ADVERTISEMENT

ಬೆಂ.ಗ್ರಾಮಾಂತರ ಚುಕ್ಕಾಣಿ ಯಾರಿಗೆ?

​ಪ್ರಜಾವಾಣಿ ವಾರ್ತೆ
Published 5 ಜನವರಿ 2011, 7:40 IST
Last Updated 5 ಜನವರಿ 2011, 7:40 IST
ಬೆಂ.ಗ್ರಾಮಾಂತರ  ಚುಕ್ಕಾಣಿ ಯಾರಿಗೆ?
ಬೆಂ.ಗ್ರಾಮಾಂತರ ಚುಕ್ಕಾಣಿ ಯಾರಿಗೆ?   

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮಿಶ್ರಫಲ ದೊರೆತಿದೆ. ಬಹುತೇಕ ಸಮಬಲದ ಫಲಿತಾಂಶ ಈ ಬಾರಿಯ ಪಂಚಾಯಿತಿ ಚುನಾವಣೆಯಲ್ಲಿ ವ್ಯಕ್ತವಾಗಿದ್ದರೂ, ಜಿಲ್ಲಾ ಪಂಚಾಯಿತಿ ಆಡಳಿತ ಯಾರಿಗೆ ದೊರೆಯುತ್ತದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ನೆಲಮಂಗಲದ ನಾಗರಾಜು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಪಕ್ಕದ ದೇವನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಗೆ ಖಾತೆ ತೆರೆಯುವುದೂ ಸಾಧ್ಯವಾಗಿಲ್ಲ. ಆದರೆ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಪ್ರತಿನಿಧಿಸುವ ಹೊಸಕೋಟೆಯಲ್ಲಿ ಜೆಡಿಎಸ್ ಶೂನ್ಯಕ್ಕೆ ಕುಸಿದಿದೆ.

ಬಿಜೆಪಿಗೆ ತಿರುಗೇಟು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ನೆಲಮಂಗಲದ ನಾಗರಾಜು ಈ ಬಾರಿ ತೆರೆಮರೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದರು. ಪರಿಣಾಮವಾಗಿ ಅಲ್ಲಿನ ಎಲ್ಲ ನಾಲ್ಕು ಜಿಲ್ಲಾ ಪಂಚಾಯಿತಿ ಸ್ಥಾನಗಳು ಜೆಡಿಎಸ್ ಪಾಲಾಗಿವೆ. ನೆಲಮಂಗಲ ತಾಲ್ಲೂಕು ಪಂಚಾಯಿತಿಯೂ ಜೆಡಿಎಸ್ ವಶಕ್ಕೆ ಹೋಗಿದೆ. 15 ಸ್ಥಾನಗಳ ಪೈಕಿ 13ರಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದರೆ, ಎರಡು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಜಯ     ಗಳಿಸಿದ್ದಾರೆ.

ADVERTISEMENT

ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯವನ್ನು ಪೂರ್ಣವಾಗಿ ಧ್ವಂಸ ಮಾಡುವ ಮೂಲಕ ನಾಗರಾಜು ಕಮಲ ಪಾಳೆಯಕ್ಕೆ ತಿರುಗೇಟು ನೀಡಿದ್ದಾರೆ. ಇಲ್ಲಿನ ತ್ಯಾಮಗೊಂಡ್ಲು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಸಚಿವ ಸಿ.ಚೆನ್ನಿಗಪ್ಪ ಪುತ್ರ ಡಿ.ಸಿ.ವೇಣುಗೋಪಾಲ್ ಗೆಲುವು ಸಾಧಿಸಿದ್ದಾರೆ.

ಖಾತೆ ತೆರೆಯದ ಬಿಜೆಪಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಗೆ ಖಾತೆ ತೆರೆಯುವುದಕ್ಕೂ ಅವಕಾಶ ದೊರೆತಿಲ್ಲ. ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಾಬಲ್ಯಕ್ಕೆ ಶರಣಾಗಿರುವ ಬಿಜೆಪಿ ಶೂನ್ಯಕ್ಕಿಳಿದಿದೆ. ಇಲ್ಲಿನ ನಾಲ್ಕು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ತಲಾ ಎರಡರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಯ ಸಾಧಿಸಿವೆ. ಕಾಂಗ್ರೆಸ್ ಶಾಸಕ ವೆಂಕಟಸ್ವಾಮಿ ಅವರು ಪತ್ನಿ ಎನ್.ಸವಿತಾ ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಮಾಜಿ ಶಾಸಕ ಜಿ.ಚಂದ್ರಣ್ಣ ಪ್ರಾಬಲ್ಯ ಮೆರೆದಿದ್ದು, 14 ಸ್ಥಾನಗಳನ್ನು ಪಡೆದಿರುವ ಜೆಡಿಎಸ್ ಅಧಿಕಾರಕ್ಕೇರಿದೆ. ಕಾಂಗ್ರೆಸ್ 6 ಕ್ಷೇತ್ರಗಳಿಗೆ ಸೀಮಿತವಾಗಿದೆ. ತಾಲ್ಲೂಕು ಪಂಚಾಯಿತಿಯಲ್ಲೂ ಬಿಜೆಪಿಯದ್ದು ಶೂನ್ಯ ಸಾಧನೆ!

ಮತ್ತೆ ಪ್ರಾಬಲ್ಯ ಸಾಬೀತು: ದೊಡ್ಡಬಳ್ಳಾಪುರದಲ್ಲಿ ಮಾಜಿ ಸಂಸದ ಆರ್.ಎಲ್.ಜಾಲಪ್ಪ ಕುಟುಂಬದ ಪ್ರಭಾವ ಮತ್ತೆ ಸಾಬೀತಾಗಿದೆ. ಜಾಲಪ್ಪ ಅವರ ಪುತ್ರ ಜೆ.ನರಸಿಂಹಸ್ವಾಮಿ ಅವರ ನೇತೃತ್ವದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ನರಸಿಂಹಸ್ವಾಮಿ ಅವರ ಪುತ್ರ ಅರವಿಂದ್ ಇಲ್ಲಿನ ಸಾಸಲು ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿದ್ದ ಅವರು ದಾಖಲೆಯ 4,225 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಸತ್ಯಪ್ರಕಾಶ್ ಅವರನ್ನು ಸೋಲಿಸಿದ್ದಾರೆ.

ಇಲ್ಲಿನ ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಿದೆ. ದೊಡ್ಡಬೆಳವಂಗಲದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ತಾಲ್ಲೂಕು ಪಂಚಾಯಿತಿಯ 19 ಕ್ಷೇತ್ರಗಳಲ್ಲಿ 12 ಸ್ಥಾನಗಳನ್ನು ಪಡೆದ ಬಿಜೆಪಿ ಅಧಿಕಾರ ಹಿಡಿದಿದೆ. ಜೆಡಿಎಸ್ ನಾಲ್ಕು ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಮೂರರಲ್ಲಿ ಗೆದ್ದಿದೆ. ಒಟ್ಟಾರೆಯಾಗಿ ಇಲ್ಲಿ ಜಾಲಪ್ಪ ಕುಟುಂಬ ಮತ್ತೆ ರಾಜಕೀಯ ಪ್ರಾಬಲ್ಯ ಮೆರೆದಿದೆ.

ಶೂನ್ಯಕ್ಕಿಳಿದ ಜೆಡಿಎಸ್: ಹೊಸಕೋಟೆಯಲ್ಲಿ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಅವರ ಅಬ್ಬರಕ್ಕೆ ಜೆಡಿಎಸ್ ನುಚ್ಚುನೂರಾಗಿದೆ. ಹಿಂದೆ ಜನತಾ ಪರಿವಾರದ ಪ್ರಾಬಲ್ಯವಿದ್ದ ಇಲ್ಲಿ ಈ ಬಾರಿ ಜೆಡಿಎಸ್ ಶೂನ್ಯಕ್ಕೆ ಕುಸಿದಿದೆ. ಎಲ್ಲ ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದ್ದು, ಕ್ಷೇತ್ರದ ಮೇಲೆ ಸಚಿವರ ಹಿಡಿತ ಮತ್ತಷ್ಟು ಹೆಚ್ಚಿದೆ.ತಾಲ್ಲೂಕು ಪಂಚಾಯಿತಿಯಲ್ಲಿ 19 ಕ್ಷೇತ್ರಗಳಿವೆ. 12ರಲ್ಲಿ ಬಿಜೆಪಿ ಜಯ ಸಾಧಿಸಿದ್ದರೆ, ಏಳು ಕಾಂಗ್ರೆಸ್ ವಶವಾಗಿವೆ. ಇಲ್ಲಿಯೂ ಜೆಡಿಎಸ್ ಖಾತೆ ತೆರೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.