ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಕಾಲೇಜುಗಳು ಮತ್ತು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಶೀಘ್ರವೇ ಪರೀಕ್ಷಾ ಅದಾಲತ್ ಹಮ್ಮಿಕೊಳ್ಳಲಿದೆ.
ಗುರವಾರ ಸಾಂಕೇತಿಕವಾಗಿ ಅದಾಲತ್ ಉದ್ಘಾಟಿಸಿ ಮಾತನಾಡಿದ ವಿ.ವಿ.ಕುಲಪತಿ ಡಾ.ಎನ್.ಪ್ರಭುದೇವ್ `ಇದೊಂದು ಕನಸಿನ ಯೋಜನೆಯಾಗಿದ್ದು, 2000ದಿಂದೀಚೆಗೆ ನಗರದಲ್ಲಿರುವ ವಿವಿಧ ಕಾಲೇಜು ಮತ್ತು ವಿದ್ಯಾರ್ಥಿಗಳಿಂದ ಒಟ್ಟು 4,500 ದೂರುಗಳು ನೋಂದಣಿಯಾಗಿವೆ. ಮುಂದಿನ ಐದು ತಿಂಗಳಿನ ಒಳಗೆ ಅಷ್ಟು ದೂರುಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು~ ಎಂದು ಹೇಳಿದರು.
`ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಪಟ್ಟಂತೆ ನಿಯೋಜಿಸಿರುವ ಸಿಬ್ಬಂದಿ ಬಹು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಆಗಮಾತ್ರ ವಿದ್ಯಾರ್ಥಿಗಳ ಅಂಕಪಟ್ಟಿ, ಫಲಿತಾಂಶ ಪ್ರಕಟಣೆಯಲ್ಲಿ ಉಂಟಾಗುವ ದೋಷವನ್ನು ಸರಿಪಡಿಸಬಹುದು~ ಎಂದು ಅವರು ಸಲಹೆ ನೀಡಿದರು.
ಅದಾಲತ್‌ನ ಅಧ್ಯಕ್ಷೀಯ ಅಧಿಕಾರಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಸವಾರ್ಯ, `ದೇಶ ಮತ್ತು ರಾಜ್ಯದಲ್ಲೇ ಮೊದಲ ಬಾರಿಗೆ ಬೆಂಗಳೂರು ವಿ.ವಿಯು ಇಂತಹ ಉತ್ತಮ ಯೋಜನೆಯನ್ನು ಜಾರಿಗೊಳಿಸಿದೆ. ಪರೀಕ್ಷಾ ಅದಾಲತ್‌ನಿಂದ ವಿದ್ಯಾರ್ಥಿ ಸ್ನೇಹಿ ವಾತಾವರಣವನ್ನು ರೂಪುಗೊಳ್ಳಲಿದೆ. ಇದಕ್ಕೆ ಎಲ್ಲ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿ ಹಾಗೂ ವಿ.ವಿ. ಸಿಬ್ಬಂದಿ ಸಹಕಾರ ಅಗತ್ಯವಿದೆ~ ಎಂದು ಅವರು ಹೇಳಿದರು.
`ಪ್ರತಿ ಕಾಲೇಜಿನಲ್ಲಿ ದೂರು ವಿಭಾಗವನ್ನು ತೆರೆಯಬೇಕು. ವಿದ್ಯಾರ್ಥಿಗಳಿಗಿರುವ ಯಾವುದೇ ರೀತಿಯ ಸಮಸ್ಯೆಗಳನ್ನು ಈ ವಿಭಾಗವು ಚರ್ಚಿಸಿ, ಅದಾಲತ್‌ನಲ್ಲಿ ಪರಿಹಾರ ಕಂಡುಕೊಳ್ಳುವತ್ತ ಪ್ರಯತ್ನ ನಡೆಸಬೇಕು~ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಪರೀಕ್ಷೆಯ ಸಂದರ್ಭವಾದ್ದರಿಂದ ದೂರು ಸಲ್ಲಿಸಲು ಇನ್ನಷ್ಟು ಕಾಲಾವಕಾಶ ಬೇಕೆಂದು ಮನವಿ ಮಾಡಿದಾಗ, ಕುಲಪತಿ ಪ್ರಭುದೇವ್ ಅವರು ದೂರು ಸಲ್ಲಿಸುವ ಅವಧಿಯನ್ನು ಏಪ್ರಿಲ್ 30ರಿಂದ ಮೇ 30ಕ್ಕೆ ವಿಸ್ತರಿಸುವ ನಿರ್ಧಾರ ಪ್ರಕಟಿಸಿದರು.
ಹೈಕೋರ್ಟ್‌ನ ಹಿರಿಯ ವಕೀಲ ಎಂ.ಟಿ.ನಾಣಯ್ಯ, ವಿ.ವಿಯ ರಿಜಿಸ್ಟ್ರಾರ್ (ಮೌಲ್ಯಮಾಪನ) ಪ್ರೊ.ಟಿ.ಆರ್.ಸುಬ್ರಹ್ಮಣ್ಯ ಇತರರು ಉಪಸ್ಥಿತರಿದ್ದರು.
ಅದಾಲತ್ ಪ್ರಕ್ರಿಯೆ
ವಿದ್ಯಾರ್ಥಿಗಳು ಅಂಕಪಟ್ಟಿ ವಿತರಣೆ, ಪದವಿ ಪ್ರಮಾಣ ಪತ್ರ, ಆಂತರಿಕ ಅಂಕಪಟ್ಟಿ, ಅಂಕಪಟ್ಟಿ ತಿದ್ದುಪಡಿ , ಫಲಿತಾಂಶ ಪ್ರಕಟಣೆ ಸೇರಿದಂತೆ ಒಟ್ಟು ಐದು ವಿಭಾಗಗಳಲ್ಲಿ ವಿದ್ಯಾರ್ಥಿಗಳು ಮತ್ತು ಕಾಲೇಜುಗಳು ದೂರು ಸಲ್ಲಿಸಬಹುದು.
ಈ ದೂರಿನನ್ವಯ ವಿದ್ಯಾರ್ಥಿಗಳ ಕುಂದು ಕೊರತೆಯನ್ನು ಆಲಿಸಲು ಸೂಚಿತ ದಿನಾಂಕವನ್ನು ನಿಗದಿಪಡಿಸಲಾಗುವುದು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಸವಾರ್ಯ ಮತ್ತು ಹೈಕೋರ್ಟ್‌ನ ಹಿರಿಯ ವಕೀಲ ಎಂ.ಟಿ.ನಾಣಯ್ಯ ಮತ್ತು ಕಾಲೇಜಿನ ಸಿಬ್ಬಂದಿಯನ್ನೊಳಗೊಂಡ ಸಮಿತಿಯು ಅದಾಲತ್ ನಡೆಸಲಿದೆ.
ದ್ಯಾರ್ಥಿಯು ತನಗಾದ ಅನ್ಯಾಯವನ್ನು ವಕೀಲರ ಮೂಲಕ ಅಥವಾ ತಾನೇ ಖುದ್ದು ಸಮಿತಿಯ ಮುಂದೆ ಹೇಳುವ ಅವಕಾಶವಿದೆ. ಸಮಸ್ಯೆ ಆಲಿಸಿದ ಸಮಿತಿಯು ಸಂಜೆಯೊಳಗೆ ತೀರ್ಪು ನೀಡುತ್ತದೆ. ತೀರ್ಪನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.
ವೆಬ್‌ಸೈಟ್- www.attristech.com/bu, www.bu/admexam.in
ಒತ್ತುವರಿ: `ನಿನ್ನೆ ಮೊನ್ನೆಯದಲ್ಲ~
`ಬೆಂಗಳೂರು ವಿಶ್ವವಿದ್ಯಾಲಯದ ಭೂಮಿಯನ್ನು ಒತ್ತುವರಿ ಮಾಡಿರುವ ವಿಷಯ ನಿನ್ನೆ ಮೊನ್ನೆಯದಲ್ಲ. 20 ವರ್ಷಗಳಿಂದ ಹಿಂದೆಯೇ ನಡೆದಿತ್ತು. ಈ ಪ್ರಕರಣವು ಈಗಾಗಲೇ ಹೈಕೋರ್ಟ್‌ನಲ್ಲಿದ್ದು, ಇದು ಯಾರದ್ದೋ ಪರಿಶೀಲನೆಯಿಂದ ಬೆಳಕಿಗೆ ಬಂದಿಲ್ಲ~ ಎಂದು ಬೆಂಗಳೂರು ವಿ.ವಿ ಕುಲಪತಿ ಡಾ.ಎನ್.ಪ್ರಭುದೇವ್ ಸ್ಪಷ್ಟಪಡಿಸಿದರು.
`ವಿ.ವಿಯು ಸಾವಿರ ಎಕರೆ ಭೂಮಿಯನ್ನು ಹೊಂದಿದೆ. ಆದರೆ ಸುತ್ತಮುತ್ತ ಬಡಾವಣೆಗಳ ಜನರು ಸಂಚಾರಕ್ಕೆ ವಿ.ವಿಯ ದಾರಿಯನ್ನೇ ಬಳಸುತ್ತಿರುವುದರಿಂದ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಈಗಾಗಲೇ ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚೆ ನಡೆಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ~ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
` ಬೆಂಗಳೂರು ವಿ.ವಿ.ಯ ಸ್ಥಳೀಯ ಪರಿಶೀಲನಾ ಸಮಿತಿಯು ಕಾಲೇಜುಗಳಿಗೆ ಭೇಟಿ ನೀಡಿದ ಸಂದರ್ಭವನ್ನು ಚಿತ್ರೀಕರಿಸಬೇಕು. ಆ ಮೂಲಕ ಸಮಿತಿಯು ಇನ್ನಷ್ಟು ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬಹುದು~ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.