ADVERTISEMENT

ಮತ್ತೆ ಕೈಕೊಟ್ಟ ಮೆಟ್ರೊ: ತಾಸು ಸ್ಥಗಿತ

ವಿದ್ಯುತ್‌ ಪೂರೈಕೆಯಲ್ಲಿ ತಾಂತ್ರಿಕ ದೋಷ:

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 20:14 IST
Last Updated 10 ಜೂನ್ 2017, 20:14 IST
ಮತ್ತೆ ಕೈಕೊಟ್ಟ ಮೆಟ್ರೊ: ತಾಸು ಸ್ಥಗಿತ
ಮತ್ತೆ ಕೈಕೊಟ್ಟ ಮೆಟ್ರೊ: ತಾಸು ಸ್ಥಗಿತ   

ಬೆಂಗಳೂರು: ಉತ್ತರ - ದಕ್ಷಿಣ ಕಾರಿಡಾರ್‌ನ ವಿದ್ಯುತ್‌ ಪೂರೈಕೆ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಮೆಟ್ರೊ ರೈಲು ಸಂಚಾರ ಶನಿವಾರ ಮತ್ತೆ ದಿಢೀರ್‌ ಸ್ಥಗಿತಗೊಂಡಿತು.

ಗೊರಗುಂಟೆಪಾಳ್ಯ ನಿಲ್ದಾಣದಿಂದ ನಾಗಸಂದ್ರದ ಕಡೆಗೆ ಸಂಚರಿಸುತ್ತಿದ್ದ ರೈಲು ರಾತ್ರಿ 8.20ರ ಸುಮಾರಿಗೆ ಮಾರ್ಗ ಮಧ್ಯೆಯೇ  ನಿಂತಿತು.  ಹಾಗಾಗಿ ಪ್ರಯಾಣಿಕರನ್ನು ಕೆಳಗೆ ಇಳಿಸಿ ನಿಲ್ದಾಣ ದವರೆಗೆ ಕರೆದೊಯ್ಯಬೇಕಾಯಿತು. ರೈಲನ್ನು ನಿಲ್ದಾಣದವರೆಗೆ ಎಳೆದು ತರಬೇಕಾಯಿತು.

ರಾತ್ರಿ ವೇಳೆ ಈ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಹೆಚ್ಚಿನ ತೊಂದರೆ ಅನುಭವಿಸಿದರು. ಎತ್ತರಿಸಿದ ರೈಲು ಮಾರ್ಗದ ನಡುವೆ ಪ್ರಯಾಣಿಕರು ಸುಮಾರು 20 ನಿಮಿಷ ಸಿಲುಕಿಕೊಂಡರು. ರಾತ್ರಿ ಆದಷ್ಟು ಬೇಗ ಮನೆಯನ್ನು ತಲುಪುವ ಧಾವಂತದಲ್ಲಿದ್ದ ಪ್ರಯಾಣಿಕರು ಆಕಸ್ಮಿಕವಾಗಿ ಎದುರಾದ ಸಮಸ್ಯೆಯಿಂದಾಗಿ ಆತಂಕಕ್ಕೆ ಒಳಗಾದರು.

ADVERTISEMENT

ಒಂದು ತಾಸಿನ ಬಳಿಕ ಸಹಜ ಸ್ಥಿತಿಗೆ: ನಾಗಸಂದ್ರದಿಂದ– ಸಂಪಿಗೆರಸ್ತೆ ನಡುವೆ ಮೆಟ್ರೊ ಸಂಚಾರವನ್ನು ಸಹಜ ಸ್ಥಿತಿಗೆ  ತರಲು ಒಂದು ತಾಸಿಗೂ ಹೆಚ್ಚು ಸಮಯ ಹಿಡಿಯಿತು. ಸೇವೆ ಪುನರಾರಂಭವಾಗುವಾಗ ರಾತ್ರಿ 9.25 ಆಗಿತ್ತು. ಈ ಕಾರಿಡಾರ್‌ನ ಉಳಿದ ನಿಲ್ದಾಣಗಳಲ್ಲಿದ್ದ ಪ್ರಯಾಣಿಕರು ಮೆಟ್ರೊ ರೈಲಿಗಾಗಿ ಕಾದು ಸುಸ್ತಾದರು.

‘ತಾಂತ್ರಿಕ ದೋಷದಿಂದಾಗಿ ಗೊರಗೊಂಟೆಪಾಳ್ಯದಿಂದ ನಾಗಸಂದ್ರ ಕಡೆಗಿನ ಮೆಟ್ರೊ ಸೇವೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ಟಿಕೆಟ್‌ ಹಣವನ್ನು ಮರಳಿಸಿದ್ದೇವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್‌ ತಿಳಿಸಿದರು.

ಶುಕ್ರವಾರ ಬೆಳಿಗ್ಗೆ 11.20ಕ್ಕೆ  ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ  ರಾಜಾಜಿನಗರ– ಸಂಪಿಗೆ ರಸ್ತೆ ಮೆಟ್ರೊ ನಿಲ್ದಾಣಗಳ ನಡುವೆ 36 ನಿಮಿಷ ಮೆಟ್ರೊ ರೈಲು ಸಂಪರ್ಕ ಸ್ಥಗಿತಗೊಂಡಿತ್ತು. ದೋಷ ಕಾಣಿಸಿಕೊಳ್ಳುವಾಗ ರೈಲುಗಳು ನಿಲ್ದಾಣದಲ್ಲೇ ಇದ್ದುದರಿಂದ ಪ್ರಯಾಣಿಕರು ಹೆಚ್ಚಿನ ತೊಂದರೆ ಆಗಿರಲಿಲ್ಲ.

ಮೊದಲ ಹಂತ ಪೂರ್ಣಗೊಂಡ ಸಂಭ್ರಮಾಚರಣೆಗೆ ಸಿದ್ಧತೆ ನಡೆಯುತ್ತಿರುವ ವೇಳೆಯೇ ಸತತ ಎರಡು ದಿನ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ನಿಗಮದ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.

ಪರೀಕ್ಷಾರ್ಥ ಸಂಚಾರ: ಯಲಚೇನಹಳ್ಳಿ – ನಾಗಸಂದ್ರ ನಡುವೆ 24 ಕಿ.ಮೀ ಉದ್ದದ ಮಾರ್ಗದಲ್ಲಿ  ಜೂನ್‌ 12ರಿಂದ 14ರವರೆಗೆ ಪರೀಕ್ಷಾರ್ಥ ಮೆಟ್ರೊ ರೈಲು ಸಂಚಾರ ನಡೆಸಲು ನಿಗಮ ಸಿದ್ಧತೆ ನಡೆಸಿದೆ.

‘ಮೂರು ದಿನಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ರೈಲುಗಳು ಸಂಚರಿಸಲಿವೆ. ನಾಗಸಂದ್ರದಿಂದ ಸಂಪಿಗೆ ರಸ್ತೆವರೆಗೆ  ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಇರಲಿದೆ. ಸಂಪಿಗೆ ರಸ್ತೆ– ನಾಗಸಂದ್ರದ ನಡುವೆ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ವಸಂತ ರಾವ್‌ ತಿಳಿಸಿದರು.

ಸಚಿವರಿಂದ ತಪಾಸಣೆ: ‘ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಿಂದ ಕೆ.ಆರ್‌.ಮಾರುಕಟ್ಟೆ ನಿಲ್ದಾಣದವರೆಗಿನ ಸುರಂಗ ಮಾರ್ಗದ ಕಾಮಗಾರಿಗಳ ತಪಾಸಣೆ ನಡೆಸಲಿದ್ದಾರೆ’ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.