ADVERTISEMENT

ಬೇಕೇ ಬೇಕು ಶೌಚಾಲಯ ಚಳವಳಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಬೆಂಗಳೂರು:  ನಗರ ಹಾಗೂ ಗ್ರಾಮಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷವು ನಗರದ ವುಡ್‌ಲ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಭಾನುವಾರ `ಬೇಕೇ ಬೇಕು ಶೌಚಾಲಯ~ ಎಂಬ ವಿನೂತನ ಸಮ್ಮೇಳನ ನಡೆಸಿ ಸರ್ಕಾರದ ಗಮನಸೆಳೆಯಿತು.

ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, `ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗೆ ದಿನನಿತ್ಯ ಸಾವಿರಾರು ಜನ ಭೇಟಿ ನೀಡುತ್ತಾರೆ. ಅವರಲ್ಲಿ ಹೆಚ್ಚಿನವರು ಮಧುಮೇಹಿಗಳಾಗಿದ್ದಾರೆ. ಅವರು ಮೂತ್ರ ವಿಸರ್ಜನೆ ಮಾಡಬೇಕೆಂದರೆ ಇಲ್ಲಿ ಒಂದು ಶೌಚಾಲಯವಿಲ್ಲ. ಉಳಿದಂತೆ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಸಾಮಾನ್ಯ ಶೌಚಾಲಯವಾಗಲಿ ಅಥವಾ ವ್ಯವಸ್ಥಿತ ಶೌಚಾಲಯಗಳಾಗಲೀ ಇಲ್ಲ. ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳುತ್ತಿರುವ ಸರ್ಕಾರ ಶೌಚಾಲಯಗಳ ನಿರ್ಮಾಣದ ಬಗ್ಗೆ ಏಕೆ ಗಮನಹರಿಸುತ್ತಿಲ್ಲ~ ಎಂದು ಪ್ರಶ್ನಿಸಿದರು.

`ಹತ್ತಾರು ವರ್ಷಗಳಿಂದ ಇಂತಹ ಚಳವಳಿ ಮಾಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ~ ಎಂದು ವಿಷಾದಿಸಿದ ಅವರು, `ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಸಚಿವರು ರಾಜಭವನದಿಂದ ಲಾಲ್‌ಬಾಗ್‌ವರೆಗೆ ಪಾದಯಾತ್ರೆ ನಡೆಸಲಿ. ಆ ಸ್ಥಳಗಳಲ್ಲಿ ಒಂದಾದರೂ ಶೌಚಾಲಯವಿದ್ದರೆ ತೋರಿಸಲಿ~ ಎಂದು ಸವಾಲು ಹಾಕಿದರು.

`ಬೆಂಗಳೂರು ನಗರವೊಂದರಲ್ಲಿಯೇ 15 ಸಾವಿರ ಶೌಚಾಲಯಗಳನ್ನು ನಿರ್ಮಿಸಬೇಕು. ಉಳಿದಂತೆ ಪ್ರತಿ ಗ್ರಾಮಕ್ಕೆ ಐದು ಶೌಚಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ ಐದು ಕಿ.ಮೀ.ಗೆ ಒಂದು ಶೌಚಾಲಯದಂತೆ ರಾಜ್ಯದಲ್ಲಿ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸಬೇಕು~ ಎಂದು ಒತ್ತಾಯಿಸಿದರು.

ಆಸ್ಪತ್ರೆ, ಸರ್ಕಾರಿ ಶಾಲೆ, ರೈಲ್ವೆ ಹಾಗೂ ಬಸ್ ನಿಲ್ದಾಣಗಳೂ ಸೇರಿದಂತೆ ಎಲ್ಲೆಡೆ ಶೌಚಾಲಯಗಳು ಅವ್ಯವಸ್ಥೆಯಿಂದ ಕೂಡಿವೆ.  ಇದೊಂದು ಗಂಭೀರ ವಿಷಯ ಎಂದು ತಮಟೆ ಬಾರಿಸುವ ಮೂಲಕ ಘೋಷಣೆಗಳನ್ನು ಕೂಗಿದರು. ಚಳವಳಿಯಲ್ಲಿ ಶೌಚಾಲಯ ಉಪಕರಣಗಳನ್ನು ಪ್ರದರ್ಶಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.