ADVERTISEMENT

ಮತದಾರರ ಪಟ್ಟಿಗೆ ಸೇರಲು ಕಡೆಯ ದಿನ 1.17 ಲಕ್ಷ ಅರ್ಜಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 20:00 IST
Last Updated 7 ಏಪ್ರಿಲ್ 2013, 20:00 IST

ಬೆಂಗಳೂರು: ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕಡೆಯ ದಿನವಾಗಿದ್ದ ಭಾನುವಾರ, ರಾಜ್ಯದ ವಿವಿಧೆಡೆಯಿಂದ ಒಟ್ಟು 1.17 ಲಕ್ಷ ಹೊಸ ಅರ್ಜಿಗಳು ಸಲ್ಲಿಕೆಯಾಗಿವೆ. ಆಯೋಗವು ಇದುವರೆಗೆ ಅಂದಾಜು 10.4 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ.

`ಕೊನೆಯ ದಿನವಾದ ಭಾನುವಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗಿವೆ. ಸಂಜೆಯವರೆಗೂ ಸ್ವೀಕರಿಸಿದ ಎಲ್ಲ ಅರ್ಜಿಗಳನ್ನೂ ಪರಿಶೀಲಿಸಿ, ಅರ್ಹ ಅರ್ಜಿದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು' ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ನಕಲಿ ಅರ್ಜಿಗಳನ್ನು ಪತ್ತೆ ಮಾಡುವ ಅಭಿಯಾನವನ್ನು ಆಯೋಗ ಸೋಮವಾರದಿಂದ ಆರಂಭಿಸಲಿದೆ. ಇದೇ 17ರ ವೇಳೆಗೆ ಮತದಾರರ ಅಂತಿಮ ಪಟ್ಟಿ ಸಿದ್ಧಪಡಿಸುವ ಗುರಿ ಆಯೋಗಕ್ಕಿದೆ.

ರಾಜ್ಯದ ಚುನಾವಣಾ ಸಿದ್ಧತೆ ಪರಿಶೀಲಿಸಲು, ಕೇಂದ್ರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಸೋಮವಾರ ಬೆಂಗಳೂರಿಗೆ ಬರಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಜೊತೆ ಆಯೋಗದ ಅಧಿಕಾರಿಗಳು ಸಭೆ ನಡೆಸಿ, ಸಿದ್ಧತೆಯ ಪರಿಶೀಲನೆ ನಡೆಸಲಿದ್ದಾರೆ. ನಂತರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಅವರು ರಾಜ್ಯದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.