ADVERTISEMENT

ಮರಳು ಸಾಗಣೆ ಲಾರಿಗಳ ಅನಿರ್ದಿಷ್ಟಾವಧಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ಬೆಂಗಳೂರು: ಸರ್ಕಾರ ರೂಪಿಸಿರುವ ನೂತನ ಮರಳು ಸಾಗಣೆ ನೀತಿಯನ್ನು ವಿರೋಧಿಸಿ ಲಾರಿ ಮಾಲೀಕರು ರಾಜ್ಯದೆಲ್ಲೆಡೆ ಶುಕ್ರವಾರ ಮಧ್ಯರಾತ್ರಿಯಿಂದ ಮರಳು ಸಾಗಣೆಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

‘ಸರ್ಕಾರ ರೂಪಿಸಿರುವ ನೂತನ ಮರಳು ಸಾಗಣೆ ನೀತಿ ಅವೈಜ್ಞಾನಿಕವಾಗಿದೆ. ಸುಗಮ ಮರಳು ಸಾಗಣೆಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಗಳನ್ನು ಆ ನೀತಿಯು ಒಳಗೊಂಡಿಲ್ಲ’ ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಷ್ಕರದ ಭಾಗವಾಗಿ ರಾಜ್ಯ ವ್ಯಾಪಿ ಸುಮಾರು 15 ಸಾವಿರ ಮರಳು ಸಾಗಣೆ ಲಾರಿಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮರಳು ಸಾಗಣೆಗೆ ಮಾಸಿಕ ಪರವಾನಗಿ (ಪರ್ಮಿಟ್‌) ನೀಡಬೇಕು. ಲಾರಿ ಮಾಲೀಕರ ಮೇಲೆ ಲೋಕೋಪಯೋಗಿ, ಸಾರಿಗೆ, ಪೊಲೀಸ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ತಡೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ಮರಳು ಸಾಗಣೆ ತಡೆಗೆ ಕಡಿವಾಣ ಹಾಕಬೇಕು. ಈ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟವು ಮುಷ್ಕರಕ್ಕೆ ಬೆಂಬಲ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.