ADVERTISEMENT

ಮರ ಕಡಿದ ಕ್ರಮ ಖಂಡನೀಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ನೆಲಮಂಗಲ: `ನದಿ ಪುನಶ್ಚೇತನ ನೆಪದಲ್ಲಿ ನದಿ ಪಾತ್ರದಲ್ಲಿನ ಸಾವಿರಾರು ಮರಗಳನ್ನು ಕಡಿದ ಕರ್ನಾಟಕ ಸರ್ಕಾರದ ಕ್ರಮ ಅತ್ಯಂತ ಖಂಡನೀಯ~ ಎಂದು ಜಲತಜ್ಞ ಡಾ.ರಾಜೇಂದ್ರಸಿಂಗ್ ಕಿಡಿ ಕಾರಿದರು.

ಇಲ್ಲಿಗೆ ಸಮೀಪದ ತೊರೆ ಮೂಡ್ಲಪಾಳ್ಯದ ಪರಿಸರವಾದಿ ಗೋಪಾಲ್ ನವಿಲೆ ಅವರ ತೋಟದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಮತ್ತು ಬೆಂಗಳೂರಿನ ಪೂರ್ಣಪ್ರಮತಿ ಶಾಲೆ ಮಕ್ಕಳೊಂದಿಗೆ ಭಾನುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.

`ಶಿವಗಂಗೆಯಂತಹ ಸುಂದರ ಪ್ರಕೃತಿ ಹಾಗೂ ಅಲ್ಲಿ ಹುಟ್ಟುವ ನದಿಯನ್ನು ರಕ್ಷಿಸಿ ಪುನಶ್ಚೇತನಗೊಳಿಸುವ ಕಾರ್ಯ ಸ್ವಯಂಸೇವಾ ಸಂಸ್ಥೆ ಮತ್ತು ಸರ್ಕಾರದಿಂದ ಕೂಡಲೇ ಆಗಬೇಕು~ ಎಂದು ಅವರು ತಿಳಿಸಿದರು.

ಬೆಟ್ಟದ ತಪ್ಪಲಿನಲ್ಲಿ ಗಿಡಗಳನ್ನು ನೆಟ್ಟು ಮೆಲಣಗವಿ ಮಠದ ಆವರಣದಲ್ಲಿರುವ ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಯಿತು. ನೆಲಮಂಗಲದ ಕುಮುದ್ವತಿ ನದಿ ಪುನಶ್ಚೇತನ ಸಮಿತಿ ಆಯೋಜಿಸಿದ್ದ ಜಲಾಯನ ಅಭಿವೃದ್ಧಿ ಚಟುವಟಿಕೆಯಲ್ಲಿ ಬೆಂಗಳೂರಿನ ನವಚೇತನ ಸಂಸ್ಥೆ, ಗ್ಲೋಬಲ್ ಆಕಾಡೆಮಿ ಆಫ್ ಟೆಕ್ನಾಲಜಿ, ನೆಲಮಂಗಲದ ನೀರು ನಿರ್ವಹಣ ವೇದಿಕೆ, ಕಿಸಾನ್ ಸಂಘ, ಸಂವಾದ, ಸ್ವರಾಜ್ ನೆಮ್ಮದಿ ಸಂಘಟನೆಗಳು ಪಾಲ್ಗೊಂಡಿದ್ದವು.
 
ಡಾ.ಎಲೆ ಲಿಂಗರಾಜು, ಬಾಳೇಕಾಯಿ ನಾಗರಾಜು, ವಾರ್ತಾ ಇಲಾಖೆಯ ಅಧಿಕಾರಿ ಮುದ್ದುಮೋಹನ್, ಭಾರತೀಯ ಕಿಸಾನ್ ಸಂಘದ ಮುಖಂಡ ಪುಟ್ಟಸ್ವಾಮಿ, ಗಂಗಾಧರ್, ಪತ್ರಕರ್ತ ರಾಧಾಕೃಷ್ಣ ಭಡ್ತಿ, ಲಯನ್ ಸಂಸ್ಥೆಯ ಮಾಜಿ ಅಧ್ಯಕ್ಷ ಸುರೇಶ್ ಆಳ್ವ, ಬೆಂಗಳೂರು ಗಿರಿನಗರದ ಪೂರ್ಣ ಪ್ರಮತಿ ಶಾಲೆಯ ಶ್ರೀನಿವಾಸ್, ನವಚೇತನದ ಶ್ರೀನಿವಾಸಮೂರ್ತಿ, ದೂರದರ್ಶನ ವಾರ್ತಾವಾಚಕ ದೊಡ್ಡಿ ಶಿವರಾಂ, ನೆಮ್ಮದಿ ಕೇಂದ್ರದ ರಾಮು ಜೋಗಿಹಳ್ಳಿ, ಶ್ರೀನಿವಾಸ್ ರಾಜು, ಯಂಟಗಾನಹಳ್ಳಿ ಯೋಜನಾಧಿಕಾರಿ ಬಿ.ಮಧುಸೂದನ್ ಅವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.