ADVERTISEMENT

ಮಂಜುನಾಥರೆಡ್ಡಿ ಮೇಯರ್‌ ಹೇಮಲತಾ ಉಪಮೇಯರ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2015, 20:11 IST
Last Updated 11 ಸೆಪ್ಟೆಂಬರ್ 2015, 20:11 IST

ಬೆಂಗಳೂರು: ತುಂಬಾ ಉದ್ವಿಗ್ನವಾಗಿದ್ದ ಶಾಸಕ ಬೈರತಿ ಬಸವರಾಜ್‌ ಕಾಂಗ್ರೆಸ್‌ ಬಣ ‘ಮ್ಯಾಜಿಕ್‌’ ಸಂಖ್ಯೆ ತಲುಪಿದ ಘೋಷಣೆ ಹೊರಬೀಳುತ್ತಿದ್ದಂತೆ ಹಿರಿಹಿರಿ ಹಿಗ್ಗಿದರೆ, ತಣ್ಣಗೆ ಕುಳಿತಿದ್ದ ಬಿಜೆಪಿ ಶಾಸಕ ಆರ್‌. ಅಶೋಕ ಮುಖ ಕೆಳಗೆಹಾಕಿ ಹೊರ ನಡೆದರು. ಈ ಘಟನೆಗಳು ಪಾಲಿಕೆಯಲ್ಲಿ ಶುಕ್ರವಾರ ನಡೆದ ಚುನಾವಣಾ ಫಲಿತಾಂಶಕ್ಕೆ ಕನ್ನಡಿ ಹಿಡಿದಿದ್ದವು.

ಕಾಂಗ್ರೆಸ್‌ನ ಬಿ.ಎನ್‌. ಮಂಜುನಾಥ್‌ ರೆಡ್ಡಿ (ಮಡಿವಾಳ ವಾರ್ಡ್‌) ಹಾಗೂ ಜೆಡಿಎಸ್‌ನ ಎಸ್‌.ಪಿ. ಹೇಮಲತಾ (ವೃಷಭಾವತಿನಗರ) ಅವರು ತಮ್ಮ ಎದುರಾಳಿಗಳ ವಿರುದ್ಧ ಮೂರು ಮತಗಳ ಅಂತರದಿಂದ ಗೆದ್ದು ಕ್ರಮವಾಗಿ ನೂತನ 49ನೇ ಮೇಯರ್‌ ಹಾಗೂ 50ನೇ ಉಪಮೇಯರ್‌ ಆಗಿ ಆಯ್ಕೆಗೊಂಡರು. ಬಿಜೆಪಿಯಿಂದ ಜಿ. ಮಂಜುನಾಥ್‌ ರಾಜು (ಕಾಡುಮಲ್ಲೇಶ್ವರ) ಹಾಗೂ ಎಚ್‌.ಸಿ. ನಾಗರತ್ನ (ಪಟ್ಟಾಭಿರಾಮ ನಗರ) ಮೇಯರ್‌–ಉಪಮೇಯರ್‌ ಹುದ್ದೆಗಳಿಗೆ ಸ್ಪರ್ಧಿಸಿದ್ದರು.

ಹದಿನೈದು ದಿನಗಳಿಂದ ರೆಸಾರ್ಟ್‌ ರಾಜಕೀಯ ನಡೆಸಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅದಕ್ಕೆ ತಕ್ಕ ಪ್ರತಿಫಲವನ್ನೇ ಪಡೆದರೆ, ಸಂಖ್ಯೆಗಳ ಆಟದಲ್ಲಿ ಸೋತ ಬಿಜೆಪಿ ಅಧಿಕಾರ ಕೈಜಾರಿ ಹೋಗುವುದನ್ನು ಅಸಹಾಯಕವಾಗಿ ನೋಡುತ್ತಾ ಕೂರಬೇಕಾಯಿತು. ಪಕ್ಷದ ಅಭ್ಯರ್ಥಿಗಳ ಪರ ಮತದಾನ ಮಾಡಲು ಕೇಂದ್ರದ ಮೂವರು ಸಚಿವರು ಬಂದರೂ ಬಿಜೆಪಿಗೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ.

ಜೆಡಿಎಸ್‌ ಹಾಗೂ ಪಕ್ಷೇತರರನ್ನು ಒಳಗೊಂಡ ಕಾಂಗ್ರೆಸ್‌ನ ಮಹಾಮೈತ್ರಿ ಕೊನೆಯವರೆಗೂ ತನ್ನ ಒಗ್ಗಟ್ಟು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ರಾಜ್ಯಸಭೆ ಪಕ್ಷೇತರ ಸದಸ್ಯ ವಿಜಯ್‌ ಮಲ್ಯ ಅವರೊಬ್ಬರನ್ನು ಹೊರತುಪಡಿಸಿ ಮತಾಧಿಕಾರ ಹೊಂದಿದ ಮಿಕ್ಕೆಲ್ಲ ಸದಸ್ಯರೂ ಹಾಜರಾಗಿದ್ದರು. ಚುನಾವಣೆ ಎದುರಿಸಲು ಕಾಂಗ್ರೆಸ್‌ ತುಂಬಾ ಯೋಜನಾಬದ್ಧ ತಂತ್ರ ಹೆಣೆದಿದ್ದು ಎದ್ದುಕಂಡಿತು. ಅನಾರೋಗ್ಯದಿಂದ ಬಳಲುತ್ತಿದ್ದ ಬಿ.ಜಯಶ್ರೀ ಅವರನ್ನೂ ಮುಖಂಡರು ಮತದಾನ ಮಾಡಿಸಲು ಕರೆತಂದಿದ್ದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರು ತಲಾ ಎಂಟು ಜನರಿಗೆ ಒಂದು ತಂಡದಂತೆ 25 ಸುತ್ತುಗಳಲ್ಲಿ ಎಲ್ಲ 198 ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ಮೇಯರ್‌ ಚುನಾವಣೆ ಪ್ರಕ್ರಿಯೆ ಆರಂಭಿಸಿದರು. ಆಗ ಬಿಜೆಪಿ ಶಾಸಕ ಆರ್‌.ಜಗದೀಶಕುಮಾರ್‌ ಕ್ರಿಯಾಲೋಪ ಎತ್ತಿದರು.

ಪ್ರಾದೇಶಿಕ ಆಯುಕ್ತರು ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಎಲ್ಲ 12 ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಏಳು ಪಕ್ಷೇತರ ಸದಸ್ಯರು ತಲಾ ಒಂದೊಂದು ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗುವ ಭಾಗ್ಯ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.