ADVERTISEMENT

ಮನೆಗೆ ನುಗ್ಗಿ ಮಹಿಳೆಯ ಬರ್ಬರ ಹತ್ಯೆ

ಕಸ್ತೂರಬಾ ನಗರದಲ್ಲಿ ನಡೆದ ಕೃತ್ಯ * ಆರೋಪಿ ಪತ್ತೆಗೆ ಮೂರು ತಂಡಗಳ ರಚನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 20:11 IST
Last Updated 1 ಮಾರ್ಚ್ 2018, 20:11 IST
ಮನೆಗೆ ನುಗ್ಗಿ ಮಹಿಳೆಯ ಬರ್ಬರ ಹತ್ಯೆ
ಮನೆಗೆ ನುಗ್ಗಿ ಮಹಿಳೆಯ ಬರ್ಬರ ಹತ್ಯೆ   

ಬೆಂಗಳೂರು: ಮೈಸೂರು ರಸ್ತೆಯ ಕಸ್ತೂರಬಾ ನಗರದಲ್ಲಿ ಗುರುವಾರ ಬೆಳಿಗ್ಗೆ ಮನೆಗೆ ನುಗ್ಗಿದ ಹಂತಕ, ಕತ್ತು ಸೀಳಿ ಕವಿತಾ (30) ಎಂಬುವರನ್ನು ಕೊಲೆಗೈದಿದ್ದಾನೆ.

ಬೆಳಿಗ್ಗೆ 9.30ರ ಸುಮಾರಿಗೆ ಕವಿತಾ ಮಕ್ಕಳಿಬ್ಬರನ್ನು ಶಾಲೆಗೆ ಬಿಟ್ಟು ಮನೆಗೆ ಮರಳಿದ್ದರು. ಇದೇ ವೇಳೆ ಹತ್ಯೆ ನಡೆದಿದ್ದು, ಅವರ ತಂದೆ ಶಿವಸ್ವಾಮಿ ಹಾಗೂ ನಾದಿನಿ ಮಂಗಳಗೌರಿ 10.30ರ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಪರಿಚಿತರೇ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ಸುತ್ತಮುತ್ತಲ ಕಟ್ಟಡಗಳಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.

‘ನಾನು ನಾಗದೇವನಹಳ್ಳಿಯ ಸಂಕ್ರಾಂತಿ ವುಡ್ ಫ್ಯಾಕ್ಟರಿಯಲ್ಲಿ ಮಾರಾಟ ಪ್ರತಿನಿಧಿಯಾಗಿದ್ದೇನೆ. ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದೆ. ಆ ನಂತರ ಮನೆಗೆ ನುಗ್ಗಿ ಪತ್ನಿಯನ್ನು ಕೊಂದಿರುವ ಹಂತಕ, ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರ ಹಾಗೂ ಅಲ್ಮೆರಾದಲ್ಲಿದ್ದ ₹ 1.4 ಲಕ್ಷ ತೆಗೆದುಕೊಂಡು ಹೋಗಿದ್ದಾನೆ’ ಎಂದು ಮೃತರ ಪತಿ ಶಿವರಾಮ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

ADVERTISEMENT

ಒಳಗೆ ಹಂತಕ, ಬಾಗಿಲಲ್ಲಿ ಅಪ್ಪ!: ಟಿ.ನರಸಿಪುರ ತಾಲ್ಲೂಕು ಮಡವಾಡಿ ಗ್ರಾಮದ ಶಿವರಾಮ್ ಹಾಗೂ ಮಳವಳ್ಳಿ ತಾಲ್ಲೂಕು ಬೆಳಕವಾಡಿಯ ಕವಿತಾ 11 ವರ್ಷಗಳ ಹಿಂದೆ ವಿವಾಹವಾಗಿದ್ದರು. ಕಸ್ತೂರಬಾ ನಗರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಹೊಂದಿರುವ ಶಿವರಾಮ್, ಪತ್ನಿ–ಮಕ್ಕಳ ಜತೆ ಮೊದಲ ಮಹಡಿಯಲ್ಲಿ ನೆಲೆಸಿದ್ದರು. ಮೇಲಿನ ಮಹಡಿಗಳಲ್ಲಿದ್ದ ಐದು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದರು.

ಪಕ್ಕದ ಮನೆಯಲ್ಲೇ ಶಿವರಾಮ್ ತಂಗಿ ಮಂಗಳಗೌರಿ ಕುಟುಂಬವಿದೆ. ಸಿಟಿ ಮಾರ್ಕೆಟ್‌ನಲ್ಲಿ ಕೆಲಸ ಮಾಡುವ ಕವಿತಾ ತಂದೆ, ಕಾಳಿದಾಸ ಲೇಔಟ್‌ನಲ್ಲಿ ‌ನೆಲೆಸಿದ್ದಾರೆ. ಶಿವರಾಮ್ ಅವರ ಕೆಲ ಸಂಬಂಧಿಗಳು ಸಹ ಅಕ್ಕ–ಪಕ್ಕದ ರಸ್ತೆಗಳಲ್ಲೇ ನೆಲೆಸಿದ್ದಾರೆ.

ಪತಿ ಮೂರು ದಿನಗಳಿಂದ ಬೇಗನೆ ಕೆಲಸಕ್ಕೆ ಹೋಗುತ್ತಿದ್ದರಿಂದ ಕವಿತಾ ಅವರೇ ಮಕ್ಕಳನ್ನು ಕಾಳಿದಾಸ ಲೇಔಟ್‌ನಲ್ಲಿರುವ ಶಾಲೆಗೆ ಬಿಟ್ಟು ಬರುತ್ತಿದ್ದರು. ಸಂಜೆ ಅವರೇ ಹೋಗಿ ಕರೆದುಕೊಂಡು ಬರುತ್ತಿದ್ದರು.

(ಕವಿತಾ)

ಅಂತೆಯೇ ಬೆಳಿಗ್ಗೆ ಮಕ್ಕಳನ್ನು ಬಿಟ್ಟು ಬರುತ್ತಿದ್ದಾಗ ಹೋಟೆಲ್‌ನಲ್ಲಿ ತಿಂಡಿ ತಿನ್ನುತ್ತಿದ್ದ ತಂದೆಯನ್ನು ನೋಡಿದ ಕವಿತಾ, ‘ಹತ್ತಿರದಲ್ಲೇ ನನ್ನ ಮನೆ ಇಟ್ಟುಕೊಂಡು, ಹೋಟೆಲ್‌ನಲ್ಲಿ ಊಟ–ತಿಂಡಿ ಮಾಡುತ್ತೀರಲ್ಲ? ಮನೆಯಲ್ಲಿ ತಿಂಡಿ ಮಾಡಿದ್ದೇನೆ. ಅಲ್ಲೇ ತಿನ್ನೋಣ ಬನ್ನಿ’ ಎಂದಿದ್ದಾರೆ.

ಅದಕ್ಕೆ ಶಿವಸ್ವಾಮಿ, ‘ನೀನು ಮುಂದೆ ಹೋಗಮ್ಮ. ನಾನು ಬೋಂಡಾ ಕಟ್ಟಿಸಿಕೊಂಡು ಹಿಂದೆಯೇ ಬರುತ್ತೇನೆ’ ಎಂದು ಹೇಳಿ ಕಳುಹಿಸಿದ್ದಾರೆ. ಅಂತೆಯೇ ಮನೆ ಬಳಿ ಬಂದ ಕವಿತಾ, ಬೀಗ ತೆಗೆಯುತ್ತಿದ್ದಂತೆಯೇ ಹಂತಕ ಅವರನ್ನು ದೂಡಿಕೊಂಡು ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾನೆ. ನಂತರ ಚಾಕುವಿನಿಂದ ಸುಮಾರು ಆರು ಇಂಚಿನಷ್ಟು ಕುತ್ತಿಗೆ ಸೀಳಿ ಬರ್ಬರವಾಗಿ ಕೊಂದಿದ್ದಾನೆ ಎಂದು ಪೊಲೀಸರು ಹೇಳಿದರು.

ಬೋಂಡಾ ಕಟ್ಟಿಸಿಕೊಂಡು ಐದೇ ನಿಮಿಷದಲ್ಲಿ ಶಿವಸ್ವಾಮಿ ಮಗಳ ಮನೆ ಹತ್ತಿರ ಬಂದಿದ್ದಾರೆ. ಅವರು ಬಾಗಿಲು ಬಡಿದಾಗ ಮನೆಯೊಳಗೇ ಇದ್ದ ಹಂತಕ, ಗಾಬರಿಯಿಂದ ಬಾಗಿಲು ತೆಗೆದಿಲ್ಲ. ಎಷ್ಟೇ ಬಾಗಿಲು ಬಡಿದರೂ ಪ್ರತಿಕ್ರಿಯೆ ದೊರೆಯದಿದ್ದಾಗ, ಮಗಳು ಇನ್ನೂ ಮನೆಗೆ ಬಂದಿಲ್ಲವೆಂದು ಭಾವಿಸಿ ಶಿವಸ್ವಾಮಿ ಸ್ವಲ್ಪ ಹೊತ್ತು ಹೊರಗಡೆಯೇ ಕುಳಿತಿದ್ದರು.

ನಂತರ ಪಕ್ಕದಲ್ಲೇ ಇರುವ ಮಂಗಳಗೌರಿ (ಕವಿತಾ ನಾದಿನಿ) ಮನೆಗೆ ಹೋಗಿ, ‘ಮಗಳು ತಿಂಡಿಗೆ ಕರೆದಿದ್ದಳು. ಆಕೆ ಇನ್ನೂ ಬಂದಂತೆ ಕಾಣುತ್ತಿಲ್ಲ. ಇನ್ನೊಂದು ಕೀ ಇದ್ದರೆ, ಬಂದು ಮನೆಯ ಬೀಗ ತೆಗೆಯಮ್ಮ’ ಎಂದಿದ್ದರು. ಈ ಹಂತದಲ್ಲಿ ಹಂತಕ ಬಾಗಿಲು ತೆಗೆದು ಓಡಿಹೋಗಿದ್ದ.

ಮಂಗಳಗೌರಿ ಹಾಗೂ ಶಿವಸ್ವಾಮಿ ಕೀ ತೆಗೆದುಕೊಂಡು ಮನೆ ಹತ್ತಿರ ಬಂದಾಗ ಬಾಗಿಲು ತೆರೆದೇ ಇತ್ತು. ಒಳಗೆ ಹೋದಾಗ ಕವಿತಾ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದರು. ಅದನ್ನು ಕಂಡು ಇಬ್ಬರೂ ಚೀರಿಕೊಂಡಿದ್ದರು. ಅವರ ಚೀರಾಟ ಕೇಳಿ ಜಮಾಯಿಸಿದ ಸ್ಥಳೀಯರು, ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು.

ಶ್ವಾನ ಹಾಗೂ ಬೆರಳಚ್ಚು ದಳಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಬ್ಯಾಟರಾಯನಪುರ ಪೊಲೀಸರು, ಮೃತರ ತಂದೆ, ನಾದಿನಿ ಹಾಗೂ ಪತಿಯನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು.

*ಕವಿತಾ ಅವರ ಮನೆ ನಿರ್ಜನ ಪ್ರದೇಶದಲ್ಲಿಲ್ಲ. ಅಕ್ಕ–ಪಕ್ಕದಲ್ಲಿ ತುಂಬ ಮನೆಗಳಿವೆ. ಹೀಗಾಗಿ, ಹೊರಗಿನವರು ಅಷ್ಟು ಸುಲಭವಾಗಿ ಮನೆಗೆ ನುಗ್ಗಿ ಕೊಲೆ ಮಾಡಿರುವ ಸಾಧ್ಯತೆ ಕಡಿಮೆ.

*ಕಳ್ಳತನ ಮಾಡುವುದೇ ಉದ್ದೇಶವಾಗಿದ್ದರೆ, ಹಂತಕ ಕವಿತಾ ಮನೆಗೆ ಬರುವ ವರೆಗೂ ಕಾಯುತ್ತಿರಲಿಲ್ಲ. ಮೊದಲೇ ಮನೆಗೆ ನುಗ್ಗಿ ನಗ–ನಾಣ್ಯ ದೋಚಿ ಪರಾರಿಯಾಗುತ್ತಿದ್ದ. ಅವರು ಬರುವವರೆಗೂ ಕಾದು ದಾಳಿ ನಡೆಸಿರುವು ದನ್ನು ಗಮನಿಸಿದರೆ, ಕೊಲ್ಲುವ ಉದ್ದೇಶದಿಂದಲೇ ಬಂದಿರುವುದು ಸ್ಪಷ್ಟ.

*ಕವಿತಾ ಸತ್ತು ಬಿದ್ದಾಗಲೂ ಅವರ ಕಾಲಿನಲ್ಲಿ ಚಪ್ಪಲಿಗಳಿದ್ದವು. ಅವರು ಮನೆ ಬೀಗ ತೆಗೆಯುತ್ತಿದ್ದಂತೆಯೇ ಹಂತಕ ಕೃತ್ಯ ಎಸಗಿದ್ದಾನೆ ಎಂಬುದು ಇದರಿಂದ ಗೊತ್ತಾಗುತ್ತದೆ.

*ಪ್ರತಿದಿನ 10 ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದ ಶಿವರಾಮ್, ಮೂರು ದಿನಗಳಿಂದ 8 ಗಂಟೆಗೇ ಹೋಗುತ್ತಿದ್ದಾರೆ. ಹೀಗಾಗಿ, ಸಂಶಯದ ಮೇಲೆ ಅವರನ್ನೂ ವಿಚಾರಣೆ ನಡೆಸುತ್ತಿದ್ದೇವೆ.

*ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ರಾತ್ರಿ ವಾಗ್ವಾದ ನಡೆದಿತ್ತು ಎಂಬುದು ಸ್ಥಳೀಯರ ವಿಚಾರಣೆಯಿಂದ ಗೊತ್ತಾಗಿದೆ. ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

‘ದಂಪತಿ ಅನ್ಯೋನ್ಯವಾಗಿದ್ದರು’

‘ನನಗೆ ತಿಳಿದಂತೆ ಶಿವರಾಮ್ ದಂಪತಿಗೆ ಯಾರೂ ಶತ್ರುಗಳಿರಲಿಲ್ಲ. ಯಾರೊಟ್ಟಿಗೂ ಜಗಳ ಮಾಡಿಕೊಂಡವರಲ್ಲ. ದಂಪತಿ ಕೂಡ ಅನ್ಯೋನ್ಯವಾಗಿದ್ದರು. ಕವಿತಾ ಹತ್ಯೆ ಆಘಾತ ಉಂಟು ಮಾಡಿದೆ’ ಎಂದು ಮೃತರ ಸೋದರ ಸಂಬಂಧಿ ವಿಜಯ್ ಹೇಳಿದರು.

* ಹಂತಕನ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ

  – ಎಂ.ಎನ್.ಅನುಚೇತ್, ಡಿಸಿಪಿ, ಪಶ್ಚಿಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.