬಹಿರಂಗಪಡಿಸುತ್ತೇನೆ. ಇಂತಹ ಭ್ರಷ್ಟ ಜನಪ್ರತಿನಿಧಿಗಳ ಬಗ್ಗೆ ಜನತೆಯೇ ಎಚ್ಚೆತ್ತುಕೊಳ್ಳಬೇಕು. ಆಗಲೇ ಭ್ರಷ್ಟಾಚಾರವು ನಿರ್ಮೂಲನೆಯಾಗಲು ಸಾಧ್ಯ~ ಎಂದು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.