ADVERTISEMENT

ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2011, 19:30 IST
Last Updated 26 ಜೂನ್ 2011, 19:30 IST
ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ   

ಯಲಹಂಕ: ಯುಪಿಎ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಯಲಹಂಕ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಸ್ಥಳೀಯ ಪೊಲೀಸ್ ಠಾಣೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಉಪನಗರದ ಮದರ್ ಡೇರಿ ವೃತ್ತದಿಂದ ಮೆರವಣಿಗೆ ಪ್ರಾರಂಭಿಸಿದ ಪ್ರತಿಭಟನಾಕಾರರು, ನಂತರ ಪೊಲೀಸ್ ಠಾಣೆ ವೃತ್ತದಲ್ಲಿ ಸಭೆ ನಡೆಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಪ್ರಧಾನಿ ಡಾ.ಮನ ಮೋಹನ್ ಸಿಂಗ್ ಪ್ರತಿಕೃತಿಯನ್ನು ದಹಿಸಿದ ಪ್ರತಿಭಟನಾಕಾರರು, 10 ನಿಮಿಷಗಳ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಈ ಭಾಗದಲ್ಲಿ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

 ಜಿ.ಪಂ. ಸದಸ್ಯೆ ವಾಣಿಶ್ರೀ ವಿಶ್ವನಾಥ್, ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಮಧುಶ್ರೀ ಸ್ವಾಮಿ, ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೀತಾ ವಿವೇಕಾನಂದ, ಕಾರ್ಯದರ್ಶಿ ಭಾಗ್ಯಜ್ಯೋತಿ, ನಗರ ಜಿಲ್ಲಾ ಅಧ್ಯಕ್ಷೆ ಧನಲಕ್ಷ್ಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಜಾತ್ರೆ: ಬೆಂಗಳೂರು ಉತ್ತರ ತಾಲ್ಲೂಕು ಜಾಲಾ ಹೋಬಳಿ ಕುದುರೆಗೆರೆ ಮತ್ತು ಬೈನಹಳ್ಳಿ ಗ್ರಾಮದಲ್ಲಿ ಊರು ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು.

ಬುಧವಾರ ರಾತ್ರಿ ಮಹಿಳೆಯರು ದೇವಿಗೆ ಬೆಲ್ಲದ ಆರತಿ ಪೂಜೆ ನೆರವೇರಿಸಿದರು. ಗುರುವಾರ ಬೆಳಗ್ಗೆ  ಬೈನಹಳ್ಳಿ ಗ್ರಾಮದಿಂದ ಹೊರಟ  ಮಾರಮ್ಮ ದೇವಿಯ ರಥೋತ್ಸವ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕುದುರೆಗೆರೆ ಗ್ರಾಮದಲ್ಲಿರುವ ಮಾರಮ್ಮ ದೇಗುಲ ತಲುಪಿತು. ನಂತರ ಭಕ್ತಾಧಿಗಳು ಅಗ್ನಿಕುಂಡದಲ್ಲಿ ನಡೆಸಿ ತಮ್ಮ ಹರಕೆ ತೀರಿಸಿದರು.

 ಶಾಸಕ ಕೃಷ್ಣಬೈರೇಗೌಡ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ,ರಾಮ ಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಇ.ಕೃಷ್ಣಪ್ಪ, ದಯಾನಂದರೆಡ್ಡಿ,ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.