ADVERTISEMENT

ಮತದಾರರ ಭೇಟಿ, ಮುಖಂಡರ ಸಭೆ

ರಾಜಧಾನಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ಪ್ರಚಾರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:39 IST
Last Updated 17 ಮಾರ್ಚ್ 2014, 19:39 IST
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಂದನ್‌ ನಿಲೇಕಣಿ ಅವರು ಸೋಮವಾರ ನಾಗಮಂಗಲದ ಆದಿಚುಂಚನಗಿರಿ ಮಠಕ್ಕೆ ತೆರಳಿ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಶಾಸಕರಾದ ಪ್ರಿಯಕೃಷ್ಣ, ಎಂ.ಕೃಷ್ಣಪ್ಪ ಅವರೂ ಜೊತೆಗಿದ್ದರು
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಂದನ್‌ ನಿಲೇಕಣಿ ಅವರು ಸೋಮವಾರ ನಾಗಮಂಗಲದ ಆದಿಚುಂಚನಗಿರಿ ಮಠಕ್ಕೆ ತೆರಳಿ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಶಾಸಕರಾದ ಪ್ರಿಯಕೃಷ್ಣ, ಎಂ.ಕೃಷ್ಣಪ್ಪ ಅವರೂ ಜೊತೆಗಿದ್ದರು   

ಬೆಂಗಳೂರು: ರಾಜಧಾನಿಯ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಸೋಮ­ವಾರವೂ ಹುರುಪಿನಿಂದ ಪ್ರಚಾರ ನಡೆಸಿದರು. ಚಾಮರಾಜ­ಪೇಟೆ, ಗಾಂಧಿನಗರ, ಶಿವಾಜಿನಗರ, ಕೆ.ಆರ್‌.ಪುರ ಮತ್ತಿತರ ವಿಧಾನಸಭಾ ಕ್ಷೇತ್ರ­ಗಳ ವ್ಯಾಪ್ತಿಯಲ್ಲಿ ಮತ ಯಾಚಿಸಿದರು.

ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿ.ನಾರಾಯಣಸ್ವಾಮಿ ಅವರು ಬೆಳಿಗ್ಗೆ ವಿಧಾನ ಪರಿಷತ್‌ ಸದಸ್ಯ ಎಂ.ವಿ.ರಾಜ­ಶೇಖರನ್‌ ಮತ್ತು ವಿಧಾನ ಪರಿಷತ್‌ನ ಮಾಜಿ ಸಚಿವ ಪ್ರೊ.ಮುಮ್ತಾಜ್‌ ಅಲಿ­ಖಾನ್‌ ಅವರ ಮನೆಗಳಿಗೆ ಭೇಟಿ ನೀಡಿದರು. ಅಲ್ಲಿಯೇ ಮುಖಂಡರನ್ನು ಭೇಟಿ ಮಾಡಿದರು.

ಸಂಜೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು ಮತ್ತು ಮುಖಂಡರ ಸಭೆಯಲ್ಲಿ ಭಾಗವಹಿಸಿ­ದರು. ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಶಾಸಕ ಎಸ್‌.ಟಿ.ಸೋಮ­ಶೇಖರ್‌, ವಿಧಾನ ಪರಿಷತ್‌ ಸದಸ್ಯ ಎಂ.ಆರ್‌.­ಸೀತಾರಾಂ, ಮಾಜಿ ಶಾಸಕ­ರಾದ ನೆ.ಲ ನರೇಂದ್ರಬಾಬು, ಬಿ.ಪ್ರಸನ್ನ­ಕುಮಾರ್‌, ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.­ಎಲ್‌.­ಶಂಕರ್‌, ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌.ಭೋಸರಾಜು ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಉದ್ಯಮಿಗಳೊಂದಿಗೆ ಸಂವಾದ: ಬೆಂಗ­ಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಅವರು ಗೋವಿಂದರಾಜನಗರ ವಿಧಾನ­ಸಭಾ ಕ್ಷೇತ್ರದ ವ್ಯಾಪ್ತಿಯ ಹಂಪಿನಗರ ಹಾಗೂ ಸುತ್ತಮುತ್ತಲ ಪ್ರದೇಶ ಮತ್ತು ವಿಜಯ­ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ­ಯಲ್ಲಿ ಪ್ರಚಾರ ನಡೆಸಿದರು. ನಂತರ ವಿಜಯನಗರದ ಸಣ್ಣ ಕೈಗಾರಿಕೆ­ಗಳ ಸಂಘದಲ್ಲಿ (ಕಾಸಿಯಾ) ಸಣ್ಣ ಕೈಗಾರಿ­ಕೋದ್ಯಮಿಗಳ ಜೊತೆ ಸಂವಾದ ನಡೆಸಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.­ಮೋಹನ್‌ ಅವರು ಬೆಳಿಗ್ಗೆ ಚಾಮರಾಜ­ಪೇಟೆ ವಿಧಾನಸಭಾ ಕ್ಷೇತ್ರದ ಗೋರಿ­ಪಾಳ್ಯ, ಬಿನ್ನಿಪೇಟೆ ಮತ್ತಿತರ ಕಡೆಗಳಲ್ಲಿ ಮತದಾರರನ್ನು ಭೇಟಿ ಮಾಡಿದರು. ಬಳಿಕ ಲೋಕಸಭಾ ಕ್ಷೇತ್ರದ ಬಿಜೆಪಿ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು. ಸಂಜೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಬೆಂಬಲ ಯಾಚಿಸಿದರು.

ಇದೇ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಬೆಳಿಗ್ಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸುಭಾಷ್‌ ನಗರದಲ್ಲಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡರು. ನಂತರ ಕಾಂಗ್ರೆಸ್‌ನ ಹಲವು ಮುಖಂಡರನ್ನು ಭೇಟಿ ಮಾಡಿ ಚುನಾವಣಾ ಪ್ರಚಾರದ ಕುರಿತು ಚರ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.