ADVERTISEMENT

ಮಂತ್ರಿ ಡೆವಲಪರ್ಸ್ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಸ್ವಸ್ತಿಕ್ ಮೆಟ್ರೊ ರೈಲು ನಿಲ್ದಾಣ ಕಾಮಗಾರಿಗಾಗಿ ಮಂತ್ರಿ ಡೆವಲಪರ್ಸ್‌ನ ಅಂಗ ಸಂಸ್ಥೆ ಹಮಾರಾ ಶೆಲ್ಟರ್ಸ್‌ ನಗರದ ಮಲ್ಲೇಶ್ವರ ಸಮೀಪ ಒತ್ತುವರಿ ಮಾಡಿಕೊಂಡಿದ್ದ ಭಾರತೀಯ ರೈಲ್ವೆ ಇಲಾಖೆಗೆ ಸೇರಿದ 3,800 ಚದರ ಮೀಟರ್ ಜಾಗವನ್ನು ರೈಲ್ವೆ ಸಿಬ್ಬಂದಿ ಶನಿವಾರ ತೆರವುಗೊಳಿಸಿದರು.

ಸ್ಥಳದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಗಳು ಹಾಗೂ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಇಲ್ಲಿ ಗುಣಮಟ್ಟ ಪ್ರಯೋಗಾಲಯ, ಸಿಮೆಂಟ್ ಮಿಶ್ರಣ ಘಟಕ, ಕ್ಯಾಂಟೀನ್ ಹಾಗೂ ಪ್ರಥಮ ಚಿಕಿತ್ಸಾ ಕೊಠಡಿಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಅಲ್ಲದೆ ಬೃಹತ್ ಪ್ರಮಾಣದಲ್ಲಿ ಕಾಮಗಾರಿ ಸಾಮಗ್ರಿಗಳನ್ನು ಇಲ್ಲಿ ರಾಶಿ ಹಾಕಲಾಗಿತ್ತು.

`ಒತ್ತುವರಿ ಸಂಬಂಧ ಬೆಂಗಳೂರು ವೆುಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಜತೆ ಈಗಾಗಲೇ ಅನೌಪಚಾರಿಕವಾಗಿ ಚರ್ಚಿಸಲಾಗಿತ್ತು. ನಂತರ ಬಿಲ್ಡರ್ ಮತ್ತು ಬಿಎಂಆರ್‌ಸಿಎಲ್ ಭೂ ದಾಖಲೆಗಳನ್ನು ತಿರುಚಿರುವುದು ಗಮನಕ್ಕೆ ಬಂತು. ನಿಲ್ದಾಣ ನಿರ್ಮಾಣಕ್ಕೂ ಒತ್ತುವರಿಗೂ ಸಂಬಂಧ ಇಲ್ಲದೇ ಇರುವುದರಿಂದ ತಕ್ಷಣವೇ ತೆರವು ಕಾರ್ಯಾಚರಣೆ ನಡೆಸಲಾಯಿತು~ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

`ನಿರಪೇಕ್ಷಣಾ ಪ್ರಮಾಣ ಪತ್ರ ಇಲ್ಲದೇ ರೈಲ್ವೆಗೆ ಸೇರಿದ ಭೂಮಿಯಲ್ಲಿ ನಿರ್ಮಾಣ ಕಾರ್ಯ ನಡೆಸುವುದು ಅಥವಾ ಅನುಮತಿ ಪಡೆಯದೇ ರೈಲ್ವೆ ಸಮೀಪದ ಪ್ರದೇಶದಲ್ಲಿ ಕಾಮಗಾರಿ ಆರಂಭಿಸುವುದು ಅಕ್ರಮ ಮಾತ್ರವಲ್ಲದೇ ಅಪಾಯಕಾರಿ ಕೂಡ~ ಎಂದು ಎಚ್ಚರಿಕೆ ನೀಡಲಾಗಿದೆ.ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ `ಪ್ರಜಾವಾಣಿ~ ಶನಿವಾರ ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.