ADVERTISEMENT

ಮರಕ್ಕೆ ಕೊಡಲಿ: ತಾತ್ಕಾಲಿಕ ತಡೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 18:30 IST
Last Updated 3 ಅಕ್ಟೋಬರ್ 2012, 18:30 IST

ಬೆಂಗಳೂರು: `ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ~ ನಿಷ್ಪಲವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಅಭಿವೃದ್ಧಿ ಕಾರ್ಯಗಳಿಗೆ ಮರ ಕಡಿಯುವ ಕ್ರಮಕ್ಕೆ ಆಕ್ಷೇಪ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ದೊರೆಯುತ್ತಿಲ್ಲ ಎಂದು ಹೇಳಿದೆ. ಮುಂದಿನ ಆದೇಶದವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮರ ಕಡಿಯುವಂತಿಲ್ಲ ಎಂದೂ ಪೀಠ ಹೇಳಿದೆ.

ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ 2008ರಲ್ಲಿ ಸಲ್ಲಿಸಿದ್ದ ಅರ್ಜಿ ಮತ್ತು ಹೈಕೋರ್ಟ್ ಸ್ವಯಂಪ್ರೇರಿತವಾಗಿ 2011ರಲ್ಲಿ ದಾಖಲು ಮಾಡಿಕೊಂಡಿದ್ದ ಅರ್ಜಿಯೊಂದರ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಬುಧವಾರ ಈ ಆದೇಶ ನೀಡಿದೆ.

`ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಉದ್ದೇಶಕ್ಕೆ ಮರ ಕಡಿಯುವ ಮುನ್ನ, ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಅವರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು~ ಎಂದು ಅಭಿಪ್ರಾಯಪಟ್ಟಿತು.
`ಬಿಬಿಎಂಪಿಯು ಉದ್ಯಾನ ನಗರಿ ಬೆಂಗಳೂರಿನಲ್ಲಿ ಒಟ್ಟು 8.5 ಲಕ್ಷ ಸಸಿಗಳನ್ನು ನೆಟ್ಟಿರುವುದಾಗಿ ಹೇಳುತ್ತಿದೆ.

ಹಾಗಾದರೆ ಅವೆಲ್ಲ ಏನಾದವು?~ ಎಂದು ಅರ್ಜಿದಾರರ ಪರ ವಕೀಲರು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಬಿಬಿಎಂಪಿ ಪರ ವಕೀಲರು, `ಸಸಿಗಳು ಸಹಜವಾಗಿ ಸತ್ತಿರಬಹುದು~ ಎಂದರು.
ಸಂಬಂಧಪಟ್ಟ ಅಧಿಕಾರಿಗಳು ಅನುಮತಿ ನೀಡಿದ ತಕ್ಷಣ ಮರ ಕಡಿಯಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಮರ ಕಡಿಯುವ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕರ ಅಭಿಪ್ರಾಯವೂ ಇದೇ ಆಗಿದೆ ಎಂದು ಪೀಠ ಹೇಳಿತು. ನಂತರ ವಿಚಾರಣೆಯನ್ನು ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.