ADVERTISEMENT

ಬೆಂ. ವಿವಿ ರಿಜಿಸ್ಟ್ರಾರ್‌ಗೆ ಹೈಕೋರ್ಟ್ ಮಂಗಳಾರತಿ

ಸ್ನಾತಕೋತ್ತರ ಪದವಿ ವಿದ್ಯಾರ್ಥಿಯೊಬ್ಬರ ಪ್ರೌಢಪ್ರಬಂಧ ಅಂಗೀಕರಿಸಲು ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ನ್ಯಾಯಮೂರ್ತಿ ವಿನೀತ್ ಕೊಠಾರಿ
ನ್ಯಾಯಮೂರ್ತಿ ವಿನೀತ್ ಕೊಠಾರಿ   

ಬೆಂಗಳೂರು: ಸ್ನಾತಕೋತ್ತರ ಪದವಿ ವಿದ್ಯಾರ್ಥಿಯೊಬ್ಬರ ಪ್ರೌಢಪ್ರಬಂಧ ಅಂಗೀಕರಿಸಲು ನಿರ್ಲಕ್ಷ್ಯ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮತ್ತು ಕುಲಪತಿಯವರನ್ನು ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ.

‘ನೀವು ಕಲಿಸುವ ಗುರುಗಳಲ್ಲ. ನಿಮ್ಮಷ್ಟಕ್ಕೇ ನೀವೇ ಮಹಾನ್‌ ಗುರುಗಳು ಎಂದು ಭಾವಿಸಿದ್ದೀರಿ. ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದಾಗಿಸಿ ವಿದ್ಯಾರ್ಥಿಗಳು ಕೋರ್ಟ್‌ ಮೆಟ್ಟಿಲು ಹತ್ತುವಂತೆ ಮಾಡುತ್ತಿದ್ದೀರಿ. ಅವರ ಭವಿಷ್ಯದ ಜೊತೆ ಆಟವಾಡುತ್ತಿರುವ ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಜರುಗಿಸಬಾರದು’ ಎಂದು ಪ್ರಶ್ನಿಸಿದೆ.

ಈ ಸಂಬಂಧ ಸಲ್ಲಿಸಿದ್ದ ರಿಟ್ ಅರ್ಜಿಯೊಂದ‌ನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಕೆ.ಆರ್.ರೂಪಾ, ‘ಪ್ರಶಾಂತ್ ಬೆನ್ನುಮೂಳೆ ನೋವಿನಿಂದ ಬಳಲುತ್ತಿದ್ದ ಕಾರಣ ಸಕಾಲದಲ್ಲಿ ಪ್ರೌಢಪ್ರಬಂಧ ಮಂಡಿಸಲು ಆಗಿರಲಿಲ್ಲ. ಪ್ರಬಂಧ ಸ್ವೀಕರಿಸಲು ಕಾಲೇಜು ಮತ್ತು ವಿಶ್ವವಿದ್ಯಾಲಯ ನಿರ್ಲಕ್ಷ್ಯ ತೋರಿವೆ’ ಎಂದು ಆಕ್ಷೇಪಿಸಿದರು.

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ‘ವಿಶ್ವವಿದ್ಯಾಲಯದ  ಕುಲಪತಿ ಯಾರು’ ಎಂದು ಖಾರವಾಗಿ ಪ್ರಶ್ನಿಸಿದರಲ್ಲದೆ, ‘ನಿಮ್ಮ ಅಧಿಕಾರಿಶಾಹಿ ವರ್ತನೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಉಂಟು ಮಾಡುತ್ತಿದ್ದೀರಿ’ ಎಂದು ಪ್ರತಿವಾದಿಗಳ ಪರ ವಕೀಲರಿಗೆ ಛೀಮಾರಿ ಹಾಕಿದರು. ‘ಒಂದು ವೇಳೆ ರಿಜಿಸ್ಟ್ರಾರ್, ಕುಲಪತಿ ವಿರುದ್ಧ ಬೇರೆ ಪ್ರಕರಣಗಳಲ್ಲಿ ಏನಾದರೂ ಆರೋಪ ಕೇಳಿ ಬಂದರೆ ದಂಡ ವಿಧಿಸುತ್ತೇನೆ’ ಎಂದೂ ಎಚ್ಚರಿಸಿದರು.

‘ಈ ಆದೇಶ ಕೈಸೇರಿದ ಒಂದು ತಿಂಗಳ ಒಳಗಾಗಿ ವಿದ್ಯಾರ್ಥಿ ಒಪ್ಪಿಸುವ ಪ್ರೌಢಪ್ರಬಂಧ ಸ್ವೀಕರಿಸಬೇಕು ಮತ್ತು ಇದರ ಫಲಿತಾಂಶದ ಪ್ರಕ್ರಿಯೆಯನ್ನು ಮೂರು ತಿಂಗಳ ಒಳಗಾಗಿ ಮುಕ್ತಾಯಗೊಳಿಸಿ ಪ್ರಕಟಿಸಬೇಕು’ ಎಂದು ಆದೇಶಿಸಿ ಅರ್ಜಿ ವಿಲೇವಾರಿ ಮಾಡಿದರು.

ಪ್ರಕರಣವೇನು?: ಉತ್ತರ ಪ್ರದೇಶದ ವಾರಾಣಸಿಯ ಪ್ರಶಾಂತ್ ಸಿಂಗ್‌ ನಗರದ ಟಿ.ಸಿ.ಪಾಳ್ಯದಲ್ಲಿರುವ ಗಾರ್ಡನ್‌ ಸಿಟಿ ಕಾಲೇಜಿನಲ್ಲಿ 2012–13ರಲ್ಲಿ ಸಂವಹನ ವಿಭಾಗದ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದರು. ಪ್ರತಿಭಾವಂತ ವಿದ್ಯಾರ್ಥಿ ಎನಿಸಿದ್ದ ಪ್ರಶಾಂತ್ 4ನೇ ಸೆಮಿಸ್ಟರ್‌ ಪರೀಕ್ಷೆ ಬರೆಯುವ ಸಮಯದಲ್ಲಿ ಬೆನ್ನುಮೂಳೆ ಕಾಯಿಲೆಗೆ ತುತ್ತಾಗಿ ಪ್ರೌಢಪ್ರಬಂಧವನ್ನು ಸಕಾಲದಲ್ಲಿ ಸಲ್ಲಿಸಿರಲಿಲ್ಲ. ಇದರಿಂದಾಗಿ ಅವರು ಪದವಿ ಪೂರೈಸದೇ ಉಳಿಯುಂವತಾಯಿತು.

ನಂತರ ಅವರು ಬೆಂಗಳೂರು ವಿಶ್ವವಿದ್ಯಾಲಯದ  ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಿ ಈ ಕುರಿತಂತೆ ಮನವಿ ಸಲ್ಲಿಸಿದಾಗ, ‘ರಿಜಿಸ್ಟ್ರಾರ್‌ ನಿಮ್ಮ ತರಹದ್ದೇ ಇನ್ನೂ ನಾಲ್ಕೈದು ಪ್ರಕರಣಗಳನ್ನು ತಂದರೆ ನಿಮಗೆ ಪರಿಹಾರ ನೀಡುತ್ತೇನೆ’ ಎಂದು ತಿಳಿಸಿದ್ದಾಗಿ ಅರ್ಜಿದಾರರು ಕೋರ್ಟ್‌ಗೆ ದೂರಿದ್ದರು. ಈ ಕುರಿತಂತೆ 2017ರ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಶಾಂತ್ ಪರ ಡಿ.ಮಂಜುಳಾ ವಕಾಲತ್ತು ವಹಿಸಿದ್ದರು.

ಡಿಸರ್ಟೇಶನ್‌ ಪದ ಬರೆಯಲು ಬರೋದಿಲ್ಲ...?
‘ನಿಮಗೆ ಡಿಸರ್ಟೇಶನ್ (ಪ್ರೌಢಪ್ರಬಂಧ) ಎಂಬ ಪದವನ್ನು ಸರಿಯಾಗಿ ಇಂಗ್ಲಿಷ್‌ನಲ್ಲಿ ಬರೆಯಲು ಬರೋದಿಲ್ಲ. ನೀವೆಲ್ಲಾ ಎಂತಹ ಅಧಿಕಾರಶಾಹಿ ಮನಸ್ಸು ಹೊಂದಿದ್ದೀರಿ ಎಂಬುದು ಇದರಿಂದಲೇ ಗೊತ್ತಾಗುತ್ತದೆ’ ಎಂದು ನ್ಯಾಯಮೂರ್ತಿಗಳು ವಿಶ್ವವಿದ್ಯಾಲಯಕ್ಕೆ ಚಾಟಿ ಬೀಸಿದರು.

ಅಂಕಪಟ್ಟಿಯಲ್ಲಿ ಡಿಸರ್ಟೇಶನ್‌ ಎಂಬ ಇಂಗ್ಲಿಷ್‌ ಪದದ ಅಕ್ಷರಗಳಲ್ಲಿ ತಪ್ಪು ಇರುವುದನ್ನು ಪತ್ತೆ ಹಚ್ಚಿದ ನ್ಯಾಯಮೂರ್ತಿಗಳು ವಿಶ್ವವಿದ್ಯಾಲಯದ ಪರ ವಕೀಲರಿಗೆ, ‘ನೀವು ಇನ್ನು ಒಂದಕ್ಷರ ವಾದ ಮಂಡಿಸಿದರೂ ನಿಮ್ಮ ರಿಜಿಸ್ಟ್ರಾರ್‌ಗೆ ದಂಡ ವಿಧಿಸುತ್ತೇನೆ’ ಎಂದು ಎಚ್ಚರಿಸಿದರು.

**

ವಿದ್ಯಾರ್ಥಿಗಳ ಮೇಲೆ ವಿನಾಕಾರಣ ಸವಾರಿ ಮಾಡುವ ನಿಮ್ಮಂಥವರಿಗೆ ಸರಿಯಾಗಿ ದಂಡ ವಿಧಿಸಿದರೆ ಬುದ್ಧಿ ಬರುತ್ತದೆ
- ವಿನೀತ್ ಕೊಠಾರಿ, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.