ಬೆಂಗಳೂರು: ತುಂಬಾ ಕಡಿಮೆ ವೇತನವನ್ನು ಪಡೆಯುತ್ತಿರುವ ಬ್ಯಾಂಕ್ ಠೇವಣಿ ಸಂಗ್ರಹಕಾರರಿಗೆ ಸಮರ್ಪಕ ವೇತನ ನೀಡಲು ಸರ್ಕಾರವು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು ಎಂದು ಅಖಿಲ ಭಾರತ ಬ್ಯಾಂಕ್ ಠೇವಣಿ ಸಂಗ್ರಹಕಾರರ ಸಂಘಟನೆಯು ಒತ್ತಾಯಿಸಿದೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್, `ಬ್ಯಾಂಕ್ ಠೇವಣಿ ಸಂಗ್ರಹಕಾರರಿಗೆ ಇಂದಿಗೂ ಬ್ಯಾಂಕ್‌ಗಳು 750 ರಿಂದ 800 ರೂ.ಗಳ ವೇತನ ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಲಿದೆ~ ಎಂದರು.
ಸುಪ್ರೀಂಕೋರ್ಟ್ ಈಗಾಗಲೇ ಠೇವಣಿ ಸಂಗ್ರಹಕಾರರಿಗೆ ನೌಕರರ ಸ್ಥಾನ ಘೋಷಣೆಗೆ ಸೂಚಿಸಿದೆ. ಪ್ರತಿ ತಿಂಗಳು ಕನಿಷ್ಠ ವೇತನ 9200 ರೂ.ಗಳನ್ನು ಸಂಘಟನೆಯು ಹಿಂದಿನಿಂದಲೂ ಒತ್ತಾಯ ಮಾಡುತ್ತಲೇ ಬಂದಿದೆ. ಆದರೆ ಬ್ಯಾಂಕ್‌ಗಳು ಯಾವ ಕ್ರಮಕ್ಕೂ ಮುಂದಾಗಿಲ್ಲ ಎಂದು ಅವರು ದೂರಿದರು.
`ಠೇವಣಿ ಸಂಗ್ರಹಕಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇದೇ 17 ರಂದು ಬಸವನಗುಡಿಯ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಒಂದು ದಿನಗಳ ಅಧಿವೇಶನವನ್ನು ಆಯೋಜಿಸಲಾಗಿದೆ~ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಮಜ್ದೂರ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ರಾಮಕೃಷ್ಣ ಪೂಂಜಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.