ADVERTISEMENT

'ಮಕ್ಕಳಲ್ಲಿ ಸ್ವಲ್ಪ ಚೇಂಜಸ್ ಕಾಣಿಸ್ತಿದೆ...'

ಘನಶ್ಯಾಮ ಡಿ.ಎಂ.
Published 28 ಅಕ್ಟೋಬರ್ 2017, 20:01 IST
Last Updated 28 ಅಕ್ಟೋಬರ್ 2017, 20:01 IST
ನಗರದಲ್ಲಿ ಶನಿವಾರ ವೇದಾಂತಭಾರತೀ ಆಯೋಜಿಸುತ್ತ ಸೌಂದರ್ಯಲಹರಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಊಟ ಮಾಡಿದರು
ನಗರದಲ್ಲಿ ಶನಿವಾರ ವೇದಾಂತಭಾರತೀ ಆಯೋಜಿಸುತ್ತ ಸೌಂದರ್ಯಲಹರಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಊಟ ಮಾಡಿದರು   

ಬೆಂಗಳೂರು: ಅರಮನೆ ಮೈದಾನದಲ್ಲಿ ಶನಿವಾರ ಮಕ್ಕಳ ಸಾಮ್ರಾಜ್ಯ. ಸೌಂದರ್ಯಲಹರೀ ಪಾರಾಯಣಕ್ಕೆ ಮಕ್ಕಳನ್ನು ಕರೆತಂದಿದ್ದ ಶಿಕ್ಷಕರು ಮತ್ತು ಶಾಲೆಗಳ ಆಡಳಿತ ಜವಾಬ್ದಾರಿ ಹೊತ್ತವರು ಕಣ್ಣಲ್ಲಿ ಕಣ್ಣಿಟ್ಟು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ವೇದಾಂತ ಭಾರತೀ ವತಿಯಿಂದ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪ್ರತಿಸ್ಥಳದಲ್ಲೂ ಮಕ್ಕಳ ಯೋಗಕ್ಷೇಮವನ್ನು ಬಗ್ಗೆ ಶಿಕ್ಷಕರ ಹದ್ದಿನ ಕಣ್ಣು ಎಚ್ಚರಿಕೆಯಿಂದ ಕಾಯುತ್ತಿತ್ತು.

ವಿಶಾಲ ಶಾಮಿಯಾನದ ಅಡಿಯಲ್ಲಿ ಮಕ್ಕಳೊಂದಿಗೆ ಉಲ್ಲಾಸದಿಂದ ಕುಳಿತಿದ್ದ ಒಂದಿಷ್ಟು ಶಿಕ್ಷಕರನ್ನು ಮಾತಿಗೆ ಎಳೆದಾಗ ಸೌಂದರ್ಯಲಹರಿಯ ಬಗ್ಗೆ ಅವರಲ್ಲಿದ್ದ ಅಭಿಮಾನ ತಿಳಿಯಿತು.

'ನಮ್ಮ ಶಾಲೆಯಲ್ಲಿ ಕಳೆದ ಜುಲೈನಿಂದ ಸೌಂದರ್ಯಲಹರಿಯನ್ನು ಕಲಿಸ್ತಾ ಇದ್ದೀವಿ. ಮಕ್ಕಳಲ್ಲಿ ಸ್ವಲ್ಪ ಚೇಂಜಸ್ ಕಾಣಿಸ್ತಿದೆ. ಪಾಠವನ್ನು ಗಮನ ಕೊಟ್ಟು ಕೇಳ್ತಿದ್ದಾರೆ. ಏಕಾಗ್ರತೆ ಜಾಸ್ತಿ ಆಗ್ತಿದೆ' ಎಂದು ಲಗ್ಗೆರೆಯ ಅಶ್ವಿನಿ ಪಬ್ಲಿಕ್ ಶಾಲೆಯ ಕೆ. ವೆಂಕಟೇಶ ಹೇಳಿದರು.

ADVERTISEMENT

'ಸೌಂದರ್ಯಲಹರೀ ಮಹಾಸಮರ್ಪಣೆ' ಕಾರ್ಯಕ್ರಮಕ್ಕೆ ಸುಮಾರು ಒಂದು ಸಾವಿರ ಮಕ್ಕಳನ್ನು ಕರೆತಂದಿದ್ದ ಅವರು, 'ಸದಾ ಪಾಠದ ಜಗತ್ತಿನಲ್ಲೇ ಮುಳುಗಿರುವ ಮಕ್ಕಳ ಮನಸಿಗೆ ಶ್ಲೋಕ ಮತ್ತು ಸಂಗೀತ ಉತ್ಸಾಹ ತುಂಬುತ್ತದೆ. ಕೆಲ ವಿದ್ಯಾರ್ಥಿಗಳ ಕಲಿಕೆ ಸುಧಾರಿಸಿರುವುದನ್ನೂ ನಾನು ಗಮನಿಸಿದ್ದೇನೆ' ಎಂದರು.

'ಮಕ್ಕಳಲ್ಲಿ ಶಿಸ್ತು, ಹಿರಿಯರಿಗೆ ಗೌರವ ನೀಡುವ ಪ್ರವೃತ್ತಿ, ವರ್ತನೆಯಲ್ಲಿ ಸುಧಾರಣೆ ಕಾಣಿಸುತ್ತಿದೆ. ರಾಮಚಂದ್ರಪ್ಪ ಎನ್ನುವ ಹಿರಿಯರು ನಮ್ಮ ಶಾಲೆಗೆ ಬಂದು ಸೌಂದರ್ಯಲಹರಿಯನ್ನು ಹೇಳಿಕೊಡುತ್ತಿದ್ದಾರೆ. ಈ ಅಭ್ಯಾಸವನ್ನು ನಿರಂತರ ಮುಂದುವರಿಸಬೇಕು ಎಂದುಕೊಂಡಿದ್ದೇನೆ. ವಿದ್ಯಾರ್ಥಿಗಳ ಪೋಷಕರೂ ಇಷ್ಟಪಡುತ್ತಿದ್ದಾರೆ' ಎಂದು ನುಡಿದರು.

ಸುಂಕೇನಹಳ್ಳಿ ಸರ್ಕಾರಿ ಶಾಲೆಯ ಸುಮಾರು 60 ಮಕ್ಕಳು ನಗುತ್ತಾ ಜೋರುದನಿಯಲ್ಲಿ ಶ್ಲೋಕವನ್ನು ಅಭ್ಯಾಸ ಮಾಡುತ್ತಿದ್ದರು. ಶಿಕ್ಷಕರಾದ ಸಿದ್ದಲಿಂಗಯ್ಯ ಮತ್ತು ಬಿ. ಸುಶೀಲಾ ಸಹ ಮಕ್ಕಳ ಜೊತೆಗೆ ಮಕ್ಕಳಂತೆಯೇ ಕೊರಳೆತ್ತಿ ಹಾಡುತ್ತಿದ್ದರು.

'ನಮ್ಮದು ಸರ್ಕಾರಿ ಶಾಲೆ, ಮಕ್ಕಳು ಬುದ್ಧಿವಂತರು. ನಮ್ಮ ಮಕ್ಕಳು ಪುಸ್ತಕ ನೋಡದೇ ಶ್ಲೋಕಗಳನ್ನು ಹೇಳುತ್ತಾರೆ' ಎಂದು ಸುಶೀಲಾ ಅವರು ಹೆಮ್ಮೆಯಿಂದ ಹೇಳಿಕೊಂಡರು. ಟೀಚರ್ ಮಾತು ನಿಜ ಎನ್ನುವಂತೆ ಪೂರ್ಣಿಮಾ ಎನ್ನುವ 7ನೇ ತರಗತಿ ಬಾಲಕಿ 'ಶಿವಃ ಶಕ್ತ್ಯಾ ಯುಕ್ತೋ ...' ಹೇಳಲು ಶುರುಮಾಡಿದಳು.

'ನಮ್ಮ ಶಾಲೆಯ ಬಹುತೇಕ ಮಕ್ಕಳು ಬಡ ಕುಟುಂಬಗಳಿಂದ ಬರುತ್ತಾರೆ. ಮಕ್ಕಳಿಂದ ಅನೇಕ ಪೋ‍ಷಕರೂ ಶ್ಲೋಕಗಳನ್ನು ಕಲಿತಿದ್ದಾರೆ' ಎಂದು ಶಿಕ್ಷಕಿ ಸುಶೀಲಾ ಮಾಹಿತಿ ನೀಡಿದರು.

'ಶಾಲೆಗಳಿಗೆ ಹೋಗಿ ಮಕ್ಕಳಿಗೆ ಸೌಂದರ್ಯಲಹರೀ ಹೇಳಿಕೊಡುವುದು ಹೊಸ ಅನುಭವ' ಎನ್ನುತ್ತಲೇ ಮಾತು ಶುರುಮಾಡಿದರು ಹನುಮಂತನಗರದ ಗೃಹಿಣಿ ಇಂದುಮತಿ. ಅವರು ಕಳೆದ 20 ವರ್ಷಗಳಿಂದ 'ಬೃಂದಾವನ ಭಜನಾ ಮಂಡಳಿ'ಯಲ್ಲಿ ಸಕ್ರಿಯರಾಗಿದ್ದಾರೆ. ಅಧ್ಯಾತ್ಮದೆಡೆಗೆ ಒಲವು ಇರುವ ಅವರು, ವಿಷ್ಣುಸಹಸ್ರನಾಮ, ಲಲಿತಾಸಹಸ್ರನಾಮ, ನಾರಾಯಣೀಮಂತ್ರಗಳನ್ನೂ ಪಾರಾಯಣ ಮಾಡುತ್ತಿದ್ದಾರಂತೆ.

'ರಮಾ ಗೋಪಾಲನ್ ಅಂತ ವೇದಾಂತ ಭಾರತಿಯ ಪ್ರಮುಖರೊಬ್ಬರು ಬಸವನಗುಡಿಯಲ್ಲಿದ್ದಾರೆ. ಅವರು ನಮ್ಮ ಭಜನಾ ಮಂಡಳಿಯಲ್ಲಿ ಉಚ್ಚಾರ ಸ್ಪಷ್ಟವಿರುವ ಒಂದಿಷ್ಟು ಜನರನ್ನು ಗುರುತಿಸಿ ಶಾಲೆಗಳಿಗೆ ಹೋಗಿ ಕಲಿಸಲು ಸೂಚಿಸಿದರು. ಅದರಂತೆ ನಾನು ಸರ್ಕಾರಿ ಶಾಲೆಯೊಂದಕ್ಕೆ ಹೋಗಿ ಕಲಿಸಿದೆ. ನಾವು ನಮ್ಮ ಮನೆಯಲ್ಲಿ ಅಥವಾ ಭಜನಾ ಮಂಡಳಿಯಲ್ಲಿ ಹಾಡುವುದೇ ಬೇರೆ. ಶಾಲೆಯಲ್ಲಿ ಮಕ್ಕಳಿಗೆ ಕಲಿಸುವುದೇ ಬೇರೆ. ನನಗೆ ಸಂಸ್ಕೃತ ಅಷ್ಟು ಚೆನ್ನಾಗಿ ಬರುವುದಿಲ್ಲ ಎನ್ನುವ ಹಿಂಜರಿಕೆ ಇತ್ತು. ಚೆನ್ನಾಗಿ ಅಭ್ಯಾಸ ಮಾಡಿ, ಹೇಳಿಕೊಡುತ್ತಿದ್ದೇನೆ. ಮಕ್ಕಳು ಹಾಡುವುದನ್ನು ಕೇಳುವಾಗ ಖುಷಿಯಾಗುತ್ತದೆ' ಎಂದು ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.