ADVERTISEMENT

ಮಲಿನಗೊಂಡ ಚುಂಚಗಟ್ಟಕೆರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ತಲಘಟ್ಟಪುರ: ಸುತ್ತಮುತ್ತಲ ಕಟ್ಟಡಗಳ ಶೌಚಾಲಯದ ಹಾಗೂ ಕೊಳಚೆ ನೀರಿನಿಂದಾಗಿ ಇಲ್ಲಿಗೆ ಸಮೀಪದ ಚುಂಚಗಟ್ಟಕೆರೆ ಮಲಿನಗೊಂಡಿದೆ. ಕೆಲವು ವರ್ಷಗಳ ಹಿಂದೆ ಆಸುಪಾಸಿನ ಜನರಿಗೆ ಜೀವಜಲವಾಗಿದ್ದ ಕೆರೆಯ ನೀರು ಈಗ ಬಳಕೆಗೆ ಅಯೋಗ್ಯವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

20 ಎಕರೆ 31 ಗುಂಟೆ ಪ್ರದೇಶದಲ್ಲಿ ಈ ಕೆರೆ ಇದ್ದು, ಕೆರೆಯ ಕಾಲುವೆ ಹಾಗೂ ಸುತ್ತಮುತ್ತಲ ಪ್ರದೇಶಗಳು ಒತ್ತುವರಿಯಾಗಿವೆ. ಅರಣ್ಯ ಇಲಾಖೆಯವರು ಸಮೀಪದಲ್ಲಿ ನಾಮಫಲಕ ಹಾಕಿದ್ದಾರೆ. ಇದೊಂದು ಬಿಟ್ಟು ಕೆರೆಯ ಸಂರಕ್ಷಣೆಗೆ ಯಾವುದೇ ಕಾರ್ಯಗಳು ಆಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`90 ದಶಕದಲ್ಲಿ ಚುಂಚಗಟ್ಟ ಗ್ರಾಮಸ್ಥರು ಕುಡಿಯಲು, ವ್ಯವಸಾಯಕ್ಕೆ ಕೆರೆಯ ನೀರನ್ನೇ ಬಳಕೆ ಮಾಡುತ್ತಿದ್ದರು. 10 ವರ್ಷಗಳ ಹಿಂದಿನ ವರೆಗೂ ಕೊತ್ತನೂರು, ಅವಲಹಳ್ಳಿ, ಹರಿನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಕಾಡುಪ್ರಾಣಿಗಳು, ಪಕ್ಷಿಗಳು ಬೇಸಿಗೆ ಕಾಲದಲ್ಲಿ ನೀರು ಕುಡಿಯಲು ಇಲ್ಲಿಗೆ ಬರುತ್ತಿದ್ದವು. ಕೆರೆಗೆ ಸುತ್ತಮುತ್ತಲ ಕಟ್ಟಡಗಳ ಕೊಳಚೆ ನೀರು ಹಾಗೂ ರಾಸಾಯನಿಕ ಮಿಶ್ರಿತ ನೀರು ಸೇರಿದ್ದರಿಂದ ಪ್ರಾಣಿಗಳು ಈಗ ಬರುತ್ತಿಲ್ಲ~ ಎಂದು ಗ್ರಾಮಸ್ಥರು ದೂರಿದರು.

`ಕೆರೆ ಸುತ್ತಲಿನ ಪ್ರದೇಶಗಳಲ್ಲಿ ಹಲವಾರು ಬೃಹತ್ ಕಟ್ಟಡಗಳು, ಬಡಾವಣೆ ತಲೆ ಎತ್ತಿದ್ದು, ಇಲ್ಲಿನ ಶೌಚಾಲಯದ ಮತ್ತು ಮಲಿನ ನೀರು ಕೆರೆಗೆ ಸೇರುತ್ತಿದೆ. ರಾತ್ರಿ ವೇಳೆ ಪಾಲಿಕೆಯವರು ತ್ಯಾಜ್ಯ, ಕಟ್ಟಡಗಳ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ. ಕೆರೆ ಸಂರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಕೆರೆಯ ಹೂಳೆತ್ತಬೇಕು~ ಎಂದು ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಶೆಟ್ಟಿ ಆಗ್ರಹಿಸಿದರು.

`ಕೆರೆಯ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 2.50 ಕೋಟಿ ರೂಪಾಯಿ ಮಂಜೂರಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಂಡು ಕೆರೆಯನ್ನು ಸಂಪೂರ್ಣ ರಕ್ಷಣೆ ಮಾಡಲಾಗುವುದು~ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಶಶಿರೇಖಾಜಯರಾಮ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.