ADVERTISEMENT

ಭೂ ಸ್ವಾಧೀನ ಕೈಬಿಡಿ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:34 IST
Last Updated 11 ಜೂನ್ 2013, 19:34 IST

ಬೆಂಗಳೂರು: `ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ರೈತರ ಸಾವಿರಾರು ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆಗೆ ನೀಡಲಾಗಿದೆ. ಕಾರ್ಖಾನೆಗಾಗಿ ಭೂಮಿ ಪಡೆದಿರುವವರು ರಿಯಲ್ ಎಸ್ಟೇಟ್‌ಗೆ ಜಮೀನು ಬಳಸಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಿ' ಎಂದು ಬಿಜೆಪಿಯ ಗೋವಿಂದ ಕಾರಜೋಳ ಮಂಗಳವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಪರವಾಗಿ ಮಾತನಾಡಿದ ಅವರು, ಕೃಷಿ ಭೂಮಿ ಕಡಿಮೆ ಆಗುವುದರಿಂದ ಮುಂದೆ ಆಹಾರ ಸಮಸ್ಯೆ ಉಂಟಾಗಲಿದೆ. ಇದನ್ನು ಅರ್ಥ ಮಾಡಿಕೊಂಡು ಕೈಗಾರಿಕೆಗಳ ಬದಲಿಗೆ ಕೃಷಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ 2 ಲಕ್ಷಕ್ಕಿಂತ ಅಧಿಕ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಇದರಲ್ಲಿ ವೈದ್ಯರು, ಎಂಜಿನಿಯರ್, ವಕೀಲರು, ಶಾಸಕರು ಇದ್ದಾರೆ. ಇದಕ್ಕೆ ಕಾರಣರಾದ ತಹಸೀಲ್ದಾರ್‌ಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಮೀಸಲಾತಿಗೆ ಅರ್ಥ ಇರುವುದಿಲ್ಲ ಎಂದು ಹೇಳಿದರು.

ಕಾಡಾನೆ ಹಾವಳಿ ನಿಯಂತ್ರಿಸಿ: ಕಾಡಾನೆಗಳ ದಾಳಿಯಿಂದಾಗಿ ಕಳೆದ ಐದು ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ 67 ಜನ ಸತ್ತಿದ್ದಾರೆ. ಕಾಡಾನೆ ಹಾವಳಿ ತಡೆಯಲು ಕಾರ್ಯಕ್ರಮ ರೂಪಿಸಬೇಕು ಬಿಜೆಪಿಯ ಕೆ.ಜಿ. ಬೋಪಯ್ಯ ಒತ್ತಾಯಿಸಿದರು. ಅರಣ್ಯದಲ್ಲಿ ನೀಲಗಿರಿ, ತೇಗದ ಸಸಿಗಳನ್ನು ನೆಡುವುದನ್ನು ತಕ್ಷಣ ನಿಲ್ಲಿಸಬೇಕು. ಆನೆಗಳಿಗೆ ಇಷ್ಟವಾದ ಪೆಂಡೆ ಮರ, ಬಿದಿರು ಬೆಳೆಸಬೇಕು. ಫೆಬ್ರುವರಿಯಲ್ಲಿ ಸಸಿಗಳನ್ನು ನಾಟಿ ಮಾಡಿದರೆ ಉಳಿಯುವುದಿಲ್ಲ. ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ರೈತರ ಮೇಲೆ ಅನಗತ್ಯವಾಗಿ ಕೇಸ್ ದಾಖಲಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಪಡೆ ಸಾಕು: ವಿಧಾನಸೌಧದ ಮೂರನೇ ಮಹಡಿಯಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರಿಗೆ ಏನು ಕೆಲಸ? ಕಾರ್ಯಪಡೆಯನ್ನು ಕೂಡಲೇ ರದ್ದುಪಡಿಸಬೇಕು. ಅದರ ವರದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.