ADVERTISEMENT

ಮಗುಚಿ ಬಿದ್ದ ಲಾರಿ: ಸಂಚಾರಕ್ಕೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಬೆಂಗಳೂರು: ನಗರದ ಮಲ್ಯ ಆಸ್ಪತ್ರೆ ಸಮೀಪದ ರಾಜಾರಾಂ ಮೋಹನ್ ರಾಯ್ ವೃತ್ತದ ಬಳಿ ಸೋಮವಾರ ಪ್ಲೈ ವುಡ್ ತುಂಬಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಸುಮಾರು ನಾಲ್ಕು ಗಂಟೆಗಳಷ್ಟು ಕಾಲ ಸಂಚಾರ ಅಸ್ತವ್ಯಸ್ತವಾಯಿತು.

ಘಟನೆಯಿಂದಾಗಿ ಮಧ್ಯಾಹ್ನ 2.30 ರಿಂದ 6.30 ರ ವರೆಗೆ ನಗರದ ಹೃದಯ ಭಾಗದ ಸಂಚಾರ ವ್ಯವಸ್ಥೆ ಹದಗೆಟ್ಟಿತು. ಕಂಠೀರವ ಕ್ರೀಡಾಂಗಣದ ಸುತ್ತಮುತ್ತಲಿನ ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಮ್ಯೂಸಿಯಂ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಸಾವಿರಾರು ವಾಹನಗಳು ಸಂಚರಿಸುವ ನಗರದ ಹೃದಯ ಭಾಗದ ಈ ರಸ್ತೆಗಳಲ್ಲಿ ಸಿಲುಕಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲು ಸಂಚಾರಿ ಪೊಲೀಸರು ಹರಸಾಹ ಪಡಬೇಕಾಯಿತು. ಕಬ್ಬನ್ ಪಾರ್ಕ್‌ನ ರಸ್ತೆಗಳ ಮೂಲಕ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು.

ಘಟನೆಯಿಂದಾಗಿ ಸಮೀಪದ ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್‌ನ ಮಕ್ಕಳು ಶಾಲೆ ಮುಗಿಸಿ ಮನೆಗಳಿಗೆ ತೆರಳಲು ಹರ ಸಾಹಸ ಪಟ್ಟರು.

ಮೆಟ್ರೊ ರೈಲು ನಿರ್ಮಾಣ ಕಾರ್ಯದ ಕ್ರೇನ್‌ಗಳು, ಬಿಎಂಟಿಸಿ ಕ್ರೇನ್ ಹಾಗೂ ಇತರೆ ಖಾಸಗಿ ಕ್ರೇನ್‌ಗಳನ್ನು ಬಳಸಿ ಸಂಜೆ ಸುಮಾರು ಆರು ಗಂಟೆಯ ವೇಳೆಗೆ ಮಗುಚಿ ಬಿದ್ದ ಲಾರಿಯನ್ನು ರಸ್ತೆಯಿಂದ ತೆರವುಗೊಳಿಸಲಾಯಿತು.

ಪ್ಲೈವುಡ್ ತುಂಬಿದ್ದ ಲಾರಿ ವೈಟ್‌ಫೀಲ್ಡ್‌ನಿಂದ ಮೈಸೂರು ರಸ್ತೆಯ ಟಿಂಬರ್ ಯಾರ್ಡ್‌ಗೆ ಹೋಗುತ್ತಿತ್ತು. ಲಾರಿ ವಿಠ್ಠಲ್ ಮಲ್ಯ ರಸ್ತೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿದೆ. ಚಾಲಕ ನಸೀರ್ ಖಾನ್ ಹಾಗೂ ಸಹಾಯಕ ಲತೀಫ್ ಭಾರಿ ಅಪಘಾತ ತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ಹಲಸೂರು ಗೇಟ್ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.