ADVERTISEMENT

ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾಕೆಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:34 IST
Last Updated 31 ಮೇ 2018, 19:34 IST

ಬೆಂಗಳೂರು: ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಅಪರಾಧಿ ಭಾವನಾ (39) ಎಂಬಾಕೆಗೆ ನಗರದ 54ನೇ ಸಿಸಿಎಚ್‌ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಬಾಲಕಿಯನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದ ಅಪರಾಧಿಗಳಾದ ಹರಿಪ್ರಸಾದ್ (32) ಹಾಗೂ ಆತನ ಪತ್ನಿ ಗೌರಮ್ಮಳಿಗೆ (28) 10 ವರ್ಷ ಮತ್ತು ಗ್ರಾಹಕ ಕೊಡಿಗೇಹಳ್ಳಿಯ ನಿವಾಸಿ ಸತೀಶ್ (26) ಎಂಬಾತನಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ನಾಲ್ವರಿಗೂ ತಲಾ ₹50 ಸಾವಿರ ದಂಡ ವಿಧಿಸಲಾಗಿದೆ.

2015ರ ಮಾರ್ಚ್‌ 24ರಂದು ಡಿ.ಜೆ.ಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಎಂ. ಲತಾಕುಮಾರಿ, ಈ ಆದೇಶ ಹೊರಡಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಚಿನ್ನ ವೆಂಕಟರವಣಪ್ಪ ವಾದಿಸಿದ್ದರು.

ADVERTISEMENT

ಪ್ರಕರಣದ ವಿವರ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಿವಾಸಿ ಭಾವನಾ(39), ತನ್ನ 14 ವರ್ಷದ ಮಗಳ ಜತೆಯಲ್ಲಿ ಬೆಂಗಳೂರಿಗೆ ಬಂದಿದ್ದಳು. ಆಕೆಗೆ, ಹರಿಪ್ರಸಾದ್ ಹಾಗೂ ಆತನ ಪತ್ನಿ ಗೌರಮ್ಮನ ಪರಿಚಯ ಆಗಿತ್ತು. ಆ ದಂಪತಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಮೊದಲಿಗೆ ಕೂಲಿ ಕೆಲಸ ಮಾಡುತ್ತಿದ್ದ ಭಾವನಾ, ದುಡ್ಡಿನ ಆಸೆಗಾಗಿ ಮಗಳೊಂದಿಗೆ ವೇಶ್ಯಾವಾಟಿಕೆಗೆ ಇಳಿದಿದ್ದಳು. ಇವರನ್ನು ಇಟ್ಟುಕೊಂಡು ಹರಿಪ್ರಸಾದ್‌ ದಂಪತಿ, ಗ್ರಾಹಕರನ್ನು ಮನೆಗೇ ಆಹ್ವಾನಿಸಿ ದಂಧೆ ನಡೆಸುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು, ಮನೆ ಮೇಲೆ ದಾಳಿ ಮಾಡಿದ್ದರು. ಹರಿಪ್ರಸಾದ್‌ ದಂಪತಿ, ಭಾವನಾ ಹಾಗೂ ಗ್ರಾಹಕ ಸತೀಶ್‌ನನ್ನು ಬಂಧಿಸಿದ್ದರು. ಬಾಲಕಿ ನೀಡಿದ್ದ ಹೇಳಿಕೆ ಆಧರಿಸಿ, ಮಕ್ಕಳ ಮೇಲಿನ ಲೈಂಗಿಕ ತಡೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದರು.

ಇನ್‌ಸ್ಪೆಕ್ಟರ್‌ಗಳಾದ ಎಚ್‌.ಡಿ.ಕುಲಕರ್ಣಿ ಹಾಗೂ ಬಿ.ಗಿರೀಶ್ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.