ಬೆಂಗಳೂರು: ನಗರದ ನಂದಿನಿ ಬಡಾವಣೆಯಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ನೀರಿನ ಬೇಡಿಕೆ ಹೆಚ್ಚಾಗಿದೆ. ಸಮರ್ಪಕ ನೀರು ಪೂರೈಕೆ ಇಲ್ಲದೇ ಬಡಾವಣೆಯ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಫೆಬ್ರುವರಿ ತಿಂಗಳಲ್ಲಿಯೇ ನೀರಿನ ಸಮಸ್ಯೆ ವಿಪರೀತವಾಗಿರುವುದರಿಂದ ಮುಂದಿನ ಬೇಸಿಗೆಯ ದಿನಗಳು ಇನ್ನೆಷ್ಟು ಘೋರವಾಗಲಿವೆಯೋ ಎಂದು ಬಡಾವಣೆಯ ಜನತೆ ಕಳವಳ ಪಡುವಂತಾಗಿದೆ.
ನಗರದ ಉತ್ತರ ತಾಲ್ಲೂಕಿನ ವಾರ್ಡ್ ಸಂಖ್ಯೆ 43 ರ ನಂದಿನಿ ಬಡಾವಣೆ, ಜೈ ಮಾರುತಿ ನಗರ, ಕುರುಬರಹಳ್ಳಿ, ಸಾಕಮ್ಮ ಬಡಾವಣೆ ಹಾಗೂ ಕೃಷ್ಣಾನಂದ ನಗರದ ಹಲವು ಭಾಗಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.
`ಈ ಭಾಗದಲ್ಲಿ ನೀರು ಬರೋದೇ ಅಪರೂಪ ಆಗಿದೆ. ಬಂದರೂ ಸರಿಯಾದ ಸಮಯವಿಲ್ಲ. ವಾಟರ್‌ಮನ್‌ಗಳು ಮನಸ್ಸಿಗೆ ಬಂದಾಗ ನೀರು ಬಿಡುತ್ತಾರೆ. ವಾಟರ್‌ಮನ್‌ಗಳ ಕಾಟ ಜಾಸ್ತಿ ಆಗಿದೆ. ಒಂದು ಬೀದಿಗೆ ನೀರು ಬಿಟ್ಟರೆ, ಇನ್ನೊಂದು ಬೀದಿಗೆ ಬಿಡೋದಿಲ್ಲ. ಇದರ ಬಗ್ಗೆ ಎಂಜಿನಿಯರ್‌ಗಳಿಗೆ ದೂರು ಹೇಳಿ ಸಾಕಾಗಿದೆ. ಮಿನಿಷ್ಟ್ರೂ ನಮ್ಮ ನೀರಿನ ಗೋಳನ್ನ ಕೇಳಿ ಸುಮ್ಮನಾಗಿದ್ದಾರೆ. ಇನ್ನು ಯಾರಿಗೆ ಹೇಳಿದ್ರೂ ಯಾವುದೇ ಪ್ರಯೋಜನ ಇಲ್ಲ~ ಎಂಬುದು ಸ್ಥಳೀಯರ ನಿವಾಸಿ ದಾಸಪ್ಪ ಅವರ ದೂರು.
`ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಹೇಳೀ ಹೇಳೀ ಸಾಕಾಗಿದೆ. ಈ ವಿಚಾರದಲ್ಲಿ ಅಧಿಕಾರಿಗಳು ಅಸಡ್ಡೆಯ ಮಾತಾಡ್ತಾರೆ. ಜಾಸ್ತಿ ದುಡ್ಡು ಕೊಟ್ಟು ಟ್ಯಾಂಕರ್‌ಗಳಿಂದ ನೀರು ತುಂಬಿಸಿಕೊಳ್ಳೋದು ಅನಿವಾರ್ಯ ಆಗಿದೆ~ ಎಂಬುದು ನಂದಿನಿ ಬಡಾವಣೆಯ ಜೈ ಮಾರುತಿ ನಗರದ ಮಲ್ಲೇಶ್ ಅವರ ದೂರು.
`ನೀರಿನ ಸಮಸ್ಯೆಯಿಂದ ದಿನಾಲೂ ಪರದಾಡೋದು ತಪ್ಪಿಲ್ಲ. ಟ್ಯಾಂಕರ್ ನೀರು ಪೂರೈಕೆದಾರರು ಒಂದು ಟ್ಯಾಂಕ್ ನೀರಿಗೆ 500 ರಿಂದ 600 ರೂಪಾಯಿ ಕೇಳ್ತಾರೆ. ಬೇಸಿಗೆ ದಿನಗಳಲ್ಲಿ ಸಾವಿರ ರೂಪಾಯಿ ಕೊಟ್ಟರೂ ನೀರು ಸಿಗೋದು ಕಷ್ಟ. ಟ್ಯಾಂಕರ್ ನೀರಿಗೆ ಕಡಿವಾಣ ಹಾಕೋರೇ ಇಲ್ಲ. ಬಹುಶಃ ವಾಟರ್‌ಮನ್‌ಗಳು ಮತ್ತು ಟ್ಯಾಂಕರ್ ನೀರು ಪೂರೈಕೆದಾರರು ಮಾತುಕತೆ ಮಾಡಿಕೊಂಡು ನೀರಿನ ಅಭಾವ ಸೃಷ್ಟಿ ಮಾಡ್ತಿದ್ದಾರೆ ಅಂತ ಕಾಣುತ್ತೆ. ಸಚಿವರೇ ನೀರಿನ ರಾಜಕಾರಣ ಮಾಡ್ತಿದ್ದಾರೆ ಅಂತ ಶಾಸಕರು ಮತ್ತು ಪಾಲಿಕೆ ಸದಸ್ಯರೇ ಹೇಳೋವಾಗ ಇನ್ನು ಯಾರ ಹತ್ತಿರ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳೋದು~ ಎನ್ನುತ್ತಾರೆ ನಂದಿನಿ ಬಡಾವಣೆ 4 ನೇ ಬ್ಲಾಕ್‌ನ ನಿವಾಸಿ ಪ್ರಭಾಕರ.
`ವಾಟರ್‌ಮನ್‌ಗಳು ಒಂದು ಬೀದಿಗೆ ನೀರು ಬಿಟ್ಟು ಮತ್ತೊಂದು ಬೀದಿಗೆ ನೀರು ಬಿಡದೇ ತಾರತಮ್ಯ ಮಾಡ್ತಿದ್ದಾರೆ. ನೀರು ಬಿಡ್ತಾರೆ ಅಂತ ರಾತ್ರಿ ಪೂರ್ತಿ ಕಾದೂ ಕಾದೂ ದಿನವೂ ಜಾಗರಣೆ ಆಗಿದೆ. ದುಡ್ಡು ಕೊಟ್ಟರೂ ನೀರು ಸಿಗದೇ ಇರೋ ಪರಿಸ್ಥಿತಿಯಲ್ಲಿ ಹೇಗೆ ಬಾಳಬೇಕೋ ತಿಳೀತ್ತಿಲ್ಲ~ ಎಂಬುದು ಕುರುಬರಹಳ್ಳಿಯ ನಿವಾಸಿ ಯಶೋಧ ಅವರ ಅಳಲು.
`ನಮ್ಮಿಂದ ಗೆದ್ದು ಹೋಗಿರೋರು ನಮ್ಮ ಸಮಸ್ಯೆಗಳನ್ನ ಕೇಳ್ತಿಲ್ಲ. ಜಲ ಮಂಡಳಿಯ ಅಧಿಕಾರಿಗಳು ಬೇಜಾವಾಬ್ದಾರಿಯಾಗಿ ನಡೆದುಕೊಳ್ತಾರೆ. ಸ್ಥಳೀಯ ಪಾಲಿಕೆ ಸದಸ್ಯರು ಶಾಸಕರ ಕಡೆಗೆ, ಶಾಸಕರು ಅಧಿಕಾರಿಗಳ ಕಡೆಗೆ, ಅಧಿಕಾರಿಗಳು ಮಂತ್ರಿಗಳ ಕಡೆಗೆ ಕೈ ತೋರಿಸುತ್ತಲೇ ಇದ್ದಾರೆ. ಸರಿಯಾಗಿ ನೀರು ಪೂರೈಕೆಯಾಗದೇ ದಿನನಿತ್ಯ ಪರಿಪಾಟಲು ಪಡೋ ಸ್ಥಿತಿ ಬಂದಿದೆ. ಬೇಸಿಗೆಯ ಪ್ರಾರಂಭದಲ್ಲೇ ಪರಿಸ್ಥಿತಿ ಹೀಗಿರೋವಾಗ ಇನ್ನು ಬೇಸಿಗೆಯಲ್ಲಿ ಕುಡಿಯೋ ನೀರು ಸಿಗೋದು ಅನುಮಾನ~ ಎಂದು ಬಡಾವಣೆಯ ನೀರಿನ ಬವಣೆಯನ್ನು ಬಿಚ್ಚಿಟ್ಟವರು ಕೃಷ್ಣಾನಂದ ನಗರದ ಶ್ರೀ ಕಂಠ.
`ಬಡಾವಣೆಯಲ್ಲಿ ಸುಮಾರು 60 ಕೊಳವೆಬಾವಿಗಳನ್ನ ಹಾಕ್ಸಿದ್ದಾರೆ. ಅವುಗಳ ನಿರ್ವಹಣೆ ಕಡೆಗೆ ಒಬ್ಬರೂ ಗಮನ ನೀಡ್ತಿಲ್ಲ. ಕೆಲವು ಕೊಳವೆಬಾವಿಗಳು ಕೆಟ್ಟು ನಿಂತಿದ್ರೆ, ಕೆಲವು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸೀತಿದೆ. ಮುಂದೆ ನಮ್ಮ ಬಡಾವಣೆಗಳ ನೀರಿನ ಸಮಸ್ಯೆ ಇನ್ನೂ ಜಾಸ್ತಿ ಆಗುತ್ತೆನೋ ಅನ್ನೋ ಭಯ ಶುರು ಆಗಿದೆ. ಕುಡಿಯೋ ನೀರಿನ ಸಮಸ್ಯೆ ಎದುರಾಗೋ ಹೊಸತರಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡ್ತಿದ್ದ ಜಲಮಂಡಳಿ ಈಗ ಅದನ್ನೂ ನಿಲ್ಸಿದೆ. 40 - 50 ರೂಪಾಯಿ ಕೊಟ್ಟು ಟ್ಯಾನ್ ನೀರು ಕೊಂಡ್ಕೊಳ್ಳೋದು ನಮ್ಮ ಹಣೇಲಿ ಬರೆದು ಬಿಟ್ಟಿದೆ~ ಎನ್ನುತ್ತಾರೆ ಸಾಕಮ್ಮ ಬಡಾವಣೆಯ ಗೀತಮ್ಮ.
`ಜಲಮಂಡಳಿಯ ನೀರಿನ ಟ್ಯಾಂಕರ್‌ಗಳ ನೀರನ್ನೇ ಅಧಿಕಾರಿಗಳು ಜಾಸ್ತಿ ದುಡ್ಡು ಕೊಟ್ಟೋರಿಗೆ ಮಾರಿಕೊಳ್ತಾರೆ. ದುಡ್ಡಿದ್ದವರಿಗೆ ಇಲ್ಲಿ ನೀರು ಸಿಗುತ್ತೆ. ಬಡವರು ನೀರಿಲ್ಲದೇ ಸಾಯಬೇಕಾದ್ದು ಅನಿವಾರ್ಯ. ಇಷ್ಟೆಲ್ಲ ಆದರೂ ನೀರಿನ ಮೀಟರ್ ಬಿಲ್ ಮಾತ್ರ ತಿಂಗಳಿಗೆ ತಪ್ಪದೇ ಬರುತ್ತೆ~ ಎನ್ನುತ್ತಾರೆ ನಂದಿನಿ ಲೇಔಟ್ ಪರಿಸರ ಸಂರಕ್ಷಣಾ ಸಂಘದ ಉಪಾಧ್ಯಕ್ಷ ವೆಂಕಟಾಚಲಯ್ಯ.
| ಹದಿನೈದು ದಿನಕ್ಕೊಮ್ಮೆ ನೀರು |
| ಶೇಖರಣೆಯ ವ್ಯವಸ್ಥೆ ಇಲ್ಲ ನಂದಿನಿ ಬಡಾವಣೆಯಲ್ಲಿ ಜಲಮಂಡಳಿಗೆ ನೀರಿನ ಶೇಖರಣೆಯ ವ್ಯವಸ್ಥೆ ಇಲ್ಲ. ಹೀಗಾಗಿ ರಾಜಾಜಿನಗರದ ಕೇತಮಾರನಹಳ್ಳಿಯ 2 ಎಂಜಿ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್‌ನಿಂದ ನೀರು ಪಡೆಯಲಾಗ್ತಿದೆ. ಅಲ್ಲಿಂದ ನೀರು ಸರಿಯಾಗಿ ಪಂಪ್ ಆಗದೇ ಬಡಾವಣೆಯ ಎತ್ತರದ ಪ್ರದೇಶಗಳಿಗೆ ಸರಿಯಾಗಿ ನೀರು ಪೂರೈಕೆ ಆಗ್ತಿಲ್ಲ. ನೀರಿನ ಅಭಾವ ಇದ್ದಾಗಲೂ ನಾಲ್ಕೈದು ದಿನಕ್ಕೆ ಒಂದು ಬಾರಿಯಾದ್ರೂ ನೀರು ಪೂರೈಸೋ ವ್ಯವಸ್ಥೆಯನ್ನ ಮಾಡ್ತಿದ್ದೇವೆ. ನಂದಿನಿ ಬಡಾವಣೆಯಲ್ಲಿ ಹೊಸದಾಗಿ 4 ಎಂಜಿ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೀತಿದೆ. ಇದು ಇನ್ನು ಸುಮಾರು ಆರು ತಿಂಗಳಲ್ಲಿ ಪೂರ್ತಿಯಾಗೋ ನಿರೀಕ್ಷೆ ಇದೆ. ಆನಂತರ ನಂದಿನಿ ಲೇಔಟ್ ವಿಭಾಗದ ನೀರಿನ ಸಮಸ್ಯೆ ಪರಿಹಾರವಾಗೋ ವಿಶ್ವಾಸ ಇದೆ. ನೀರಿನ ಅಭಾವ ಹೆಚ್ಚಾಗಿರೋ ಕಡೆಗಳಿಗೆ ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡ್ತೇವೆ~ |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.