ADVERTISEMENT

ಬೆಲೆ ಏರಿಕೆ ಖಂಡಿಸಿ ಫೆ. 20, 21ರಂದು ಮುಷ್ಕರ

ಎಐಯುಟಿಯುಸಿ 20ನೇ ಅಖಿಲ ಭಾರತ ಸಮ್ಮೇಳದಲ್ಲಿ ತೆಗೆದುಕೊಂಡ ನಿರ್ಣಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2013, 19:42 IST
Last Updated 4 ಜನವರಿ 2013, 19:42 IST
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ನಡೆದ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‌ನ 20ನೇ ಅಖಿಲ ಭಾರತ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಸಂಘಟನೆಯ ಕಾರ್ಯಕರ್ತರು ಘೋಷಣೆ ಕೂಗಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ನಡೆದ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‌ನ 20ನೇ ಅಖಿಲ ಭಾರತ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಸಂಘಟನೆಯ ಕಾರ್ಯಕರ್ತರು ಘೋಷಣೆ ಕೂಗಿದರು.   

ಬೆಂಗಳೂರು: ಬೆಲೆಯೇರಿಕೆ ಹಾಗೂ ದುಡಿಯುವ ವರ್ಷದ ಮೇಲಿನ ಶೋಷಣೆಯನ್ನು ವಿರೋಧಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ನೇತೃತ್ವದಲ್ಲಿ ಎರಡು ದಿನಗಳ ದೇಶವ್ಯಾಪಿ ಮುಷ್ಕರ ಹಾಗೂ ಹರತಾಳ ಫೆಬ್ರುವರಿ 20 ಹಾಗೂ 21ರಂದು ನಡೆಯಲಿದೆ.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ನಡೆದ ಎಐಯುಟಿಯುಸಿಯ 20ನೇ ಅಖಿಲ ಭಾರತ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

`ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಜಿಡಿಪಿ ಕುಸಿಯುತ್ತಿದೆ. ಇದೇ ಹೊತ್ತಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ರತ್ನಗಂಬಳಿ ಹಾಸಲಾಗುತ್ತಿದೆ. ಬಂಡವಾಳಶಾಹಿಗಳ ಹಾಗೂ ಸಾಮ್ರಾಜ್ಯಶಾಹಿಗಳ ಪರವಾಗಿ ಸರ್ಕಾರ ನೀತಿ ರೂಪಿಸುತ್ತಿದೆ. ಇಂತಹ ತಾರತಮ್ಯ ನೀತಿಯನ್ನು ಖಂಡಿಸಿ ಮುಷ್ಕರ ನಡೆಸಲಾಗುತ್ತಿದೆ' ಎಂದು ಸಮ್ಮೇಳನದಲ್ಲಿ ಘೋಷಿಸಲಾಯಿತು. 

`ಎಲ್ಲ ವಲಯಗಳ ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ಆಶಾ, ಬಿಸಿಯೂಟ, ಸರ್ವ ಶಿಕ್ಷ ಅಭಿಯಾನ ಯೋಜನೆಗಳ ನೌಕರರಿಗೆ ಕಾಯಂ ನೌಕರರಿಗೆ ನೀಡುವ ಸೌಲಭ್ಯವನ್ನು ನೀಡಬೇಕು. ವಿಳಂಬ ಮಾಡದೆ ಕನಿಷ್ಠ ಕೂಲಿ ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೆ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ' ಎಂದು ಅಧಿವೇಶನದಲ್ಲಿ ಅಭಿಪ್ರಾಯಪಡಲಾಯಿತು.

ಸಂಘಟನೆಯ ಅಖಿಲ ಭಾರತ ಅಧ್ಯಕ್ಷ ಕೃಷ್ಣ ಚಕ್ರವರ್ತಿ ಮಾತನಾಡಿ, `ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬಿಕ್ಕಟ್ಟು ಮನೆಮಾಡಿದೆ. ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಬೆಲೆ ಏರಿಕೆ ಇಂದು ಸಾಮಾನ್ಯ ಸಂಗತಿಯಾಗಿದೆ. ಪಾತಕಿಗಳ ರಕ್ಷಣೆ- ದುರ್ಬಲರ ಶೋಷಣೆ ಸರ್ಕಾರದ ಧೋರಣೆಯಾಗಿದೆ' ಎಂದು ಕಿಡಿಕಾರಿದರು.

`ಇಂತಹ ಸಂದರ್ಭದಲ್ಲಿ ಜನರು ತಾವೇ ಹೋರಾಟದ ಹಾದಿ ಹಿಡಿಯುತ್ತಿದ್ದಾರೆ. ಇದೀಗ ನಮ್ಮ ದೇಶದಲ್ಲೂ ಸ್ವಯಂಪ್ರೇರಿತ ಹೋರಾಟ ನಡೆಯುತ್ತಿದೆ. ಸೂಕ್ತ ನಾಯಕತ್ವದ ಕೊರತೆಯ ಕಾರಣದಿಂದಾಗಿ ಹೋರಾಟದಲ್ಲಿ ನಿರೀಕ್ಷಿತ ಜಯ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕಾರ್ಮಿಕ ವರ್ಗ ಸಂಘಟಿತರಾಗಿ ಹೋರಾಟ ನಡೆಸಲು ಸಜ್ಜಾಗಬೇಕು' ಎಂದು ಕಿವಿಮಾತು ಹೇಳಿದರು.

ಸಂಘಟನೆಯ ಉಪಾಧ್ಯಕ್ಷ ಕೆ.ರಾಧಾಕೃಷ್ಣ ಮಾತನಾಡಿ, ದುರ್ಬಲ ವರ್ಗದವರಿಗೆ ಬಲ ತುಂಬುವುದು ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣ. ಆದರೆ, ಇಂದು ಸರ್ಕಾರವೇ ದುರ್ಬಲರನ್ನು ತುಳಿಯಲು ಪ್ರಚೋದನೆ ನೀಡುತ್ತಿದೆ. ಪಾತಕಿಗಳಿಗೆ ರಕ್ಷಣೆ ನೀಡಿ ಅಮಾಯಕರ ಮೇಲೆ ದಾಳಿ ನಡೆಸುವುದು ಸರ್ಕಾರದ ನೀತಿಯಾಗಿ ಬಿಟ್ಟಿದೆ ಎಂದು ಬೇಸರಪಟ್ಟರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಂಕರ್ ಸಹಾ ಮಾತನಾಡಿದರು. ನೇಪಾಳ ಎಎನ್‌ಟಿಯುಎಫ್ ಉಪಾಧ್ಯಕ್ಷ ಜಯಾ ಕರ್ಕಿ, ಗ್ರೀಸ್ ಪಿ.ಎ.ಎಂ.ಇ ಅಂತರರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥ ಜಾರ್ಜ್ ಪೋನ್‌ಟಿಕೋಸ್, ಶ್ರೀಲಂಕಾ ಎಸಿಟಿಯುಎಫ್ ವಸಂತ ಸಮರಸಿಂಘ ಮತ್ತಿತರರು ಹಾಜರಿದ್ದರು. ಇದಕ್ಕೂ ಮುನ್ನ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಸಾಗಿದ ಮೆರವಣಿಗೆಯಲ್ಲಿ  ಎರಡು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.