ADVERTISEMENT

ಮಧುಮೇಹ: ಸಂಚಾರಿ ಚಿಕಿತ್ಸಾ ಘಟಕಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಬೆಂಗಳೂರು: ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಬಡ ಜನರಿಗೆ ರಿಯಾಯ್ತಿ ದರದಲ್ಲಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಜೈನ್ ಇನ್‌ಸ್ಟಿಟ್ಯೂಟ್ ಆಫ್ ವ್ಯಾಸ್ಕುಲರ್ ಸೈನ್ಸಸ್ (ಜೆಐವಿಎಸ್) ಸಂಸ್ಥೆಯು ಆರಂಭಿಸಿರುವ ಸಂಚಾರಿ ಚಿಕಿತ್ಸಾ ಘಟಕಗಳಿಗೆ ಗುರುವಾರ ಚಾಲನೆ ನೀಡಲಾಯಿತು.

`ಈಚಿನ ವರ್ಷಗಳಲ್ಲಿ ಮಧುಮೇಹಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಮಧ್ಯವಯಸ್ಕರ ಪೈಕಿ ಶೇ 13ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹ ಸಮಸ್ಯೆಗೆ ಒಳಗಾದವರಿಗೆ ಪಾದದ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಪರಿಸ್ಥಿತಿ ಕೈಮೀರಿದರೆ ಕಾಲುಗಳನ್ನೇ ಕತ್ತರಿಸಬೇಕಾಗುತ್ತದೆ.

ಹಾಗಾಗಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ~ ಎಂದು ಜೆಐವಿಎಸ್ ನಿರ್ದೇಶಕ ಡಾ.ಕಲ್ಕುಂಟೆ ಆರ್. ಸುರೇಶ್ ಹೇಳಿದರು.ಬೆಂಗಳೂರಿನಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಮಂದಿ ಮಧುಮೇಹಿಗಳು ಪಾದದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
 
ಈ ಜನರ ಅನುಕೂಲಕ್ಕಾಗಿ ಐದು `ಮೊಬೈಲ್ ಡಯಾಬಿಟಿಕ್ ಫುಟ್ ಕ್ಲಿನಿಕ್~ಗಳು ಹಾಗೂ ಗ್ರಾಮೀಣ ಜನರ ಅನುಕೂಲಕ್ಕಾಗಿ 8 `ಸ್ಯಾಟಲೈಟ್ ಡಯಾಬಿಟಿಕ್ ಫೂಟ್ ಅಂಡ್ ವ್ಯಾಸ್ಕುಲರ್ ಕೇರ್ ಕ್ಲಿನಿಕ್~ಗಳ ಸೇವೆ ಆರಂಭಿಸಲಾಗಿದೆ ಎಂದರು.

ಹಾಸಿಗೆ ಹಿಡಿದವರು ಹಾಗೂ ಆಸ್ಪತ್ರೆಗೆ ಹೋಗಲು ಸಾಧ್ಯವಾಗದವರಿಗೆ `ಮೊಬೈಲ್ ಡಯಾಬಿಟಿಕ್ ಫೂಟ್ ಕ್ಲಿನಿಕ್~ ಮೂಲಕ ಮನೆಯಲ್ಲೇ ಚಿಕಿತ್ಸೆ ನೀಡಿ ಶುಶ್ರೂಷೆ ನೀಡಲಾಗುವುದು. ಬಡವರಿಗೆ ಈ ಸೇವೆಯನ್ನು ಉಚಿತವಾಗಿ ನೀಡಲಾಗುವುದು. ಉಳಿದವರಿಂದ ಶುಲ್ಕ ಸಂಗ್ರಹಿಸಲಾಗುವುದು ಎಂದು ಹೇಳಿದರು.

ಸಂಚಾರಿ ಘಟಕಗಳ ಸೇವೆಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಚಾಲನೆ ನೀಡಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಗೋಪಾಲಕೃಷ್ಣೇಗೌಡ, ಮಹಾವೀರ ಜೈನ್ ಆಸ್ಪತ್ರೆಯ ಅಧ್ಯಕ್ಷ ಪಾರಸ್ಮಲ್ ಬನ್ಸಾಲಿ, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ಸ್ಥಾಪಕಿ ಡಾ.ರಾಧಾ ಮೂರ್ತಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.