ADVERTISEMENT

ಭವಿಷ್ಯದ ಕನಸು ಬಿಚ್ಚಿಟ್ಟ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 19:44 IST
Last Updated 1 ಜೂನ್ 2018, 19:44 IST
ಮಹಿಮಾ ಕೃಷ್ಣ
ಮಹಿಮಾ ಕೃಷ್ಣ   

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ವಿವಿಧ ವಿಭಾಗಗಳಲ್ಲಿ ಐದರೊಳಗಿನ ರ‍್ಯಾಂಕ್‌ ಗಳಿಸಿರುವ ನಗರದ ವಿದ್ಯಾರ್ಥಿಗಳು ತಮ್ಮ ಓದಿನ ಕನಸನ್ನು ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡಿದ್ದಾರೆ

ವೈದ್ಯೆಯಾಗುವ ಹಂಬಲ

ಬಿಎಸ್ಸಿ (ಕೃಷಿ) ವಿಭಾಗದಲ್ಲಿ, ಮೂರನೇ ರ‍್ಯಾಂಕ್‌ ಪಡೆದಿರುವ ವಿವಿಎಸ್‌ ಸರ್ದಾರ್‌ ಪಟೇಲ್‌ ಪಿಯು ಕಾಲೇಜಿನ ಮಹಿಮಾ ಕೃಷ್ಣಾ ಅವರಿಗೆ ವೈದ್ಯೆಯಾಗುವ ಕನಸಿದೆ. ‘ನೀಟ್‌ ಪರೀಕ್ಷೆ ಬರೆದಿದ್ದು, ಫಲಿತಾಂಶ ಎದುರು ನೋಡುತ್ತಿದ್ದೇನೆ. ಅದರಲ್ಲಿ ಉತ್ತಮ ರ‍್ಯಾಂಕ್‌ ಬರದಿದ್ದರೆ ಮೂಲವಿಜ್ಞಾನ ಅಭ್ಯಾಸ ಮಾಡುತ್ತೇನೆ’ ಎಂದು ತಮ್ಮ ಇಂಗಿತ ತಿಳಿಸಿದರು.

ADVERTISEMENT

‘ಪ್ರಥಮ ಪಿಯುಸಿಯಿಂದಲೇ ನೀಟ್‌ ಹಾಗೂ ಸಿಇಟಿಗೆ ಅಭ್ಯಾಸ ಪ್ರಾರಂಭಿಸಿದ್ದೆ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಓದಿಕೊಂಡಿದ್ದೆ. ಹತ್ತರೊಳಗೆ ರ‍್ಯಾಂಕ್‌ ಬರುತ್ತದೆಂದು ನಿರೀಕ್ಷಿಸಿದ್ದೆ, ಮೂರನೇ ರ‍್ಯಾಂಕ್‌ ಬಂದಿರುವುದು ಖುಷಿಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಎಂಜಿನಿಯರಿಂಗ್‌ ಆಸಕ್ತಿ ಕ್ಷೇತ್ರ

ಬಿ–ಫಾರ್ಮಾ ಮತ್ತು ಫಾರ್ಮಾ–ಡಿಯಲ್ಲಿ ಮೂರನೇ ರ‍್ಯಾಂಕ್‌ ಪಡೆದಿರುವ ನಾರಾಯಣ ಇ ಟೆಕ್ನೋ ಶಾಲೆಯ ಎಂ.ಯೋಗೇಶ್‌ಗೆ ಕಂಪ್ಯೂಟರ್‌ ಎಂಜಿನಿಯರ್ ಆಗಬೇಕೆನ್ನುವ ಹಂಬಲವಿದೆ. ‘ಈ ವಿಭಾಗದಲ್ಲಿ ನನಗೆ ಉತ್ತಮ ರ‍್ಯಾಂಕ್‌ ಬಂದಿದ್ದರೂ ನಾನು ಎಂಜಿನಿಯರಿಂಗ್‌ ಕೋರ್ಸ್‌ ತೆಗೆದುಕೊಳ್ಳಬೇಕೆಂದಿದ್ದೇನೆ. ಈ ವಿಭಾಗದಲ್ಲಿ ನನಗೆ 9ನೇ ರ‍್ಯಾಂಕ್‌ ಬಂದಿದೆ’ ಎಂದು ಕನಸನ್ನು ಹಂಚಿಕೊಂಡರು. ಇವರಿಗೆ ಜೆಇಇ ಮುಖ್ಯ ಪರೀಕ್ಷೆಯಲ್ಲಿ 1,050ನೇ ರ‍್ಯಾಂಕ್‌ ಬಂದಿದೆ.

ಪಶುವೈದ್ಯನಾಗುವ ಕನಸು

ಶ್ರೀ ಕುಮಾರನ್‌ ಚಿಲ್ಡ್ರನ್ಸ್ ಹೋಮ್‌ನ ಆದಿತ್ಯ ಚಿದಾನಂದ ಸಿಇಟಿಯ ಪಶು ವೈದ್ಯ ವಿಜ್ಞಾನ ವಿಭಾಗದಲ್ಲಿ 3ನೇ ರ‍್ಯಾಂಕ್‌ಪಡೆದಿದ್ದಾರೆ. ‘25ರೊಳಗಿನ ರ‍್ಯಾಂಕ್ ಸಿಗುವ ನಿರೀಕ್ಷೆ ಇತ್ತು. ಆದರೆ, 3ನೇ ರ‍್ಯಾಂಕ್ ಬಂದಿರುವುದು ಆಶ್ಚರ್ಯ ತಂದಿದೆ’ ಎಂದರು.

‘ದಿನಕ್ಕೆ ಒಂದು ತಾಸು ಬ್ಯಾಡ್ಮಿಂಟನ್ ಆಡುತ್ತಿದ್ದೆ. ಇದರಿಂದ ಮನಸ್ಸಿಗೆ ಸಾಕಷ್ಟು ಖುಷಿ ಸಿಗುತ್ತಿತ್ತು. ಹೆಚ್ಚು ಓದಲು ಸಾಧ್ಯವಾಯಿತು. ಏಮ್ಸ್‌ ಹಾಗೂ ನೀಟ್‌ ಪರೀಕ್ಷೆಗಳನ್ನೂ ಬರೆದಿದ್ದೇನೆ. ಅದರಲ್ಲಿ ಉತ್ತಮ ರ‍್ಯಾಂಕ್‌ ಬಂದರೂ ಪಶು ವೈದ್ಯ ವಿಜ್ಞಾನ ವಿಭಾಗವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದರು.

‘ಪಶು ವೈದ್ಯಕೀಯ ವಿಭಾಗವನ್ನು ಆಯ್ದುಕೊಳ್ಳುವವರು ತುಂಬಾ ಕಡಿಮೆ. ಆದರೆ, ನನ್ನ ಪೋಷಕರು ನನಗೆ ಬೆಂಬಲ ನೀಡಿದರು. ಮೈಸೂರಿನಲ್ಲಿರುವ
‘ಸುಕುವನ’ ಪಕ್ಷಿಧಾಮ ಹಾಗೂ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದ ಶಿಬಿರಗಳಲ್ಲಿ ಭಾಗವಹಿಸಿದ ಬಳಿಕ ನನಗೆ ಈ ಕ್ಷೇತ್ರದ ಕುರಿತು ಒಲವು ಹೆಚ್ಚಿತು’ ಎಂದು ತಮ್ಮ ಆಸಕ್ತಿಯ ಗುಟ್ಟು ಬಿಟ್ಟುಕೊಟ್ಟರು.

ವೃತ್ತಿಯ ಬಗ್ಗೆ ಯೋಚಿಸಿಲ್ಲ

ಎಂಜಿನಿಯರಿಂಗ್‌ ವಿಭಾಗದಲ್ಲಿ ನಾಲ್ಕುಹಾಗು ಫಾರ್ಮಾ ದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ  ನಾರಾಯಣ ಇ ಟೆಕ್ನೊ ಶಾಲೆಯ ವಿದ್ಯಾರ್ಥಿ ತುಹಿನ್ ಗಿರಿನಾಥ್‌, ಭವಿಷ್ಯದ ವೃತ್ತಿಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲವಂತೆ.

‘ವೃತ್ತಿಯ ಬಗ್ಗೆ ಈಗಲೇ ಏನೂ ನಿರ್ಧರಿಸಿಲ್ಲ. ಸದ್ಯಕ್ಕೆ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರುತ್ತೇನೆ. ಈಜು ಮತ್ತು ಬಾಸ್ಕೆಟ್‌ಬಾಲ್‌ ಆಡುವುದೆಂದರೆ ಅಚ್ಚು
ಮೆಚ್ಚು. ಆದರೆ, ಎರಡು ವರ್ಷಗಳಿಂದ ದೂರ ಉಳಿದಿದ್ದೇನೆ. ಜೆಇಇ, ಸಿಇಟಿ... ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  9ನೇ ತರಗತಿಯಿಂದಲೇ ಅಭ್ಯಾಸ ಪ್ರಾರಂಭಿಸಿದ್ದೆ’ ಎಂದು ರ‍್ಯಾಂಕ್‌ ಹಿಂದಿನ ಶ್ರಮದ ಬಗ್ಗೆ ವಿವರಿಸಿದರು.

‘ಪ್ರತಿ ದಿನ ಮಧ್ಯಾಹ್ನ 1ರಿಂದ ಸಂಜೆ 6 ಗಂಟೆವರೆಗೆ ಅಭ್ಯಾಸ ಮಾಡುತ್ತಿದ್ದೆ. ಕೋಚಿಂಗ್ ಸೆಂಟರ್‌ನಲ್ಲಿ ಇಂಟಿಗ್ರೇಟೆಡ್ ಕೋಚಿಂಗ್ ಮಾಡುತ್ತಿದ್ದು, ಬಹುತೇಕ ಅವಧಿ ಓದಿನಲ್ಲೇ ಕಳೆಯುತ್ತಿದ್ದೆ. ಬಹಳ ಹೊತ್ತು ಓದುವುದರರಿಂದ ಸುಸ್ತಾಗುತ್ತಿತ್ತು. ಆ ಸಮಯದಲ್ಲಿ ಹಾಡುಗಳ ನ್ನುಕೇಳುತ್ತಿದ್ದೆ’ ಎಂದರು.

ಉತ್ತಮ ರ‍್ಯಾಂಕ್‌

ಬೇಸ್‌ ತರಬೇತಿ ಸಂಸ್ಥೆಯ ನೂರು ವಿದ್ಯಾರ್ಥಿಗಳು ಸಿಇಟಿಯಲ್ಲಿ 1000 ರ‍್ಯಾಂಕ್‌ ಒಳಗೆ ಸ್ಥಾನ ಪಡೆದಿದ್ದಾರೆ. ಇವರಲ್ಲಿ 19 ವಿದ್ಯಾರ್ಥಿಗಳು ನೂರು
ರ‍್ಯಾಂಕ್‌ನೊಳಗಿದ್ದಾರೆ.

ಇದೇ ಸಂಸ್ಥೆಯ ನಿಶ್ಚಲಾ ಎಂಜಿನಿಯರಿಂಗ್‌ ವಿಭಾಗದಲ್ಲಿ 17ನೇ ರ‍್ಯಾಂಕ್‌ ಗಳಿಸಿದ್ದಾರೆ. ಪಶು ವೈದ್ಯ ವಿಜ್ಞಾನದಲ್ಲಿ ಮನೀಶ್‌ ಕೌಶಿಕ್‌ 6 ಹಾಗೂ ಬಿ.ಎಸ್ಸಿ (ಕೃಷಿ) ವಿಭಾಗದಲ್ಲಿ ವಿಶಾಲ್‌ ರಾವ್‌ 8ನೇ ರ‍್ಯಾಂಕ್‌ ಪಡೆದಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.