ADVERTISEMENT

ಭಾಷೆಗಳ ಉಳಿವಿಗೆ ಏಕರೂಪ ಶಿಕ್ಷಣ ಅಗತ್ಯ: ಕಂಬಾರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2013, 20:28 IST
Last Updated 18 ಅಕ್ಟೋಬರ್ 2013, 20:28 IST
ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆದ ರ್‌್ಯಾಲಿಯ ಉದ್ಘಾಟನಾ ಸಮಾರಂಭದಲ್ಲಿ ಕಲಾವಿದರು ವೀರಗಾಸೆ ಪ್ರದರ್ಶಿಸಿದರು. ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್‌ ಗುರಿಕಾರ್‌, ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ, ಸಾಹಿತಿ ಚಂದ್ರಶೇಖರ ಕಂಬಾರ ಚಿತ್ರದಲ್ಲಿದ್ದಾರೆ (ಎಡಚಿತ್ರ)	– ಪ್ರಜಾವಾಣಿ ಚಿತ್ರಗಳು
ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆದ ರ್‌್ಯಾಲಿಯ ಉದ್ಘಾಟನಾ ಸಮಾರಂಭದಲ್ಲಿ ಕಲಾವಿದರು ವೀರಗಾಸೆ ಪ್ರದರ್ಶಿಸಿದರು. ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್‌ ಗುರಿಕಾರ್‌, ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ, ಸಾಹಿತಿ ಚಂದ್ರಶೇಖರ ಕಂಬಾರ ಚಿತ್ರದಲ್ಲಿದ್ದಾರೆ (ಎಡಚಿತ್ರ) – ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ‘ಪ್ರಸ್ತುತ ದಿನಗಳಲ್ಲಿ ಮಾತೃಭಾಷೆ ಮೇಲಿನ ವ್ಯಾಮೋಹ ಕಡಿಮೆಯಾಗುತ್ತಿರು­ವುದರಿಂದ 40 ವರ್ಷಗಳಲ್ಲಿ ದೇಶದ 400 ಭಾಷೆಗಳು ನಶಿಸಿ ಹೋಗಿವೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅವರು ಬೇಸರ ವ್ಯಕ್ತಪಡಿಸಿದರು.

ಸಮಾನ ಶಿಕ್ಷಣ ನೀತಿ ಜಾರಿಗೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯು ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನ­ದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್‌ ರ್‌ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಶತಮಾನಗಳ ಐತಿಹ್ಯವಿರುವ ಕನ್ನಡ ಭಾಷೆ ಇದೀಗ ಬಳಸುವವರಿಲ್ಲದೆ ಅವನತಿಯ ಅಂಚಿನತ್ತ ಸಾಗುತ್ತಿದೆ. ಇನ್ನಾದರೂ ನಾವು ಜಾಗೃತರಾಗಿ ಕನ್ನಡಕ್ಕಾಗಿ ಹಾಗೂ ತಯ್ನಾಡಿಗೆ ದುಡಿಯಬೇಕಿದೆ. ದಿನದಿಂದ ದಿನಕ್ಕೆ ಆಂಗ್ಲ ಭಾಷೆಯ ಮೇಲಿನ ಮಮಕಾರ ಹೆಚ್ಚಾಗುತ್ತಿ­ರುವು­ದರಿಂದ ಪ್ರಾದೇಶಿಕ ಭಾಷೆಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ’ ಎಂದು ಹೇಳಿದರು.

ಪ್ರಾಣಿ, ಪಕ್ಷಿ, ನದಿ, ಗಿಡ, ಮರ ಸೇರಿದಂತೆ ಪ್ರತಿಯೊಂದು ವಸ್ತುವನ್ನೂ ಇಂಗ್ಲಿಷ್‌ ಭಾಷೆಯಿಂದಲೇ ಕರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಶಾಲೆಗಳ ಮಕ್ಕಳಲ್ಲಿ ಸೃಜನಶೀಲತೆ ಮಾಯವಾಗುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿನ ತಾರತಮ್ಯವನ್ನು ಹೋಗಲಾಡಿಸಲು ಸಮಾನ ಶಿಕ್ಷಣ ನೀತಿಯ ಅನಿವಾರ್ಯತೆ ಇದೆ. 1 ರಿಂದ 10ನೇ ತರಗತಿಯವರೆಗೂ ಮಾತೃ ಭಾಷೆಯಲ್ಲೇ ಶಿಕ್ಷಣ ಲಭಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಚಂದ್ರಶೇಖರ್‌ ಪಾಟೀಲ್, ‘ಸಮಾನ ಶಿಕ್ಷಣ ವ್ಯವಸ್ಥೆಗಾಗಿ ಗೋಕಾಕ್‌ ಚಳವಳಿ ಮಾದರಿಯಲ್ಲಿ ಹೋರಾಟದ ಅಗತ್ಯವಿದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ರಸ್ತೆಗಿಳಿದು ಪ್ರತಿಭಟನೆ ಮಾಡಬೇಕು. ಸಂಸತ್‌ನಲ್ಲಿ ಕನ್ನಡದ ಬಾವುಟ ಹಾರಾಡಬೇಕು. ರಾಜಕಾರಣಿಗಳು ಭಿನ್ನಾಭಿಪ್ರಾಯ ಮರೆತು ನಾಡು–ನುಡಿಗಾಗಿ ದುಡಿಯಬೇಕು’ ಎಂದರು.

ಲೇಖಕ ಬಂಜಗೆರೆ ಜಯಪ್ರಕಾಶ್, ‘ವಿದೇಶದಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಸಮಾನತೆ ಭಾವನೆ ಮೂಡಿಸುವಂತಹ ಶಿಕ್ಷಣ ದೊರೆಯುತ್ತಿದೆ. ಅನ್ಯ ವಿಚಾರಗಳಲ್ಲಿ ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿರುವ ನಾವುಗಳು, ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿ­ಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದೇವೆ. ಮಕ್ಕಳ ಹಾಗೂ  ನಾಡಿನ ಭವಿಷ್ಯದ ನಿಟ್ಟಿನಲ್ಲಿ ಸಮಾನ ಶಿಕ್ಷಣವನ್ನು ಜಾರಿಗೆ ತರುವ ಮೂಲಕ ಸಾಮಾಜಿಕ ತಿರುವಿಗೆ ನಾಂದಿ ಹಾಡಬೇಕು’ ಎಂದು ಮನವಿ ಮಾಡಿದರು.

ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಮಾತನಾಡಿ, ‘ಸ್ವಾತಂತ್ರ್ಯ ಬಂದು 66 ವರ್ಷಗಳೇ ಕಳೆದರೂ, ಇಂದಿಗೂ ಮಕ್ಕಳ ಮೂಲಭೂತ ಹಕ್ಕಾದ ಸಮಾನ ಶಿಕ್ಷಣವನ್ನು ಜಾರಿಗೆ ತರುವಲ್ಲಿ ಸರ್ಕಾರಗಳು ವಿಫಲವಾಗಿವೆ. ದೇಶದ ಭವಿಷ್ಯ ತರಗತಿಯಲ್ಲಿ ರೂಪುಗೊಳ್ಳು­ತ್ತದೆ ಎಂಬ ಮಾತಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಮಾರಾಟದ ಸರಕಾಗಿ ಬದಲಾಗಿದ್ದು, ಪ್ರಾದೇಶಿಕ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಸಂವಿಧಾನದ ಮೌಲ್ಯ ಹಾಗೂ ಸಾಮಾಜಿಕ ನ್ಯಾಯ ಉಳಿಯಬೇಕಾ­ದರೆ ಈ ನೀತಿ ಜಾರಿಯಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಲೇಖಕಿ ಬಿ.ಟಿ ಲಲಿತಾ ನಾಯಕ್‌, ‘ಶೈಕ್ಷಣಿಕ ಅಸಮಾನತೆ ಎಂಬುದು ಜಾತೀಯತೆಗಿಂತ ದೊಡ್ಡ ಪಿಡುಗಾಗಿದೆ. ಈ ಪಿಡುಗನ್ನು ತೊಡೆದು ಹಾಕುವುದು ಸರ್ಕಾರದ ಕರ್ತವ್ಯ’ ಎಂದು  ಹೇಳಿದರು.

ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಭೆ ಮುಗಿದ ಬಳಿಕ ಹೊರಟ ರ್‌ಯಾಲಿ, ಮಕ್ಕಳಕೂಟ ವೃತ್ತ, ಬಸಪ್ಪ ವೃತ್ತ, ಜೆ.ಸಿ.ರಸ್ತೆ. ಪುರಭವನ, ಕಾರ್ಪೋರೆಷನ್‌ ವೃತ್ತ, ಕೆ.ಜಿ.ರಸ್ತೆ ಮುಖಾಂತರ ಸ್ವಾತಂತ್ರ್ಯ ಉದ್ಯಾನ ತಲುಪಿತು.

ನಗರಾಭಿವೃದ್ಧಿ ಸಚಿವ ವಿನಯ್‌ ಕುಮಾರ್  ಸೊರಕೆ, ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್, ಶಾಸಕ ಕೆ.ಎಸ್‌.­ಪುಟ್ಟಣ್ಣಯ್ಯ, ಚಲನಚಿತ್ರ ನಿರ್ಮಾಪಕ ಸಾ.ರಾ.­ಗೋವಿಂದು, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಸೇರಿದಂತೆ ಹಲವರು ರ್‌ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.