ADVERTISEMENT

ಬ್ಲಾಗ್ ಲೋಕ: ಅನಾಮಿಕತೆಯ ಹೆಸರಲ್ಲಿ ಲಘು ಬರಹ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:39 IST
Last Updated 12 ಜೂನ್ 2013, 19:39 IST

ಬೆಂಗಳೂರು: `ಬ್ಲಾಗ್ ಲೋಕ ಸಾಕಷ್ಟು ಬೆಳೆದಿದೆ. ಆದರೆ, ಪೂರ್ವಸಿದ್ಧತೆಯಿಲ್ಲದ, ಅಷ್ಟೇನೂ ಅನುಭವ ಇರದ ಯುವ ಮನಸ್ಸುಗಳು ಅನಾಮಿಕತೆಯ ಹೆಸರಿನಲ್ಲಿ ಲಘು ಬರಹಗಳಲ್ಲಿ ತೊಡಗಿಕೊಂಡಿರುವುದರ ಬಗ್ಗೆಯೂ ಚರ್ಚೆ ನಡೆಯುವ ಅಗತ್ಯವಿದೆ' ಎಂದು `ಕೆಂಡಸಂಪಿಗೆ' ವೆಬ್‌ಸೈಟ್‌ನ ಸಂಪಾದಕ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.

ನಗರದ ಸುಚಿತ್ರ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ `ಅಂತರ್ಜಾಲ ಯಾನ' ಬ್ಲಾಗ್ ಮತ್ತು ವೆಬ್‌ಸೈಟ್ ಲೋಕದಲ್ಲೊಂದು ಇಣುಕು ಕಾರ್ಯಕ್ರಮದಲ್ಲಿ ಮಾತನಾಡಿದರು.

`ಬ್ಲಾಗ್ ಹಾಗೂ ವೆಬ್‌ಸೈಟ್‌ಗಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವಾಗ ಏನನ್ನೂ ಓದದೇ ಹೆಸರಾಂತ ಬರಹಗಾರರ ಲೇಖನಗಳ ವಿರುದ್ಧ ಲಘುಧಾಟಿಯಲ್ಲಿ ಪ್ರತಿಕ್ರಿಯೆ ಬರೆದು ಮಜಾ ನೋಡುವವರ ದೊಡ್ಡ ಪಡೆಯೊಂದು ಸೃಷ್ಟಿಯಾಗುತ್ತಿದೆ ಎಂಬ ಆತಂಕ ಕಾಡುತ್ತದೆ. ಹೀಗಿದ್ದೂ ವಿಭಿನ್ನ ಅಭಿರುಚಿಯಿರುವ ಲೇಖನಗಳು ಪ್ರಕಟ ಆಗುತ್ತಿರುವುದು ಬ್ಲಾಗ್ ಹಾಗೂ ವೆಬ್‌ಸೈಟ್‌ಗಳ ವಿಶೇಷ' ಎಂದು ಹೇಳಿದರು.

ಕತೆಗಾರ ಎಂ.ಎಸ್.ಶ್ರೀರಾಮ್, `ಯೌವ್ವನದಲ್ಲಿ ಸಹಜವಾಗಿ ದೊಡ್ಡ ಬರಹಗಾರರ ಲೇಖನಗಳನ್ನು ತಿರಸ್ಕರಿಸುವ ಮನಸ್ಥಿತಿಯಿರುತ್ತದೆ. ಮೊದಲೆಲ್ಲ ಈ ರೀತಿಯ ಅವಕಾಶ ಸಿಗದೇ ಅನೇಕರು ಸಜ್ಜನರಾಗಬೇಕಾದ ಸಂದರ್ಭ ಒದಗಿ ಬಂತು. ಆದರೆ ಈಗ ಬ್ಲಾಗ್‌ಗಳಲ್ಲಿ ಯುವಕರಿಂದ ತಿರಸ್ಕಾರ ಹುಟ್ಟುತ್ತಲೇ  ಹೊಸ ಸೃಷ್ಟಿಗೆ ಅನುವಾಗುತ್ತಾರೆ.

ಹಾಗಾಗಿ ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ' ಎಂದು ಪ್ರತಿಕ್ರಿಯಿಸಿದರು.

`ಬ್ಲಾಗ್‌ಗಳಲ್ಲಿ ಯಾವುದೇ ರೀತಿಯ ಪದಮಿತಿಯಿರುವುದಿಲ್ಲ. ಹೆಸರೇ ಗಳಿಸದ ಸೂಕ್ಷ್ಮಸಂವೇದನೆಯ ಸಾಮಾನ್ಯ ಲೇಖಕರಿಗೂ ಬರೆಯಲು ಅವಕಾಶ  ನೀಡುತ್ತದೆ. ಇದರಿಂದ ಅಕ್ಷರದ ಮೇಲಿನ ಪ್ರೀತಿ ಹಾಗೇ ಉಳಿಯಲು ಸಾಧ್ಯವಿದೆ ' ಎಂದು ಹೇಳಿದರು.

ಪತ್ರಕರ್ತ ಎನ್.ಎ. ಇಸ್ಮಾಯಿಲ್‌ಮಾತನಾಡಿ, `ಎಪ್ಪತ್ತು ಎಂಬತ್ತರ ದಶಕದಲ್ಲಿ ನಡೆದ ಚಳವಳಿಗಳನ್ನು ಬ್ಲಾಗ್ ಹಾಗೂ ವೆಬ್‌ಸೈಟ್ ಚಳವಳಿಗೆ ಸಮೀಕರಿಸಬಹುದಾಗಿದೆ. ಸಾಮಾಜಿಕ, ರಾಜಕೀಯ ವಿದ್ಯಮಾನಗಳಿಗೆ ಎಲ್ಲರೂ ಸ್ಪಂದಿಸಲು ಅವಕಾಶ ನೀಡುವುದಲ್ಲದೇ ಸಾರ್ವಜನಿಕ ಅಭಿಪ್ರಾಯ ರೂಪುಗೊಳ್ಳಲು ವೇದಿಕೆ ದೊರೆಯುತ್ತದೆ' ಎಂದು ತಿಳಿಸಿದರು.
ಬ್ಲಾಗರ್ ಉಷಾ ಕಟ್ಟೇಮನೆ, ಓಂಶಿವಪ್ರಕಾಶ್  ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.