ADVERTISEMENT

`ಭ್ರಷ್ಟ ವ್ಯವಸ್ಥೆಯಿಂದ ರಾಜ್ಯದ ರಕ್ಷಣೆ ಅಗತ್ಯ'

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST

ಬೆಂಗಳೂರು: `ಬಿಜೆಪಿ ಸರ್ಕಾರದ ಭ್ರಷ್ಟ ವ್ಯವಸ್ಥೆಯ ವಿಷಸುಳಿಗೆ ಸಿಕ್ಕಿ ರಾಜ್ಯ ನೊಂದು ಹೋಗಿದೆ. ಈ ವಿಷ ಸುಳಿಯಿಂದ ರಾಜ್ಯವನ್ನು ರಕ್ಷಣೆ ಮಾಡಬೇಕಿದೆ. ಕಾಂಗ್ರೆಸ್‌ನಿಂದ ಮಾತ್ರ ಈ ಕೆಲಸ ಸಾಧ್ಯ' ಎಂದು ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟರು.
ವಿಜಯನಗರದ ಅತ್ತಿಗುಪ್ಪೆಯ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಸಮೀಪದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಹಾಗೂ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

`ಬಿಜೆಪಿ ಆಡಳಿತ ವೇಳೆ ಆಡಳಿತ ಯಂತ್ರ ಶಿಥಿಲವಾಗಿತ್ತು. ನಾಲ್ಕು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ನೆಲಕ್ಕೆ ಬಿದ್ದಾಗ ತೆಂಗಿನಕಾಯಿ ಹೋಳಾಗುವ ಮಾದರಿಯಲ್ಲೇ ಬಿಜೆಪಿ ಹೋಳಾಗಿದೆ' ಎಂದು ಅವರು ಟೀಕಿಸಿದರು.

`ಈ ಹಿಂದೆ ಮುಖ್ಯಮಂತ್ರಿ ಜೈಲಿಗೆ ಹೋದ ಉದಾಹರಣೆ ಇಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾದ ಕಾರಣಕ್ಕೆ ಮುಖ್ಯಮಂತ್ರಿ ಹಾಗೂ ಹಲವು ಸಚಿವರು ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿದ್ದಾರೆ. ಅಧಿಕಾರದಲ್ಲಿದ್ದವರು ಆದರ್ಶರಾಗಿರಬೇಕಿತ್ತು. ಆದರೆ, ರಾಜ್ಯದ ಜನರು ಈಗ ಪಶ್ಚಾತ್ತಾಪ ಪಡುವ ಸ್ಥಿತಿ ನಿರ್ಮಾಣವಾಗಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ಕಾಂಗ್ರೆಸ್ ದೇಶದಲ್ಲಿ ಹಿರಿಯ ಸಂಸ್ಥೆ. ಹಲವಾರು ಬಾರಿ ಏರಿಳಿತ ಕಂಡರೂ ಈ ಸಂಸ್ಥೆ ಮುಂದುವರಿದುಕೊಂಡು ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೋಸ್ಕರ ರಾಜಕೀಯ ಮಾಡಿದ ಪಕ್ಷ ಅಲ್ಲ. ದೇಶದ ವಿಕಾಸ ಹಾಗೂ ಅಭಿವೃದ್ಧಿ ಆಗಬೇಕು ಎಂಬುದು ಕಾಂಗ್ರೆಸ್ ಗುರಿ. ಈ ಕಾರಣಕ್ಕಾಗಿ ಪಕ್ಷವನ್ನು ಬೆಂಬಲಿಸಬೇಕು' ಎಂದು ಅವರು ಮನವಿ ಮಾಡಿದರು.

`1999-2004ರ ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಹಿಂದೆಂದೂ ಕಾಣದಷ್ಟು ಕ್ಷಾಮ ರಾಜ್ಯದಲ್ಲಿ ಇತ್ತು. ಈ ಕ್ಷಾಮದಿಂದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕ್ಷಾಮ ಉಂಟಾಗಲಿಲ್ಲ. ಈ ಕಾಲದಲ್ಲೇ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲಾಯಿತು. ಬಳಿಕ ಅನೇಕ ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ಬಂತು. ಈಗ ಇದು ರಾಷ್ಟ್ರೀಯ ಕಾರ್ಯಕ್ರಮ ಆಗಿದೆ' ಎಂದು ಅವರು ವಿಶ್ಲೇಷಿಸಿದರು.

`ಹಳ್ಳಿಗಾಡು ಜನರ ಆರೋಗ್ಯ ಹದಗೆಟ್ಟಾಗ ಆಸ್ಪತ್ರೆ ವೆಚ್ಚ ಭರಿಸಲು ಯಶಸ್ವಿನಿ ಯೋಜನೆಯನ್ನು ಜಾರಿಗೆ ತರಲಾಯಿತು. ಈಗ ಎಲ್ಲ ರಾಜ್ಯಗಳಲ್ಲೂ ಯಶಸ್ವಿನಿ ಯೋಜನೆ ಜಾರಿಯಲ್ಲಿದೆ. ಇನ್ನೊಂದು ರಾಜ್ಯ ಈ ಯೋಜನೆಯನ್ನು ತಬ್ಬಿಕೊಂಡಾಗ ಯೋಜನೆಯ ಮಹತ್ವ ಅರಿವಾಗುತ್ತದೆ. ಸ್ನೇಹಿತರು ನನ್ನನ್ನು ಹೈಟೆಕ್ ಮುಖ್ಯಮಂತ್ರಿ ಎಂದು ಕರೆದರು. ಪ್ರತಿ ಹಳ್ಳಿಯಲ್ಲೂ ಹೈಟೆಕ್ ವ್ಯವಸ್ಥೆ ಇರಬೇಕು ಎಂದು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೆ' ಎಂದು ಅವರು ನೆನಪಿಸಿಕೊಂಡರು.

ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೃಷ್ಣಪ್ಪ ಮಾತನಾಡಿ, `ಕೃಷ್ಣ ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ ಎಂದು ವಿರೋಧಿಗಳು ಅಪಪ್ರಚಾರ ನಡೆಸಿದ್ದರು. ವಿಜಯನಗರ ಕ್ಷೇತ್ರದ ಮೂಲಕವೇ ಅವರು ಚುನಾವಣಾ ಪ್ರಚಾರ ಆರಂಭಿಸಿರುವುದು ನಮ್ಮ ಸೌಭಾಗ್ಯ' ಎಂದರು.

ಬಳಿಕ ಅವರು ಪಶ್ಚಿಮ ಕಾರ್ಡ್ ರಸ್ತೆ, ಗಾಳಿ ಆಂಜನೇಯ ದೇವಸ್ಥಾನ ಹಾಗೂ ಸಂಜೆ ಗೋವಿಂದರಾಜನಗರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಗಾಳಿ ಆಂಜನೇಯ ದೇವಸ್ಥಾನದ ಬಳಿ  ಪ್ರಚಾರದ ಸಂದರ್ಭದಲ್ಲಿ ಸಂಚಾರ ದಟ್ಟಣೆಯಿಂದ ಸುಮಾರು 45 ನಿಮಿಷಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.