ADVERTISEMENT

ಬೆಳಿಗ್ಗೆ ಸಿಕ್ಕಿಬಿದ್ದ, ರಾತ್ರಿ ಪರಾರಿಯಾದ ರೌಡಿ...

ಪೊಲೀಸ್ ವಶದಿಂದ ತಪ್ಪಿಸಿಕೊಂಡ ಕೊಲೆ ಯತ್ನ ಪ್ರಕರಣದ ಆರೋಪಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:53 IST
Last Updated 12 ಜುಲೈ 2017, 6:53 IST
ಪ್ರಶಾಂತ್
ಪ್ರಶಾಂತ್   

ಬೆಂಗಳೂರು: ಕೊಲೆಯತ್ನ ಪ್ರಕರಣ ಸಂಬಂಧ ಶನಿವಾರ ಬೆಳಿಗ್ಗೆಯಷ್ಟೇ  ಕೋಲಾರದಲ್ಲಿ ಸಿಕ್ಕಿಬಿದ್ದಿದ್ದ ಕುಖ್ಯಾತ ರೌಡಿ ಪ್ರಶಾಂತ್ (26), ಎಚ್‌ಎಎಲ್‌  ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಅದೇ ದಿನ ರಾತ್ರಿ ತಪ್ಪಿಸಿಕೊಂಡು ಹೋಗಿದ್ದಾನೆ.

ಮಹಾಲಕ್ಷ್ಮಿಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಮೇ 8ರಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪಿಎ (ಆಪ್ತ ಸಹಾಯಕ) ಎಸ್‌.ವಿನಯ್ ಅವರನ್ನು ಅಪಹರಿಸಲು ಯತ್ನಿಸಿದ್ದ ಗ್ಯಾಂಗ್‌ನಲ್ಲಿ ಪ್ರಶಾಂತ್ ಕೂಡ ಇದ್ದ. ಅದೂ ಸೇರಿದಂತೆ ಎಂಟು ಪ್ರಕರಣಗಳಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದ.

ಎಚ್‌ಎಎಲ್‌ನ ಮಂಜುನಾಥನಗರ ನಿವಾಸಿಯಾದ ಪ್ರಶಾಂತ್, 2 ತಿಂಗಳ ಹಿಂದೆ ನೆರೆಮನೆಯ ಕೃಷ್ಣಪ್ಪ (55) ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಶನಿವಾರ ಬೆಳಗಿನ ಜಾವ ಕೋಲಾರದಲ್ಲಿ ಆತನನ್ನು ಬಂಧಿಸಿದ್ದ ಎಚ್ಎಎಲ್ ಪೊಲೀಸರು, ನಂತರ ನಗರಕ್ಕೆ ಕರೆತಂದು ಸಂಜೆವರೆಗೂ ಠಾಣೆಯಲ್ಲೇ ವಿಚಾರಣೆ ನಡೆಸಿದ್ದರು. ಈ ವೇಳೆ ಆತ, ವಿನಯ್ ಅವರನ್ನು ಅಪಹರಿಸಲು ಯತ್ನಿಸಿದ್ದ ಪ್ರಕರಣದಲ್ಲಿ ತನ್ನ ಪಾತ್ರವೂ ಇರುವುದಾಗಿ ತಪ್ಪೊಪ್ಪಿಕೊಂಡಿದ್ದ. ಅಷ್ಟೇ ಅಲ್ಲದೇ, ವರ್ತೂರು ಹಾಗೂ ಕೆ.ಆರ್.ಪುರ ಠಾಣೆಗಳ ವ್ಯಾಪ್ತಿಯಲ್ಲಿ ಸಹಚರರೊಂದಿಗೆ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದ ಸಂಗತಿಯನ್ನೂ ಬಾಯ್ಬಿಟ್ಟಿದ್ದ.ನಂತರ ಪೊಲೀಸರು, ‘ಹಲ್ಲೆ

ADVERTISEMENT

ನಡೆಸಿದ್ದ ಸ್ಥಳ ಹಾಗೂ ಸಹಚರರ ಮನೆಗಳನ್ನು ತೋರಿಸು ಬಾ’ ಎಂದು ಜೀಪಿನಲ್ಲಿ ಪ್ರಶಾಂತ್‌ನನ್ನು ಕರೆದುಕೊಂಡು ಹೋಗಿದ್ದರು.  ಆ ಪ್ರದೇಶ ಪರಿಶೀಲನೆ ಕೆಲಸ ಮುಗಿದ ಬಳಿಕ ಪೊಲೀಸರು, ಅಪಹರಣ ಯತ್ನ ಪ್ರಕರಣದ ವಿಚಾರಣೆಗಾಗಿ ಆತನನ್ನು ಮಹಾಲಕ್ಷ್ಮಿಲೇಔಟ್ ಪೊಲೀಸರಿಗೆ ಒಪ್ಪಿಸಲು ಹೊರಟಿದ್ದರು.

ರಾತ್ರಿ 8.30ರ ಸುಮಾರಿಗೆ ಜೀಪು ಕೆ.ಆರ್.ಪುರದ ಐಟಿಐ ಮೈದಾನ ಸಮೀಪ ಬಂದಿದೆ. ಆಗ ಪ್ರಶಾಂತ್, ‘ಮೂತ್ರ ವಿಸರ್ಜನೆ ಮಾಡಬೇಕು’ ಎಂದಿದ್ದಾನೆ. ಕೈಗೆ ತೊಡಿಸಿದ್ದ ಕೋಳ ಬಿಚ್ಚಿದ ಇಬ್ಬರು ಸಿಬ್ಬಂದಿ, ಆತನನ್ನು ರಸ್ತೆ ಬದಿಗೆ ಕರೆದೊಯ್ದಿದ್ದಾರೆ.

ಈ ವೇಳೆ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ, ಬೇರೊಂದು ಪ್ರಕರಣದ ಬಗ್ಗೆ ಠಾಣೆ ಸಿಬ್ಬಂದಿ ಜತೆ ಮೊಬೈಲ್‌ನಲ್ಲಿ ಮಾತನಾಡುತ್ತ ಜೀಪ್‌ನಲ್ಲೇ ಇದ್ದರು.

ಮೂತ್ರ ವಿಸರ್ಜನೆ ಮಾಡುವವನಂತೆ ಕುಳಿತ ಪ್ರಶಾಂತ್, ತಕ್ಷಣ ಎದ್ದು ಸಿಬ್ಬಂದಿಯನ್ನು ತಳ್ಳಿ ಓಡಿದ್ದಾನೆ. ಪೊಲೀಸರು ಅರ್ಧ ಕಿಲೊಮೀಟರ್‌ನಷ್ಟು ದೂರ ಬೆನ್ನಟ್ಟಿದರೂ, ಕೈಗೆ ಸಿಗದೆ ಪರಾರಿಯಾಗಿದ್ದಾನೆ.

25 ಪ್ರಕರಣಗಳಿವೆ: ಪ್ರಶಾಂತ್ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 25ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. 2016ರಲ್ಲಿ ಈತನ ಹೆಸರನ್ನು ಎಚ್‌ಎಎಲ್ ಠಾಣೆಯ ರೌಡಿ ಪಟ್ಟಿಯಲ್ಲಿ ಸೇರಿಸಲಾಗಿದೆ.

ಮೂರು ತಂಡ ರಚನೆ: ‘ಪ್ರಶಾಂತ್ ವಿರುದ್ಧ ಪೊಲೀಸ್ ವಶದಿಂದ ತಪ್ಪಿಸಿಕೊಂಡ (ಐಪಿಸಿ 224) ಹಾಗೂ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ (ಐಪಿಸಿ 353) ಆರೋಪದಡಿ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನ ಪತ್ತೆಗೆ 3 ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

**

ಕುಟುಂಬವೇ ಮಚ್ಚು ಹಿಡಿದ ಕತೆ

2016ರ ಆ.8ರಂದು ಎಚ್‌ಎಎಲ್‌ ಠಾಣೆ ರೌಡಿಶೀಟರ್ ಶಿವರಾಜ್ ಹಾಗೂ ಆತನ ಗ್ಯಾಂಗ್, ಪ್ರಶಾಂತ್‌ನ ಅಣ್ಣ ವಿನೋದ್‌ನನ್ನು ಮಂಜುನಾಥನಗರದಲ್ಲಿ ಕೊಚ್ಚಿ ಕೊಲೆ ಮಾಡಿತ್ತು.

ಆ ದಿನ ಬೆಳಿಗ್ಗೆಯಷ್ಟೇ ಪೊಲೀಸರು ಪರೇಡ್ ನಡೆಸಿ ಈ ರೌಡಿಗಳಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ, ಅಲ್ಲಿಂದ ಮನೆಗೆ ಹಿಂದಿರುಗುವಾಗಲೇ ಎದುರಾಳಿ ಗ್ಯಾಂಗ್ ವಿನೋದ್‌ನನ್ನು ಹತ್ಯೆಗೈದಿತ್ತು. ನಂತರ ಪೊಲೀಸರು ಶಿವರಾಜ್‌ ಹಾಗೂ ಸಹಚರರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಅಣ್ಣನ ಕೊಲೆಗೆ ಪ್ರತೀಕಾರವಾಗಿ ಪ್ರಶಾಂತ್ ಹಾಗೂ ಪೋಷಕರು, ಶಿವರಾಜ್‌ನ ಹತ್ಯೆಗೆ ಸಂಚು ರೂಪಿಸಿದ್ದರು. ಆದರೆ, ಆತ ಜೈಲಿನಿಂದ ಬಿಡುಗಡೆಯಾಗದ ಕಾರಣ ಕುಟುಂಬದ ಮೇಲೆ ದಾಳಿ ನಡೆಸಿದ್ದರು. ಶಿವರಾಜ್‌ನ ತಂದೆ ಕೃಷ್ಣಪ್ಪ ಅವರ ಮೇಲೆ ಮಚ್ಚು–ಲಾಂಗುಗಳಿಂದ ಹಲ್ಲೆ ನಡೆಸಿ, ಕುಟುಂಬ ಸಮೇತ ಪರಾರಿಯಾಗಿದ್ದರು.

ಪ್ರಶಾಂತ್‌ನ ಪೋಷಕರು ಇನ್ನೂ ಪತ್ತೆಯಾಗಿಲ್ಲ. ತಾಯಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರೆ, ತಂದೆ ದೆಹಲಿಯಲ್ಲಿ ಭೂಗತರಾಗಿದ್ದಾರೆ. ಪ್ರಶಾಂತ್ ಮಾತ್ರ ಪೊಲೀಸರ ಕಣ್ತಪ್ಪಿಸಿ ಬೆಂಗಳೂರು ಹಾಗೂ ಕೋಲಾರದಲ್ಲಿ ಓಡಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.