ADVERTISEMENT

ಮಠಾಧೀಶರಿಗೆ ಉಚಿತ ಜಮೀನು ನೀಡಿಕೆ: ಜನರು ವಿರೋಧಿಸಬೇಕು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ರಾಜರಾಜೇಶ್ವರಿ ನಗರ: `ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೆ ಸೂರಿಗಾಗಿ ಪರದಾಡುತ್ತಿರುವ ಸಾವಿರಾರು ಜನರಿಗೆ ವಸತಿ ಸೌಕರ್ಯ ಒದಗಿಸದ ಸರ್ಕಾರ, ಯೋಗ ಮತ್ತು ಶಿಕ್ಷಣದ ಹೆಸರೇಳಿಕೊಂಡು ಬರುವ ಮಠಾಧೀಶರಿಗೆ ನೂರಾರು ಎಕರೆ ಉಚಿತ ಜಮೀನನ್ನು ನೀಡುತ್ತಿದೆ. ಇದನ್ನು ಜನರು ವಿರೋಧಿಸಬೇಕು~ ಎಂದು ಶಾಸಕ ಎಂ.ಶ್ರೀನಿವಾಸ್ ಸಲಹೆ ನೀಡಿದರು.

ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಕ್ಷೇತ್ರ ಘಟಕ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.

`ಸ್ವಾಮೀಜಿಗಳು ಕೇಳಿದರೆ ಕಾಲಿಗೆ ಬಿದ್ದು ಸರ್ಕಾರಿ ಜಮೀನನ್ನು ಉಚಿತವಾಗಿ ಏಕೆ ನೀಡಬೇಕು? ಬಡವರಿಗೆ ಉಚಿತ ನಿವೇಶನ ನೀಡಲು ಜಮೀನು ಗುರುತಿಸಿ ಕೊಡಿ ಎಂದು ಅಧಿಕಾರಿಗಳನ್ನು ಕೇಳಿದರೆ ಎಲ್ಲಿಯೂ ಜಮೀನಿಲ್ಲ ಎಂದು ಕಂದಾಯ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಭೂ ಮಾಫಿಯಾ, ಬಲಿಷ್ಠರಿಗೆ ಕ್ಷೇತ್ರ ವ್ಯಾಪ್ತಿಯಲ್ಲಿ 25 ಎಕರೆ ಜಮೀನನ್ನು ಪರಭಾರೆ ಮಾಡಲಾಗಿದೆ. ಹೀಗೆ ನೀಡಿರುವ ಜಮೀನನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಬಡವರಿಗೆ ಉಚಿತ ನಿವೇಶನ ನೀಡಬೇಕು~ ಎಂದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ, ಸದಸ್ಯ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿದರು.
ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಚ್.ರಾಮಚಂದ್ರ, ಸದಸ್ಯರಾದ ವೆಂಕಟೇಶ್ ಬಾಬು, ತಿಮ್ಮರಾಜು, ಬಿಜೆಪಿ ಕ್ಷೇತ್ರ ಅಧ್ಯಕ್ಷ ಎಂ.ಮಂಜು, ಮಹಿಳಾ ಮೋರ್ಚಾ ಅಧ್ಯಕ್ಷೆ ರಶ್ಮಿ ಡಿಸೋಜ, ಪಕ್ಷದ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.