ADVERTISEMENT

ಮಚ್ಚಿನಿಂದ ಕೊಲೆಗೈದ ಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:35 IST
Last Updated 18 ಸೆಪ್ಟೆಂಬರ್ 2011, 19:35 IST

ಬೆಂಗಳೂರು: ಮನೆ ಮಾರಾಟ ಮಾಡಲು ವಿರೋಧ ವ್ಯಕ್ತಪಡಿಸಿದ ಪತ್ನಿಯ ಮೇಲೆ ಪತಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ರಾಜರಾಜೇಶ್ವರಿ ನಗರ ಸಮೀಪದ ಬಿಎಚ್‌ಇಎಲ್ ಲೇಔಟ್‌ನಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ.

ಭಾರತಿ (40) ಕೊಲೆಯಾದ ಮಹಿಳೆ. ಅವರ ಪತಿ ಆರೋಪಿ ಎಂ.ಜೆ.ಶಿವಾನಂದ (48) ಅವರನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ವಿನಯ್ ಪ್ರಸಾದ್ ಮತ್ತು ನವೀನ್ ಎಂಬ ಮಕ್ಕಳಿದ್ದಾರೆ.

ಮನೆಯ ಸಮೀಪವೇ ಟ್ರಾವೆಲ್ಸ್ ಏಜೆನ್ಸಿ ಇಟ್ಟುಕೊಂಡಿದ್ದ ಶಿವಾನಂದ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಮನೆ ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಸಾಲ ತೀರಿಸಲು ಅವರು ಉದ್ದೇಶಿಸಿದ್ದರು. ಆದರೆ ಮನೆ ಮಾರಾಟ ಮಾಡಲು ಭಾರತಿ ಅವರು ಒಪ್ಪಿರಲಿಲ್ಲ. ಇದರಿಂದ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಆಗಾಗ್ಗೆ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಂತೆಯೇ ಶನಿವಾರ ರಾತ್ರಿಯೂ ಅವರ ನಡುವೆ ಜಗಳವಾಗಿತ್ತು. ಬಳಿಕ ದಂಪತಿ ಕೊಠಡಿಗೆ ತೆರಳಿ ಮಲಗಿದ್ದರು. ವಿನಯ್ ಪ್ರತ್ಯೇಕ ಕೊಠಡಿಯಲ್ಲಿ ನಿದ್ರಿಸುತ್ತಿದ್ದರು. ಮನೆ ಮಾರಾಟ ಮಾಡುವ ವಿಷಯವಾಗಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮತ್ತೊಮ್ಮೆ ಜಗಳವಾಡಿದ ಶಿವಾನಂದ ಅವರು ಪತ್ನಿಯ ತಲೆಗೆ ಮಚ್ಚಿನಿಂದ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಭಾರತಿ ಅವರು ಸಹಾಯಕ್ಕೆ ಕೂಗಿಕೊಂಡಾಗ ಎಚ್ಚರಗೊಂಡ ವಿನಯ್, ತಾಯಿಯ ಕೊಠಡಿ ಬಳಿ ತೆರಳಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿದೆ. ಇದರಿಂದ ಆತಂಕಗೊಂಡ ವಿನಯ್, ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರು. ಆದರೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

`ಮನೆ ಮಾರಾಟ ಮಾಡುವ ವಿಷಯವಾಗಿ ಪೋಷಕರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ಕೋಪಗೊಂಡಿದ್ದ ತಂದೆ, ತಾಯಿಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ~ ಎಂದು ವಿನಯ್ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆ ನಡೆದ ಸಂದರ್ಭದಲ್ಲಿ ದಂಪತಿಯ ಮತ್ತೊಬ್ಬ ಮಗ ನವೀನ್ ಅವರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಗಳವು
ನಗರದ ಬನಶಂಕರಿ ಮತ್ತು ಬಾಣಸವಾಡಿಯಲ್ಲಿ ಶನಿವಾರ ರಾತ್ರಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಇಬ್ಬರು ಮಹಿಳೆಯರ ಚಿನ್ನದ ಸರಗಳನ್ನು ದೋಚಿದ್ದಾರೆ.

ಪತಿಯ ಜತೆ ನಡೆದು ಹೋಗುತ್ತಿದ್ದ ಮಹಿಳೆಯ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾದ ಘಟನೆ ಬನಶಂಕರಿ ಎರಡನೇ ಹಂತದ 35ನೇ ಅಡ್ಡರಸ್ತೆಯಲ್ಲಿ ನಡೆದಿದೆ.

ಬನಶಂಕರಿಯ ಅಶೋಕನಗರ ನಿವಾಸಿ ರುಕ್ಮಿಣಿ ಸರ ಕಳೆದುಕೊಂಡವರು. ಪದ್ಮನಾಭನಗರದಲ್ಲಿ ನಡೆಯುತ್ತಿದ್ದ ಪ್ರವಚನ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಪತಿ ವರದರಾಜನ್ ಅವರ ಜತೆ ಮನೆಗೆ ವಾಪಸ್ ಹೋಗುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿಯನ್ನು ಹಿಂಬಾಲಿಸಿ ಬಂದ ಕಿಡಿಗೇಡಿಯೊಬ್ಬ ರುಕ್ಮಿಣಿ ಅವರ ಸರ ಕಿತ್ತುಕೊಂಡು, ಸ್ವಲ್ಪ ದೂರದಲ್ಲೇ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ತನ್ನ ಸಹಚರನೊಂದಿಗೆ ಪರಾರಿಯಾಗಿದ್ದಾನೆ. ಸರದ ಮೌಲ್ಯ 40 ಸಾವಿರ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣ: ಬಾಣಸವಾಡಿಯ ನೆಹರು ರಸ್ತೆಯಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರ ಸರವನ್ನು ದೋಚಿದ್ದಾರೆ.

ಹೆಣ್ಣೂರು ಮುಖ್ಯರಸ್ತೆ ನಿವಾಸಿ ಜಾಯ್ಸ ಸುಂದರ್ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಅವರು ಪತಿ ಮತ್ತು ಮಕ್ಕಳೊಂದಿಗೆ ಅಂಗಡಿಗೆ ಹೋಗಿ ಮನೆಗೆ ವಾಪಸ್ ಬರುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಸರ ದೋಚಿದ್ದಾರೆ. ಸರದ ಬೆಲೆ ಸುಮಾರು 35 ಸಾವಿರ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ. ಬಾಣಸವಾಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬಂಧನ
ನಕಲಿ ಸಿ.ಡಿ ಮತ್ತು ಡಿವಿಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 11 ಮಂದಿಯನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಸುಮಾರು 42 ಲಕ್ಷ ರೂಪಾಯಿ ಮೌಲ್ಯದ ನಕಲಿ ಸಿ.ಡಿಗಳನ್ನು ವಶಪಡಿಸಿಕೊಂಡಿದ್ದಾರೆ.

ಜೆ.ಪಿ.ನಗರದ ವಸೀಂ ಅಕ್ರಂ (20), ಮಹಮ್ಮದ್ (18), ಟಿಪ್ಪು ನಗರದ ಖಮ್ರುದ್ದೀನ್ (47), ಕುಂಬಾರಪೇಟೆಯ ಅಮ್ಜದ್ ಪಾಷಾ (29), ಜಾಲಿ ಮೊಹಲ್ಲಾದ ಮುಜೀಬ್ ಪಾಷಾ (28), ಪಾದರಾಯನಪುರದ ಎಜಾಜ್ (29), ಹಳೆ ಗುಡ್ಡದಹಳ್ಳಿಯ ಅಯೂಬ್‌ಖಾನ್ (36), ಗೋರಿಪಾಳ್ಯದ ಅಫ್ಜಲ್ (20), ಕಲಾಸಿಪಾಳ್ಯದ ಸೀನುರಾವ್ (29), ಪಿ.ವೇಲು (26) ಮತ್ತು ಜಯನಗರದ ಇಮ್ರೋನ್ (28) ಬಂಧಿತರು.

ಆರೋಪಿಗಳು ಸಿಟಿ ಮಾರುಕಟ್ಟೆ ಸಮೀಪ ಹಿಂದಿ, ಇಂಗ್ಲಿಷ್, ತಮಿಳು ಮತ್ತು ತೆಲುಗು ಭಾಷೆಯ ಹೊಸ ಚಲನಚಿತ್ರಗಳ ನಕಲಿ ಸಿ.ಡಿಗಳನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರೆಲ್ಲರನ್ನು ಬಂಧಿಸಲಾಯಿತು. ಆರೋಪಿಗಳಿಂದ ಸುಮಾರು 22 ಸಾವಿರ ಸಿ.ಡಿ ಮತ್ತು ಡಿವಿಡಿಗಳು, ಮೂರು ಮೊಬೈಲ್ ಫೋನ್‌ಗಳು ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.